ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶರಾವತಿ ತಟದಲ್ಲಿ ‘ಅಶಾಂತ ಸಂತ’ನ ಸ್ಮರಣೆ

ದ್ವೀಪ ಗ್ರಾಮ ತುಮರಿಯಲ್ಲಿ ಗರಿಗೆದರಿದ ಹ.ಮ. ಭಟ್ಟರ ನೆನಪಿನ ಹಬ್ಬದ ಸಂಭ್ರಮ
Published : 29 ಸೆಪ್ಟೆಂಬರ್ 2024, 6:47 IST
Last Updated : 29 ಸೆಪ್ಟೆಂಬರ್ 2024, 6:47 IST
ಫಾಲೋ ಮಾಡಿ
Comments

ಶಿವಮೊಗ್ಗ: ಶರಾವತಿ ಹಿನ್ನೀರ ಹಾದಿಯ ಪುಟ್ಟ ದ್ವೀಪ, ಸಾಗರ ತಾಲ್ಲೂಕಿನ ತುಮರಿಯಲ್ಲಿ ಶನಿವಾರದಿಂದ ಮೂರು ದಿನಗಳ ಕಾಲ ಹಲ್ಕೆರೆ ಮಂಜುನಾಥ ಭಟ್ಟರ (ಹ.ಮ.ಭಟ್ಟ) ನೆನಪಿನ ಹಬ್ಬ ಗರಿಗೆದರಿದೆ.

ಈ ಸಂಭ್ರಮದ ನೆಪದಲ್ಲಿ ಭಟ್ಟರ ಒಡನಾಡಿ ಶಾಂತವೇರಿ ಗೋಪಾಲಗೌಡರ ಸ್ಮರಣೆಗೆ ವೇದಿಕೆ ಒದಗಿದೆ. ನಾಡಿನ ಬೇರೆ ಬೇರೆ ಕಡೆಯಿಂದ ಬಂದಿರುವ ಸಹೃದಯರ ಬಳಗ ಸ್ಥಳೀಯರೊಂದಿಗೆ ಸೇರಿ, ‘ಶಾಂತವೇರಿಯ ಅಶಾಂತ ಸಂತ’ ಹೆಸರಲ್ಲಿ ಮಲೆನಾಡಿನಲ್ಲಿ ಬದುಕಿ ಹೋದ ಗೋಪಾಲಗೌಡರೆಂಬೋ ನಿಜ ಸಮಾಜವಾದಿಯ ನೆನೆಹಕ್ಕೆ ದನಿಗೂಡಿಸಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯೊಂದಿಗೆ ತುಮರಿಯ ಅಭಿವ್ಯಕ್ತಿ ಬಳಗ ಈ ವಿಶಿಷ್ಟ ಕಾರ್ಯಕ್ರಮಕ್ಕೆ ಕೈಜೋಡಿಸಿದೆ. ಮೂರು ದಿನಗಳ ಕಾಲ ಗೋಪಾಲಗೌಡರ ವಿಚಾರ, ಪ್ರಸ್ತುತತೆ, ಅವರ ಬದುಕಿನ ನೋಟದೊಂದಿಗೆ ಹಾಡು, ಹಸೆ, ನೃತ್ಯ, ನಾಟಕ ಪ್ರದರ್ಶನ, ಮಲೆನಾಡಿನ ಸವಿಯೂಟದ ಆತಿಥ್ಯ, ಪುಸ್ತಕಗಳ ಒಡನಾಟಕ್ಕೂ ಕಾರ್ಯಕ್ರಮ ವೇದಿಕೆ ಒದಗಿಸಿದೆ.

ಗೋಪಾಲಗೌಡರ ಸಮಾಜವಾದದ ಮೂಸೆಯಲ್ಲೇ ಅರಳಿದ ಹಿರಿಯರಾದ ಕಾಗೋಡು ತಿಮ್ಮಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ದುರಂತದ ಸಂಗತಿ:

‘ಶಾಂತವೇರಿ ಗೋಪಾಲಗೌಡರ ಸ್ಮರಣೆ ಕಾರ್ಯಕ್ರಮಕ್ಕೆ ಅವರ ಹೋರಾಟದಿಂದ ಲಾಭ ಪಡೆದ ಮಲೆನಾಡಿನ ಗೇಣಿದಾರರೇ ಬಂದಿಲ್ಲ. ಕಾರ್ಯಕ್ರಮದಲ್ಲಿ ಅವರೇ ಹೆಚ್ಚು ಜನರು ಇರಬೇಕಿತ್ತು. ಆದರೆ ಒಂದಷ್ಟು ಜಮೀನ್ದಾರರೇ ಇಲ್ಲಿ ಕಾಣಸಿಕ್ಕಿದ್ದಾರೆ. ಗೌಡರ ಭಾವಚಿತ್ರ ಇಟ್ಟುಕೊಂಡು ನಿತ್ಯ ಅವರನ್ನು ಸ್ಮರಣೆ ಮಾಡಿಕೊಳ್ಳಬೇಕಿದ್ದ ಗೇಣಿದಾರರು ಕಾರ್ಯಕ್ರಮಕ್ಕೆ ಬಾರದಿರುವುದು ದುರಂತದ ಸಂಗತಿ’ ಎಂದು ಕಾಗೋಡು ತಿಮ್ಮಪ್ಪ ಉದ್ಘಾಟನಾ ನುಡಿಯಲ್ಲಿ ಚಾಟಿ ಬೀಸಿದರು.

ಮಾಜಿ ಶಾಸಕಿ, ಪುತ್ತೂರಿನ ಶಕುಂತಲಾ ಶೆಟ್ಟಿ, ‘ತಮಗೆ ಗೋಪಾಲಗೌಡರ ಜೊತೆ ಒಡನಾಟ ಇಲ್ಲದಿದ್ದರೂ ಶಾಸನಸಭೆಯಲ್ಲಿ ಅಂದಿನ ಮುಖ್ಯಮಂತ್ರಿ ಆದಿಯಾಗಿ ಹಿರಿಯ ನಾಯಕರು ಗೌಡರ ಬಗ್ಗೆ ಆಡುತ್ತಿದ್ದ ಮಾತುಗಳಿಂದ ಅವರ ವ್ಯಕ್ತಿತ್ವ ಅರಿತಿದ್ದಾಗಿ ಹೇಳಿದರು. ಹಿಂದೆಲ್ಲ ಖಾದಿ, ಕಾವಿ ಹಾಗೂ ಖಾಕಿ ಧರಿಸಿ ಬಂದವರಿಗೆ ಸಮಾಜದಲ್ಲಿ ಬಹಳಷ್ಟು ಗೌರವ ಇತ್ತು. ಈಗ ಖಾದಿ ಹಾಕಿದವರು ಬಂದರೆ ಯಾರನ್ನೋ ಮುಳುಗಿಸಲು ಬಂದಿದ್ದಾರೆ ಎಂದು ಭಾವಿಸುವ ಪರಿಸ್ಥಿತಿ ಇದೆ. ದೇಶಕ್ಕೆ ಇಂದು ಗೋಪಾಲಗೌಡರಂತಹ ರಾಜಕಾರಣಿಗಳ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

‘ಕರ್ನಾಟಕದಲ್ಲಿ ಶಾಂತವೇರಿ ಗೋಪಾಲಗೌಡರ ಪ್ರಭಾವಕ್ಕೆ ಮೇರೆಯೇ ಇಲ್ಲ. ಇಲ್ಲಿನ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚರಿತ್ರೆಯಲ್ಲಿ ಉಳಿದಿರುವ ರಾಜಕಾರಣಿ ಗೋಪಾಲಗೌಡರು ಮಾತ್ರ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಹೇಳಿದರು.

ಪ್ರಾಮಾಣಿಕತೆ, ಜನರಿಗಾಗಿ ಏನನ್ನಾದರೂ ಮಾಡಲು ಹೊರಟ ರಾಜಕಾರಣ ಅವರಲ್ಲೊಂದು ಸಾಂಸ್ಕೃತಿಕ ಚೈತನ್ಯ ಮೂಡಿಸಿತ್ತು. ಹೀಗಾಗಿಯೇ ನಾಡಿನ ಅಗ್ರಗಣ್ಯ ಕವಿ, ಲೇಖಕರ ಮೂಲಕ ಕನ್ನಡದ ಸಾಂಸ್ಕೃತಿಕ ಲೋಕವನ್ನು ಆವರಿಸಿದ್ದರು. ಗೌಡರ ವ್ಯಕ್ತಿತ್ವವನ್ನು ಸಮಾಜದ ಮುಖ್ಯವಾಹಿನಿಗೆ ಕೊಂಡೊಯ್ದು ಇಂದಿನ ಯುವಜನರಿಗೆ ಪರಿಚಯ ಮಾಡಿಸಬೇಕಿದೆ ಎಂದು ಹೇಳಿದರು.

ಅಭಿವ್ಯಕ್ತಿ ಬಳಗದ ಕಾರ್ಯದರ್ಶಿ, ಹ.ಮ.ಭಟ್ಟ ಅವರ ಪುತ್ರ ಎಚ್.ಎಂ.ರಾಘವೇಂದ್ರ ಕಾರ್ಯಕ್ರಮದ ಕುರಿತು ಆಶಯ ಹಂಚಿಕೊಂಡರು.

ಕೇರಳದ ಕುಂದ್ರ ಕ್ಷೇತ್ರದ ಶಾಸಕ ಪಿ.ಸಿ. ವಿಷ್ಣುನಾದ್, ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಐನಕೈ, ಮಾಜಿ ಶಾಸಕ ಮಹಿಮ ಪಟೇಲ್, ಕಾಂಗ್ರೆಸ್‌ ಮುಖಂಡ ಬಿ.ಆರ್‌. ಜಯಂತ್‌, ಅಭಿವ್ಯಕ್ತಿ ಬಳಗದ ಅಧ್ಯಕ್ಷ ಲೋಕಪಾಲ ಜೈನ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕಿ ಪಿ. ಚಂದ್ರಿಕಾ, ರಿಜಿಸ್ಟ್ರಾರ್ ಎನ್. ಕರಿಯಪ್ಪ ಇದ್ದರು.

ಕೇರಳದಲ್ಲಿ ಶಾಂತವೇರಿ ಸಂತನ ನೆರಳು

ವೇದಿಕೆಯಲ್ಲಿದ್ದ ಕೇರಳದ ಕಾಂಗ್ರೆಸ್ ಶಾಸಕ ವಿಷ್ಣುನಾದ್ (ಹ.ಮ.ಭಟ್ಟ ಅವರ ಅಳಿಯ) ಮೂರನೇ ಬಾರಿಗೆ ಶಾಸಕರಾಗಿದ್ದಾರೆ. ಶಾಂತವೇರಿ ಗೋಪಾಲಗೌಡರು ಎರಡು ಬಾರಿ ಶಾಸಕರಾದರೂ ಅವರ ಬಳಿ ಸ್ವಂತ ಮನೆ ಇರಲಿಲ್ಲ. ಅದೇ ರೀತಿ ವಿಷ್ಣು ಅವರ ಬಳಿಯೂ ಸ್ವಂತ ಮನೆ ಇಲ್ಲ. ಅವರು ಈಗಲೂ ರೈಲು ಹಾಗೂ ಬಸ್‌ನಲ್ಲಿ ಸಾಮಾನ್ಯರಂತೆ ಓಡಾಟ ನಡೆಸುತ್ತಿದ್ದಾರೆ ಎಂದು ಸಂಘಟಕರು ಹೇಳಿದಾಗ ಸಭಾಂಗಣದಲ್ಲಿ ಚಪ್ಪಾಳೆ ಪ್ರತಿಧ್ವನಿಸಿತು. ಗೋಪಾಲಗೌಡರ ಪ್ರಾಮಾಣಿಕತೆ ಸರಳತೆ ಹಾಗೂ ಬದ್ಧತೆಯನ್ನು ತಮ್ಮ ಭಾಷಣದಲ್ಲಿ ವಿಷ್ಣುನಾದ್ ಕೊಂಡಾಡಿದರು.

ಗೋಪಾಲಗೌಡರ ರಾಜಕಾರಣ ಇಂದು ಸಾಧ್ಯವಿಲ್ಲ: ಬೇಳೂರು

‘ಇವತ್ತು ಶಾಂತವೇರಿ ಗೋಪಾಲಗೌಡರ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಇವತ್ತಿನ ಪೀಳಿಗೆ ನಡುವೆ ಅವರ ರೀತಿ ನೈಜ ರಾಜಕಾರಣ ಸಾಧ್ಯವಿಲ್ಲ. ರಾಜಕಾರಣ ಇಂದು ದುಡ್ಡಿದ್ದವರಿಗೆ ಮಾತ್ರ’ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಬೇಸರ ವ್ಯಕ್ತಪಡಿಸಿದರು. ‘ಎಲ್ಲಿಂದಲೋ ಹಣ ತಂದು ರಾಜಕೀಯಕ್ಕೆ ಬರುವ ಪುಡಾರಿಗೆ ಇಲ್ಲವೇ ರಿಯಲ್‌ ಎಸ್ಟೇಟ್ ಉದ್ಯಮಿಗೆ ಸಮಾಜವಾದ ಅಂದರೆ ಏನು ಅರ್ಥವಾಗುತ್ತದೆ’ ಎಂದು ಪ್ರಶ್ನಿಸಿದ ಬೇಳೂರು ‘ಈಗ ಜನ ಬಲದೊಂದಿಗೆ ಹಣ ಬಲವೂ ಮುಖ್ಯ’ ಎಂದರು. ‘ಬದಲಾದ ಕಾಲಘಟ್ಟದಲ್ಲಿ ಜನಪರವಾಗಿ ಕೆಲಸ ಮಾಡುವ ಆಸೆ ನಮಗೂ ಇದೆ. ಆದರೆ ಅದನ್ನು ಮಾಡುವುದು ಬಹಳ ಕಷ್ಟವಿದೆ’ ಎಂದು ಹೇಳಿದರು. ತುಮರಿ ಪಂಚಾಯಿತಿ ಬುದ್ಧಿವಂತರ ನಾಡು ಎಂದು ಶ್ಲಾಘಿಸಿದ ಗೋಪಾಲಕೃಷ್ಣ ಶಾಂತವೇರಿ ಗೋಪಾಲಗೌಡರ ಹೆಸರಿನ ಗ್ರಾಮದ ರಂಗಮಂದಿರದ ಅಭಿವೃದ್ಧಿಗೆ ₹ 25 ಲಕ್ಷ ಅನುದಾನ ಕೊಡುವುದಾಗಿ ಘೋಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT