ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ | ಮಿಕ್ಸಿಂಗ್ ಭೂತ: ಅಡಿಕೆಗೆ ‘ತಿರಸ್ಕಾರ’ದ ಭಯ

ಗುಣಮಟ್ಟ ಕಾಯ್ದುಕೊಳ್ಳುವಂತೆ ಬೆಳೆಗಾರರಿಗೆ ಮ್ಯಾಮ್ಕೋಸ್ ಪತ್ರ
Published 24 ಆಗಸ್ಟ್ 2024, 7:24 IST
Last Updated 24 ಆಗಸ್ಟ್ 2024, 7:24 IST
ಅಕ್ಷರ ಗಾತ್ರ

ಶಿವಮೊಗ್ಗ: ಮಾರಾಟಕ್ಕೆಂದು ಉತ್ತರ ಭಾರತಕ್ಕೆ ಕೊಂಡೊಯ್ದ ಅಡಿಕೆಯನ್ನು ಗುಣಮಟ್ಟದ ಕೊರತೆಯ ನೆಪ ಹೇಳಿ ಪಾನ್‌ ಮಸಾಲ ಹಾಗೂ ಗುಟ್ಕಾ ಕಂಪನಿಗಳು ಖರೀದಿಸದೇ ತಿರಸ್ಕರಿಸುತ್ತಿವೆ. ಇದರಿಂದ ರಾಜ್ಯದ ಅಡಿಕೆ ಮಾರಾಟ ಸಹಕಾರ ಸಂಸ್ಥೆಗಳು ಹಾಗೂ ಖಾಸಗಿ ವರ್ತಕರು ನಷ್ಟ ಅನುಭವಿಸುವಂತಾಗಿದೆ.

20 ದಿನಗಳ ಹಿಂದೆ ದೆಹಲಿಗೆ ಕಳುಹಿಸಿದ್ದ ಮೂರು ಲೋಡ್ ಅಡಿಕೆ ತಿರಸ್ಕೃತಗೊಂಡ ಕಾರಣ ಶಿವಮೊಗ್ಗದ ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿಯಮಿತ (ಮ್ಯಾಮ್ಕೋಸ್‌) ₹ 10.5 ಲಕ್ಷ ನಷ್ಟ ಅನುಭವಿಸಿದೆ. ಹೀಗಾಗಿ ಪೂರೈಕೆ ಮಾಡುವ ಅಡಿಕೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ತನ್ನ ವ್ಯಾಪ್ತಿಯ 33,000 ಅಡಿಕೆ ಬೆಳೆಗಾರರಿಗೆ ಮ್ಯಾಮ್ಕೋಸ್ ಪತ್ರ ಬರೆದಿದೆ. ತೀರ್ಥಹಳ್ಳಿಯ ಸಹ್ಯಾದ್ರಿ ವಿವಿಧೋದ್ದೇಶ ಅಡಿಕೆ ಬೆಳೆಗಾರರ ಮಾರಾಟ ಸಂಘವೂ ಬೆಳೆಗಾರರ ಗಮನ ಸೆಳೆಯಲು ಪತ್ರದ ಮೊರೆ ಹೋಗಿದೆ.

ಸಮಸ್ಯೆಗೆ ‘ಮಿಕ್ಸಿಂಗ್’ ಮೂಲ: ‘ಮಲೆನಾಡು ಹಾಗೂ ಬಯಲು ಸೀಮೆಯಲ್ಲಿ ಈ ಮೊದಲು ಆಡಿಕೆಯನ್ನು ಬೆಳೆಗಾರರೇ ಸಂಸ್ಕರಿಸಿ ಮಾರಾಟಕ್ಕೆ ತರುತ್ತಿದ್ದರು. ಈಚೆಗೆ ಮಧ್ಯವರ್ತಿಗಳಿಗೆ ಕೇಣಿ ಕೊಡುವ ಪರಿಪಾಠ ಹೆಚ್ಚಾಗಿದೆ. ಕೆಲವು ಕೇಣಿದಾರರು ಕಳಪೆ ಅಡಿಕೆಗೆ ಬಣ್ಣ, ಫಾಲಿಶ್ ಹಾಕಿ ಗುಣಮಟ್ಟದ ಅಡಿಕೆಯೊಂದಿಗೆ ಮಿಶ್ರಣ ಮಾಡುತ್ತಿದ್ದಾರೆ. ಇದು ಸಮಸ್ಯೆಯ ಮೂಲ’ ಎಂದು ಮ್ಯಾಮ್ಕೋಸ್ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಬರುವೆ ಹೇಳುತ್ತಾರೆ.

‘ಪೈಪೋಟಿ ಹಾಗೂ ಆಸೆಗೆ ಬಿದ್ದು ಕೇಣಿದಾರರು ಕ್ವಿಂಟಲ್ ಹಸಿ ಅಡಿಕೆಗೆ 13ರಿಂದ 13.5 ಕೆ.ಜಿ ಒಣ ಅಡಿಕೆ ಕೊಡುವುದಾಗಿ ಬೆಳೆಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಅಷ್ಟೊಂದು ಕೊಡಲು ಸಾಧ್ಯವಿಲ್ಲ. ವೈಜ್ಞಾನಿಕವಾಗಿ 11 ಕೆ.ಜಿ. ಅಡಿಕೆ ಮಾತ್ರ ಕೊಡಬಹುದು. ಆ ನಷ್ಟ ತಪ್ಪಿಸಿಕೊಳ್ಳಲು ಕೆಲವರು ಕಳಪೆ ಅಡಿಕೆ (ಸೆಕೆಂಡ್ಸ್) ಮಿಶ್ರಣ ಮಾಡಿ ಬೆಳೆಗಾರರಿಗೆ ಕೊಡುತ್ತಿದ್ದಾರೆ. ಹೀಗೆ ಮಿಶ್ರಣ ಆದ ಅಡಿಕೆಯನ್ನು ಸಹಕಾರ ಸಂಸ್ಥೆಗಳು ಹಾಗೂ ವರ್ತಕರಿಗೆ ಮಾರಾಟ ಮಾಡಲಾಗುತ್ತಿದೆ. ಆ ಅಡಿಕೆಯನ್ನು ಕಳುಹಿಸಿದರೆ ಪಾನ್‌ ಮಸಾಲ ಕಂಪೆನಿಗಳು ತಿರಸ್ಕರಿಸುತ್ತಿವೆ’ ಎಂದು ತಿಳಿಸಿದರು.

ಗುಣಮಟ್ಟಕ್ಕೆ ಒತ್ತು: ಈ ಮೊದಲು ಪಾನ್‌ಮಸಾಲ ಹಾಗೂ ಗುಟ್ಕಾ ಕಂಪೆನಿಗಳು ಅಡಿಕೆ ಗುಣಮಟ್ಟದ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, ಈಗ ಆ ಪರಿಸ್ಥಿತಿ ಇಲ್ಲ. ಅವರೂ ಗುಣಮಟ್ಟ ಪರೀಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ. ಅಡಿಕೆ ಕೃಷಿ ಉತ್ಪನ್ನ ಎಂಬುದನ್ನು ಮರೆತು ಕೆ.ಜಿ.ಗೆ ಇಷ್ಟೇ ಸಂಖ್ಯೆಯ ಅಡಿಕೆ ಹೋಳು ಇರಬೇಕು ಎಂದು ಹೇಳುತ್ತಿದ್ದಾರೆ. ಮಿಶ್ರಣ ಮಾಡಿದ ಅಡಿಕೆಗೆ ಆ ಗುಣಮಟ್ಟ ತಲುಪಲು ಆಗುತ್ತಿಲ್ಲ ಎಂಬುದು ಮ್ಯಾಮ್ಕೋಸ್ ಅಭಿಮತ.

ಲೋಡ್‌ಗೆ ₹ 3.5 ಲಕ್ಷ ನಷ್ಟ: ‘ಅಡಿಕೆಯನ್ನು ಶಿವಮೊಗ್ಗದಿಂದ ಉತ್ತರ ಭಾರತದ ಕಾನ್ಪುರ, ದೆಹಲಿ, ಇಂದೋರ್, ಜೈಪುರಕ್ಕೆ ಕಳುಹಿಸಲಾಗುತ್ತಿದೆ. ಹೀಗೆ ಕೊಂಡೊಯ್ದ ಅಡಿಕೆ ತಿರಸ್ಕೃತಗೊಂಡರೆ ಪ್ರತೀ ಲೋಡ್‌ಗೆ ₹ 3.5 ಲಕ್ಷ ನಷ್ಟವಾಗುತ್ತದೆ. ಶಿವಮೊಗ್ಗದ ಖಾಸಗಿ ವರ್ತಕರೊಬ್ಬರು ಈಚೆಗೆ ದೆಹಲಿಗೆ ಕಳುಹಿಸಿದ್ದ ಅಡಿಕೆಯಲ್ಲಿ 77 ಲೋಡ್ ತಿರಸ್ಕೃತಗೊಂಡಿತು. ವಾಪಸ್ ತಂದರೆ ನಷ್ಟ ಹೆಚ್ಚಲಿದೆ ಎಂಬ ಕಾರಣಕ್ಕೆ ಪ್ರತಿ ಕ್ವಿಂಟಲ್‌ಗೆ ₹ 55,000ಕ್ಕೆ ಖರೀದಿ ಮಾಡಿದ್ದ ಅಡಿಕೆಯನ್ನು ₹ 47,000ಕ್ಕೆ ಮಾರಾಟ ಮಾಡಿ ಬಂದರು. ಈ ಕಹಿ ಮ್ಯಾಮ್ಕೋಸ್ ಸೇರಿದಂತೆ ಬಹಳಷ್ಟು ಅಡಿಕೆ ಮಾರಾಟ ಸಂಸ್ಥೆಗಳಿಗೆ ಆಗಿದೆ’ ಎಂದು ಶ್ರೀಕಾಂತ್ ಬರುವೆ ಹೇಳುತ್ತಾರೆ.

ಅಡಿಕೆ ಮಾರುಕಟ್ಟೆಯ ಭವಿಷ್ಯಕ್ಕಾಗಿ ಈ ಮಿಕ್ಸಿಂಗ್ ವ್ಯವಸ್ಥೆಗೆ ಕಡಿವಾಣ ಹಾಕಬೇಕಿದೆ. ಬೆಳೆಗಾರರು ಗುಣಮಟ್ಟದ ಅಡಿಕೆ ಹಾಗೂ ಬಣ್ಣ ಫಾಲಿಶ್ ಹಾಕಿದ ಅಡಿಕೆ ಪ್ರತ್ಯೇಕವಾಗಿ ತರಲಿ
ಶ್ರೀಕಾಂತ್ ಬರುವೆ ವ್ಯವಸ್ಥಾಪಕ ನಿರ್ದೇಶಕ ಮ್ಯಾಮ್ಕೋಸ್ ಶಿವಮೊಗ್ಗ
ಕೆಲವು ಕೇಣಿದಾರರು ವ್ಯಾಪಾರಸ್ಥರು ತಾತ್ಕಾಲಿಕ ಲಾಭದ ಆಸೆಗೆ ರೈತರನ್ನು ವಂಚಿಸಿ ಕಳಪೆ ಗುಣಮಟ್ಟದ ಅಡಿಕೆ ಸಿದ್ಧಗೊಳಿಸುತ್ತಿದ್ದಾರೆ. ಹೀಗಾದಲ್ಲಿ ಅಡಿಕೆ ಉದ್ಯಮ ಹಾಳಾಗಲಿದೆ. ಆ ಬಗ್ಗೆ ರೈತರು ಎಚ್ಚರಿಕೆ ವಹಿಸಬೇಕು.
ಆರ್.ಎಂ.ಮಂಜುನಾಥಗೌಡ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ

ಗುಣಮಟ್ಟದ ಅಡಿಕೆ:

ಕ್ಲೀನಿಂಗ್‌ ಮೆಶಿನ್‌ಗೆ ಮೊರೆ ಗುಣಮಟ್ಟ ಕಾಯ್ದುಕೊಳ್ಳುವುದು ಅನಿವಾರ್ಯವಾದ ಕಾರಣ ಕ್ಲೀನಿಂಗ್ ಮೆಶಿನ್ ಮೂಲಕ ಅಡಿಕೆ ಖರೀದಿಸಲು ಮ್ಯಾಮ್ಕೋಸ್ ಸಿದ್ಧತೆ ನಡೆಸಿದೆ. ಈಗಾಗಲೇ ಚನ್ನಗಿರಿಯ ತುಮ್ಕೋಸ್‌ನಲ್ಲಿ ಇದು ಬಳಕೆಯಲ್ಲಿದೆ. ‘ಶಿವಮೊಗ್ಗ ಖರೀದಿ ಕೇಂದ್ರದಲ್ಲಿ ಈಗ ಹೊಸದಾಗಿ ಯಂತ್ರ ಅಳವಡಿಸಿದ್ದು ಸಾಗರ ತೀರ್ಥಹಳ್ಳಿ ಸೇರಿದಂತೆ ತನ್ನ 12 ಖರೀದಿ ಕೇಂದ್ರಗಳಲ್ಲೂ ಅಳವಡಿಕೆಗೆ ಸಿದ್ಧತೆ ನಡೆದಿದೆ. ಬೆಳೆಗಾರರು ತಂದ ಅಡಿಕೆ ಯಂತ್ರಕ್ಕೆ ಬಂದು ಅಲ್ಲಿಂದ ಚೀಲಕ್ಕೆ ಬರುತ್ತದೆ. ರೈತರ ಎದುರೇ ಸ್ವಚ್ಛತೆಯ ಪ್ರಕ್ರಿಯೆ ನಡೆಯಲಿದೆ’ ಎಂದು ಶ್ರೀಕಾಂತ್ ಬರುವೆ ಹೇಳುತ್ತಾರೆ.

ಬೆಲೆ ಏರಿಕೆಯ ಆಶಾಭಾವ
‘ಉತ್ತರ ಭಾರತದಲ್ಲಿ ಬಿಸಿಲ ಝಳದ ನಂತರ ಪ್ರವಾಹದ ಕಾರಣಕ್ಕೆ ಸುಮಾರು ಒಂದೂವರೆ ತಿಂಗಳು ಪಾನ್‌ ಮಸಾಲ ಹಾಗೂ ಗುಟ್ಕಾ ಕಂಪೆನಿಗಳು ಅಡಿಕೆ ಕ್ರಶಿಂಗ್ ಕಾರ್ಯ ಸ್ಥಗಿತಗೊಳಿಸಿದ್ದವು. ಹೀಗಾಗಿ ಕಳೆದ ವರ್ಷಕ್ಕಿಂತ ಈ ಹಂಗಾಮಿನಲ್ಲಿ ದರ ಕೊಂಚ ತಗ್ಗಿದೆ’ ಎಂದು ಮ್ಯಾಮ್ಕೋಸ್ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಬರುವೆ ಹೇಳುತ್ತಾರೆ. ಈಗ ಕ್ರಶಿಂಗ್ ಆರಂಭಿಸಿರುವುದರಿಂದ ಮತ್ತೆ ಬೆಲೆ ಏರಿಕೆಯಾಗಬಹುದು. ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ ಎಂಬ ಆಶಾಭಾವನೆ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT