ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದಿಂದ ವಿವೇಕ ಜಾಗೃತಗೊಳ್ಳಲಿ: ಡಾ. ಮೋಹನ ಚಂದ್ರಗುತ್ತಿ

Last Updated 1 ಅಕ್ಟೋಬರ್ 2021, 4:42 IST
ಅಕ್ಷರ ಗಾತ್ರ

ಸೊರಬ: ಹಿಂದಿನಿಂದಲೂ ನಂಬಿಕೊಂಡು ಬಂದಿರುವ ಸಂಪ್ರದಾಯ ಹಾಗೂ ಆಚರಣೆಗಳು ಶಿಕ್ಷಣದ ಮೂಲಕ ವಿಸ್ತಾರವನ್ನು ಪಡೆದುಕೊಂಡಾಗ ಮಾತ್ರ ಪರಂಪರೆ ಉಳಿಯಲು ಸಾಧ್ಯ ಎಂದು ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಮೋಹನ ಚಂದ್ರಗುತ್ತಿ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಗುರುವಾರ ಹಮ್ಮಿಕೊಂಡಿದ್ದ ಪಾರಂಪರಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಎಂದಿಗೂ ಜ್ಞಾನ ಪಡೆಯುವ ದಾರಿಗಳನ್ನು ಬಿಟ್ಟುಕೊಡಬಾರದು. ಶಿಕ್ಷಣ ವಿವೇಕವನ್ನು ಜಾಗೃತಗೊಳಿಸಬೇಕು. ಹಸಿವು, ಮೂಢನಂಬಿಕೆ, ಅಂಧಶ್ರದ್ಧೆ ನಾಶಗೊಳ್ಳದಿದ್ದರೆ ನಾವು ಪಡೆದ ಶಿಕ್ಷಣ ಅಪೂರ್ಣವಾಗುತ್ತದೆ. ತಂದೆ–ತಾಯಿಗಳು ಮಕ್ಕಳ ಭವಿಷ್ಯಕ್ಕಾಗಿ ಶ್ರಮಿಸುತ್ತಿರವುದನ್ನು ಮನಗಂಡು ವಿದ್ಯಾರ್ಥಿಗಳು ಬದುಕು ರೂಪಿಸಿಕೊಳ್ಳುವ ಕಡೆಗೆ ಗಮನ ನೀಡಬೇಕು. ಕುಟುಂಬದ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದರೆ ಹೊಸ ಪ್ರಪಂಚ ನಮ್ಮ ಎದುರಿಗೆ ಗೋಚರಿಸಲು ಸಾಧ್ಯ’ ಎಂದು ತಿಳಿಸಿದರು.

ಇಲ್ಲಿನ ಪರಿಸರ ಹಾಗೂ ಪರಂಪರೆಯ ಬಗ್ಗೆ ಪಂಪ ತನ್ನ ಕಾವ್ಯದಲ್ಲಿ ಅಮೋಘವಾಗಿ ಚಿತ್ರಿಸಿದ್ದಾನೆ. ಭೀಷ್ಮ ಪರ್ವದಲ್ಲಿ ವರದಾ ನದಿಯ ಬಗ್ಗೆ ಉಲ್ಲೇಖಿಸಲಾಗಿದೆ. ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಗಟ್ಟಿತನ ಹೊಂದಿರುವ ಇಂತಹ ನೆಲದ ಬಗೆಗಿನ ಪ್ರೀತಿಯನ್ನು ಎಂದಿಗೂ ವಿದ್ಯಾರ್ಥಿಗಳು ಮರೆಯಬಾರದು ಎಂದು ಕಿವಿಮಾತು ಹೇಳಿದರು.

ಬನವಾಸಿಯ ಕದಂಬರ ಆಳ್ವಿಕೆಗೆ ಒಳಪಟ್ಟ 18 ಕಂಪಣ ರಾಜ್ಯಗಳಲ್ಲಿ ತಾಲ್ಲೂಕಿನ ಉದ್ರಿ, ಅಗಸನಹಳ್ಳಿ, ತವನಂದಿ, ಕುಪ್ಪಗಡ್ಡೆ ಹಾಗೂ ಮಾವಲಿ ಸಂಸ್ಥಾನಗಳಾಗಿದ್ದವು. 1902ರಲ್ಲಿ ಭಾರಂಗಿಯಲ್ಲಿ ದೊರೆತ ಶಾಸನ ಕನ್ನಡ ಮೊದಲ ಶಾಸನ ಹಲ್ಮಿಡಿಗಿಂತ ಮೊದಲೇ ಇತ್ತು ಎನ್ನುವ ಉಲ್ಲೇಖವಿದೆ. ಈ ಭಾಗದಲ್ಲಿ ಹಕ್ಕೊತ್ತಾಯ ಮಾಡಿದ್ದರೆ ಕನ್ನಡ ಭಾಷೆ ಹಾಗೂ ಸಂಸ್ಕೃತಿ ಬಿಂಬಿಸುವ ಭಾರಂಗಿ ಶಾಸನ ಕನ್ನಡದ ಮೊದಲ ಶಾಸನವಾಗಿ ದಾಖಲಾಗಿರುತ್ತಿತ್ತು ಎಂದು
ತಿಳಿಸಿದರು.

‘ಗ್ರಾಮೀಣ ಮಹಿಳೆಯರು ಹಾಡುವ ಲಾವಣಿ, ಗೀಗೀಪದಗಳು, ಕೋಲಾಟದ ಪದಗಳನ್ನು ನೀವು ಮೊಬೈಲ್‌ಗಳಲ್ಲಿ ದಾಖಲಿಸಿ ನಿಮ್ಮ ಉಪನ್ಯಾಸಕರಿಗೆ ನೀಡಿದರೆ ಉತ್ತಮ ಪುಸ್ತಕಗಳನ್ನಾಗಿ ಹೊರತರಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸೃಜನಾತ್ಮಕವಾಗಿ ತಮ್ಮನ್ನು ತೊಡಗಿಸಿಕೊಂಡರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ’ ಎಂದು ಸಲಹೆ ನೀಡಿದರು.

ಪ್ರಭಾರ ಪ್ರಾಂಶುಪಾಲರಾದ ಸೀಮಾ ಕೌಸರ್ ಅಧ್ಯಕ್ಷತೆ ವಹಿಸಿದ್ದರು. ಡಾ.ಶೈಲಜಾ, ರಾಜಪ್ಪ ಕೊಡಕಣಿ, ಬಸವರಾಜಪ್ಪ, ಸಂತೋಷ್, ಪ್ರೇಮಕುಮಾರಿ, ಶಂಕರನಾಯಕ್, ನಾಗರಾಜ ಕಾಗಿನಲ್ಲಿ, ವರ್ಷ ಕಾಸನಾಳೆ, ಅಣ್ಣಪ್ಪ, ಮಧುರಾ ಯಾದವ್, ಚಂದ್ರಪ್ಪ, ದಿಲೀಪ್, ಆನಂದ, ಮೋಹನಕುಮಾರ್, ವಸಂತಕುಮಾರ್, ಜಹೀರುದ್ದೀನ್, ಶೋಯಿಬ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT