ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನಿಕತೆಯಿಂದ ಜನಪದೀಯ ಕಲ್ಪನೆಗೆ ಪೆಟ್ಟು

ನಿವೃತ್ತ ಪ್ರಾಂಶುಪಾಲ ಡಾ.ಬಿ. ಗಣಪತಿ ವಿಷಾದ
Last Updated 12 ಡಿಸೆಂಬರ್ 2022, 6:02 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಆಧುನಿಕತೆ ಬೆಳೆದಂತೆ ಸಂಪ್ರದಾಯವು ಕೇವಲ ತೋರಿಕೆಗೆ ಉಳಿದಿದೆ. ದೀಪಾವಳಿ ಗ್ರಾಮೀಣ ಬದುಕಿನ ಪಾಠವಾಗಿದ್ದರೂ ಈಗ ಅದನ್ನು ಹೈಜಾಕ್‌ ಮಾಡುವ ಪ್ರವೃತ್ತಿ ಬೆಳೆಯುತ್ತಿದೆ ಎಂದು ನಿವೃತ್ತ ಪ್ರಾಂಶುಪಾಲ ಡಾ.ಬಿ. ಗಣಪತಿ ತಿಳಿಸಿದರು.

ಪಟ್ಟಣದ ಬಂಟರ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಶನಿವಾರ ಆಯೋಜಿಸಿದ್ದ ನೆಂಪೆ ಚಂದ್ರಪ್ಪ ಗೌಡ ದತ್ತಿ ಜಾನಪದ ಕಲೆಗಳ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಗುವಳಿ ಜಮೀನು ಹಚ್ಚಹಸಿರಿನಿಂದ ಕಂಗೊಳಿಸುವ ಸಮಯದಲ್ಲಿ ದೀಪಾವಳಿಯ ಸಂಭ್ರಮ ಕಳೆಗಟ್ಟುತ್ತದೆ. ಬೂರೆ, ಸ್ನಾನ, ಪಾಡ್ಯ, ಕರಿ, ಗೋಪೂಜೆ, ಬೆರಕೆ ಸೊಪ್ಪು ಸಂಗ್ರಹ, ಕೃಷಿ ಪರಿಕರಗಳ ದುರಸ್ತಿ ಪ್ರಮುಖವಾಗಿದೆ. ಇದು ಭೂಮಿಯ ಪಾಠವನ್ನು ವಿಶೇಷವಾಗಿ ರೈತ ಕುಟುಂಬಕ್ಕೆ ತಿಳಿಸಿಕೊಡುವ ಆಚರಣೆ. ಭೂಮಿ ಹುಣ್ಣಿಮೆಯೂ ಇದರ ಒಂದು ಭಾಗ. ಹಣತೆಗಳಿಂದ ಮೂಡುವ ದೀಪ ಜ್ಞಾನದ ಸಂಕೇತ ಎಂದು ಹೇಳಿದರು.

ಹಾಲು ಮರದಡಿ ಅಂಟಿಕೆ-ಪಂಟಿಗೆ ಹುಟ್ಟುವುದು ವಾಡಿಕೆ. ಈಚೆಗೆ ದೇವಸ್ಥಾನಗಳಿಂದ ಜ್ಯೋತಿ ತರುವ ಕಲ್ಪನೆ ಬೆಳೆದಿದೆ. ಇದರ ಮೂಲ ಆಶಯ ಔತ್ಲ (ಔತಣ ಕೂಟ). ಹಸಿವಿನ ಬಯಕೆ ತೀರಿಸಿಕೊಳ್ಳಲು ಊರಿನವರೆಲ್ಲ ಸೇರಿ ಇದನ್ನು ಆಚರಿಸುತ್ತಿದ್ದರು. ವಿಭಿನ್ನ ಸಮುದಾಯಗಳ ನಡುವೆ ಈ ಕಲೆ ಭಿನ್ನತೆ ಹೊಂದಿದೆ. ಅಂಟಿಕೆ-ಪಂಟಿಕೆ ಕೇವಲ ಪ್ರದರ್ಶನ ಕಲೆಯಾಗಿದ್ದು, ಧಾರ್ಮಿಕ ಆಯಾಮ ನೀಡುವುದು ತಪ್ಪು ಎಂದು ಜಾನಪದ ತಜ್ಞ, ಪತ್ರಕರ್ತ ಶಿವಾನಂದ ಕರ್ಕಿ ಹೇಳಿದರು.

ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ ಜವಳಿ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ಅಧ್ಯಕ್ಷ ಟಿ.ಕೆ. ರಮೇಶ್‌ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ದತ್ತಿ ದಾನಿ ನೆಂಪೆ ದೇವರಾಜ್‌ ಮಾತನಾಡಿದರು. ಮಲೆನಾಡಿನ ಸಂಪ್ರದಾಯಿಕ ಅಂಟಿಕೆ ಪಂಟಿಗೆ ಜಾನಪದ ಕಲಾವಿದರು ಹಾಡುಗಳನ್ನು ಹೇಳುವ ಮೂಲಕ ಜ್ಯೋತಿಯನ್ನು ಮೆರವಣಿಗೆಯಲ್ಲಿ ಸಭಾ ಕಾರ್ಯಕ್ರಮಕ್ಕೆ ತಂದರು. ಸಭೆಯಲ್ಲಿದ್ದ ಮಹಿಳೆಯರು ಜ್ಯೋತಿಗೆ ಎಣ್ಣೆ ಎರೆದು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT