ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ಪರ ಯೋಜನೆ ರೂಪಿಸಿದ್ದ ಬಂಗಾರಪ್ಪ

ಅಭಿನಂದನಾ ಸಮಾರಂಭದಲ್ಲಿ ಕೆಪಿಸಿಸಿ ಹಿಂದುಳಿದ ವರ್ಗದ ಅಧ್ಯಕ್ಷ ಮಧು ಬಂಗಾರಪ್ಪ ಶ್ಲಾಘನೆ
Last Updated 27 ಸೆಪ್ಟೆಂಬರ್ 2022, 4:22 IST
ಅಕ್ಷರ ಗಾತ್ರ

ಸೊರಬ: ‘ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಬಡವರ ಪರ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿ ‘ಬಡವರ ಬಂಧು’ ಎನಿಸಿಕೊಂಡಿದ್ದರು. ಆದರೆ, ಕ್ಷೇತ್ರದ ಜನರು ಅವರನ್ನು ಕೊನೆಯ ದಿನಗಳಲ್ಲಿ ಸೋಲಿಸಬಾರದಿತ್ತು ಎಂದು ಅವರ ಅಭಿಮಾನಿಗಳು ನೋವಿನಿಂದ ನೆನಪಿಸಿಕೊಳ್ಳುತ್ತಾರೆ’ ಎಂದು ಕೆಪಿಸಿಸಿ ಹಿಂದುಳಿದ ವರ್ಗದ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.

ಪಟ್ಟಣದ ಬಂಗಾರ ಧಾಮದ ಸಮೀಪ ತಾಲ್ಲೂಕು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮಧು ಬಂಗಾರಪ್ಪ ಅಭಿಮಾನಿಗಳು ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ಶ್ರಮಿಕ ವರ್ಗದ ಪರ ಕಾನೂನು ರೂಪಿಸಿ ಯೋಜನೆಗಳನ್ನು ಜಾರಿಗೊಳಿಸಿದ ಬಂಗಾರಪ್ಪ ಅವರಿಗೆ ಕೊನೆಯ ದಿನಗಳಲ್ಲಿ ರಾಜಕೀಯವಾಗಿ ಸೋಲಿಸಿದ್ದು ಅವರ ಅಭಿಮಾನಿಗಳಲ್ಲಿ ಬೇಸರವಿದೆ. ನಾನು ಪಕ್ಷದ ಪರ ರಾಜ್ಯ ಪ್ರವಾಸ ಕೈಗೊಂಡಾಗ ಈ ಬಗ್ಗೆ ಅವರ ಅಭಿಮಾನಿಗಳು ನೋವಿನಿಂದ ಹೇಳುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಶಾಸಕ ಕುಮಾರ್ ಬಂಗಾರಪ್ಪ ಮಾನವೀಯತೆ ಮರೆತು ವರ್ತಿಸುತ್ತಿದ್ದು, ಸಜ್ಜನ ಮತದಾರರನ್ನು ಹೊಂದಿರುವ ಕ್ಷೇತ್ರಕ್ಕೆ ಅವಮಾನ ಮಾಡುತ್ತಿದ್ದಾರೆ. ಕ್ಷೇತ್ರದ ಜನರು ಮನುಷ್ಯತ್ವ ಇಲ್ಲದ ವ್ಯಕ್ತಿಯನ್ನು ಆಯ್ಕೆ ಮಾಡಿದಾಗ ಇಂತಹ ದುಃಸ್ಥಿತಿ ಎದುರಾಗುತ್ತದೆ. ಕ್ಷೇತ್ರದ ಜನರಿಗೆ ಕುಮಾರ್
ಬಂಗಾರಪ್ಪ ಅವರಿಂದ ಅನ್ಯಾಯ ಆಗುತ್ತಿದೆ ಎನ್ನುವುದನ್ನು
ಮನಗಂಡು ತಂದೆ ಬಂಗಾರಪ್ಪ
ಅವರು, ರಾಜಕಾರಣಕ್ಕೆ ನನ್ನನ್ನು ಕರೆ ತಂದರು. ಕುಮಾರ್ ಬಂಗಾರಪ್ಪ ಸರ್ವಾಧಿಕಾರಿ ಧೋರಣೆಯಿಂದ
ಎರಡು ಅವಧಿಗೆ ಅಧಿಕಾರ ಕಳೆದುಕೊಂಡಿದ್ದರು. ನಾನು ಅನಾಥ, ದಿಕ್ಕಿಲ್ಲದವನು ಎಂದು ಜನರಿಂದ ಅನುಕಂಪ ಗಿಟ್ಟಿಸಿ ಅಧಿಕಾರ ಪಡೆದು ಈಗ ದುಂಡಾವರ್ತನೆ ನಡೆಸುತ್ತಿದ್ದಾರೆ’ ಎಂದು ದೂರಿದರು.

‘ಎಸ್.ಬಂಗಾರಪ್ಪ ಅವರ ಶಕ್ತಿ ತಿಳಿದ ಕಾಂಗ್ರೆಸ್ ಹೈಕಮಾಂಡ್, ನಾನು ಪಕ್ಷ ಸೇರಿ ವರ್ಷದೊಳಗೆ ಮೂರು ಪ್ರಮುಖ ಹುದ್ದೆಗಳನ್ನು ನೀಡಿದೆ. ರಾಜ್ಯದಲ್ಲಿ ಹಿಂದುಳಿದ ವರ್ಗದ ಶೇ 58ರಷ್ಟು ಮತದಾರರಿದ್ದಾರೆ. ಕಾಂಗ್ರೆಸ್ ಪರ ಹಿಂದುಳಿದ ವರ್ಗದ ಮತಗಳು ಬರುವಂತೆ ಸಂಘಟಿಸಲಾಗುವುದು’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರಿಂದ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರಿಗೆ
ಮಾತ್ರ ಅಚ್ಛೇ ದಿನ್ ಬಂದಿದೆ’
ಎಂದು ಜಿಲ್ಲಾ ಹಿಂದುಳಿದ ವರ್ಗದ ಅಧ್ಯಕ್ಷ ಇಕ್ಕೇರಿ ರಮೇಶ್ ಲೇವಡಿ ಮಾಡಿದರು.

ಸೊರಬ ಹಾಗೂ ಆನವಟ್ಟಿಯಿಂದ ಸಾವಿರಾರು ಬೈಕ್‍ಗಳಲ್ಲಿ ಬಂದ ಯುವಕರು ಪಟ್ಟಣದ ನಾರಾಯಣ ಗುರು ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ರ‍್ಯಾಲಿ ನಡೆಸಿದರು. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಮಧು ಬಂಗಾರಪ್ಪ ಅವರಿಗೆ ಅದ್ಧೂರಿ ಸ್ವಾಗತ ಕೋರಿದರು.

ತಾಲ್ಲೂಕು ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ, ಆನವಟ್ಟಿ ಬ್ಲಾಕ್ ಅಧ್ಯಕ್ಷ
ಆರ್.ಸಿ. ಪಾಟೀಲ್, ತಾಲ್ಲೂಕು
ಮಹಿಳಾ ಘಟಕದ ಅಧ್ಯಕ್ಷೆ, ಆನವಟ್ಟಿ ಘಟಕದ ಅಧ್ಯಕ್ಷೆ ಸುನೀತಾ, ವಿಶಾಲಾಕ್ಷಮ್ಮ, ಮುಖಂಡರಾದ ಕೆ.ಮಂಜುನಾಥ್, ಎಚ್.ಗಣಪತಿ, ಎಂ.ಡಿ. ಶೇಖರ್, ಕೆ.ವಿ.ಗೌಡ, ತಬಲಿ ಬಂಗಾರಪ್ಪ, ರಾಜೇಶ್ವರಿ, ತಾರಾ, ನಾಗರಾಜ್ ಚಿಕ್ಕಸವಿ, ರೇವಣಪ್ಪ ಟಿ.ಜಿ. ಕೊಪ್ಪ, ಸುನಿಲ ಗೌಡ, ಜೈಶೀಲಗೌಡ, ಸುರೇಶ್ ಬಿಳವಾಣಿ, ಉಮಾಪತಿ, ಹುಚ್ಚಪ್ಪ ಮಂಡಗಳಲೆ, ಶಿವಮೂರ್ತಿ, ವಿರೇಶ್ ಕೊಟಗಿ, ಕೆ.ಪಿ.ರುದ್ರಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT