ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪರಿಸರದ ಹೆಸರಿನಲ್ಲಿ ಎಲ್ಲದಕ್ಕೂ ಅಡ್ಡಿ ಸಲ್ಲ: ಹಾಲಪ್ಪ

Published : 29 ಸೆಪ್ಟೆಂಬರ್ 2019, 19:41 IST
ಫಾಲೋ ಮಾಡಿ
Comments

ಸಾಗರ: ಪರಿಸರದ ಹೆಸರಿನಲ್ಲಿ ಅಭಿವೃದ್ಧಿ ಯೋಜನೆ, ಪ್ರವಾಸೋದ್ಯಮ ಸೇರಿ ಎಲ್ಲದಕ್ಕೂ ಅಡ್ಡಿಪಡಿಸುವುದು ಸರಿಯಲ್ಲ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಹೇಳಿದರು.

ಇಲ್ಲಿನ ಮಲೆನಾಡು ಸಿರಿ ಸಭಾಂಗಣದಲ್ಲಿ ತಾಲ್ಲೂಕು ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ‘ನಮ್ಮ ಕನಸಿನ ಸಾಗರ’ ಚಿಂತನ ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರ ಪ್ರೇಮಿಗಳು ಅಭಿವೃದ್ಧಿಯ ಪರವಾಗಿದ್ದಾರೆ. ಆದರೆ ಕೆಲವು ಪರಿಸರವಾದಿ (ವ್ಯಾಧಿ)ಗಳು ಅಭಿವೃದ್ಧಿಗೆ ಅಡ್ಡಿಯಾಗಿದ್ದಾರೆ. ಇಂತಹವರಿಂದಾಗಿ ಹಲವು ಅಭಿವೃದ್ಧಿ ಯೋಜನೆಗಳು ವರ್ಷಗಟ್ಟಲೆ ಮುಂದಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಲೆನಾಡು ಪ್ರದೇಶದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ಇಲ್ಲಿನ ಪರಿಸರವನ್ನು ಕಾಪಾಡಿಕೊಂಡೇ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಒತ್ತು ನೀಡಲಾಗುವುದು. ಈ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಜೋಗ ಜಲಪಾತ ಅಭಿವೃದ್ಧಿಯಾಗಬೇಕು ಎಂಬ ಚರ್ಚೆ ಹಲವು ವರ್ಷಗಳಿಂದ ನಡೆಯುತ್ತಿದೆ. ಆದರೆ ಈ ನಿಟ್ಟಿನಲ್ಲಿ ಯಾವುದೇ ಕೆಲಸ ಆಗಿಲ್ಲ. ಜೋಗದಲ್ಲಿ ನಿಂತಿರುವ ಈಜುಕೊಳ, ಸಂಗೀತ ಕಾರಂಜಿ ಪುನರಾರಂಭ, ಜಲಪಾತವನ್ನು ಹತ್ತಿರದಿಂದ ವೀಕ್ಷಿಸಲು ರೋಪ್‌ವೇ ನಿರ್ಮಾಣ ಕಾಮಗಾರಿಯನ್ನು ಶೀಘ್ರವಾಗಿ ಕೈಗೊಳ್ಳುವಂತೆ ಪ್ರವಾಸೋದ್ಯಮ ಟಾಸ್ಕ್‌ಫೋರ್ಸ್‌ಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ನಗರದ ಗಣಪತಿ ಕೆರೆ ಪಕ್ಕದಲ್ಲಿರುವ ಚಂದ್ರಮಾವಿನಕೊಪ್ಪಲು ಪ್ರದೇಶದ ಅಭಿವೃದ್ಧಿಗೆ ರಾಜ್ಯ ಸರ್ಕಾರ ₹ 5 ಕೋಟಿ ಮಂಜೂರು ಮಾಡಿದೆ. ಇಲ್ಲಿ ಉದ್ಯಾನವನ, ಮಿನಿ ಥಿಯೇಟರ್ ನಿರ್ಮಿಸುವ ಯೋಜನೆ ಇದೆ ಎಂದು ಹೇಳಿದರು.

ರಾಜ್ಯ ಟೂರಿಸಂ ಟಾಸ್ಕ್‌ಫೋರ್ಸ್‌ ಸದಸ್ಯ ಲಕ್ಷ್ಮೀನಾರಾಯಣ ಕಾಶಿ, ‘ಜೋಗ ಜಲಪಾತದ ಅಭಿವೃದ್ಧಿಗೆ ಕರ್ನಾಟಕ ವಿದ್ಯುತ್ ನಿಗಮದಿಂದ ₹10 ಕೋಟಿ, ರಾಜ್ಯ ಸರ್ಕಾರದಿಂದ ₹ 10 ಕೋಟಿ ಬಿಡುಗಡೆಯಾಗಿದೆ. ಕಾಲಮಿತಿಯೊಳಗೆ ಅಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು‘ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT