ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗನ ಕಾಯಿಲೆ: ನಿರ್ಲಕ್ಷ್ಯ ಬೇಡ, ತಕ್ಷಣ ಚಿಕಿತ್ಸೆ ಪಡೆಯಿರಿ

ಕೆಎಫ್‍ಡಿ ಬಾಧಿತ ಪ್ರದೇಶದ ಜನರಿಗೆ ಸಚಿವ ಮಧು ಬಂಗಾರಪ್ಪ ಮನವಿ
Published 9 ಫೆಬ್ರುವರಿ 2024, 16:34 IST
Last Updated 9 ಫೆಬ್ರುವರಿ 2024, 16:34 IST
ಅಕ್ಷರ ಗಾತ್ರ

ಶಿವಮೊಗ್ಗ: ಮಂಗನ ಕಾಯಿಲೆ ಬಾಧಿತ ಪ್ರದೇಶದ ಜನರು ಜ್ವರದಂತಹ ಪ್ರಕರಣಗಳನ್ನು ನಿರ್ಲಕ್ಷ್ಯ ಮಾಡದೇ, ತುರ್ತಾಗಿ ಚಿಕಿತ್ಸೆ ಪಡೆಯಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಚಿವ ಮಧು ಬಂಗಾರಪ್ಪ ಮನವಿ ಮಾಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗನ ಕಾಯಿಲೆ (ಕೆಎಫ್‍ಡಿ) ಕುರಿತಾದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾಯಿಲೆ ಬಗ್ಗೆ ಗಾಬರಿ ಬೇಡ. ಆದರೆ ಜ್ವರ, ತಲೆನೋವು, ಸ್ನಾಯುಗಳ ಸೆಳೆತದಂತಹ ಲಕ್ಷಣ ಕಾಣಿಸಿಕೊಂಡರೆ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಆರಂಭದಲ್ಲೇ ರೋಗ ಲಕ್ಷಣಗಳಿಗೆ ಚಿಕಿತ್ಸೆ ಪಡೆದಲ್ಲಿ ಸಂಪೂರ್ಣ ಗುಣಮುಖರಾಗಲು ಸಾಧ್ಯವಿದೆ ಎಂದರು.

ಕೆಎಫ್‌ಡಿ ಬಾಧಿತ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರು ನಿಯಮಿತವಾಗಿ ಮನೆ ಮನೆಗೆ ಭೇಟಿ ನೀಡಿ ಜ್ವರ ಪ್ರಕರಣಗಳ ಪತ್ತೆ ಹಚ್ಚುವ ಕೆಲಸ ಮಾಡಬೇಕು ಎಂದರು.

ಡಿಎಚ್‍ಒ ಡಾ.ರಾಜೇಶ್ ಸುರಗಿಹಳ್ಳಿ ಮಾತನಾಡಿ, ಅರಣ್ಯ ಭಾಗದಲ್ಲಿ ನೆಲೆಸಿರುವವರು ಉಣ್ಣೆ ಕಡಿತದಿಂದ ರಕ್ಷಿಸಿಕೊಳ್ಳಲು ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುವ ಡಿಇಪಿಎ ತೈಲ ಹಚ್ಚಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಕೆಎಫ್‌ಡಿ 25 ಪಾಸಿಟಿವ್ ಪ್ರಕರಣ ಇದ್ದು, ಯುವತಿಯೊಬ್ಬರು ಸಾವಿಗೀಡಾಗಿದ್ದಾರೆ. ಕಾಯಿಲೆ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಇತರೆ ಇಲಾಖೆಗಳ ಸಮನ್ವಯದೊಂದಿಗೆ ಕೈಗೊಳ್ಳಲಾಗುತ್ತಿದೆ ಎಂದರು.

ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಕೆಎಫ್‍ಡಿಗೆ ಲಸಿಕೆ ಅತ್ಯಗತ್ಯವಾಗಿ ಬೇಕು. ಮುಂದೆ ಉಷ್ಣತೆ ಹೆಚ್ಚುತ್ತಿದ್ದಂತೆ ಸೋಂಕು ಹೆಚ್ಚುತ್ತದೆ. ಅದನ್ನು ಊಹಿಸಲೂ ಕಷ್ಟ. ಮಲೆನಾಡು ಭಾಗದಲ್ಲಿ ಕೆಎಫ್‍ಡಿ ಬಗ್ಗೆ ಕೋವಿಡ್‍ಗಿಂತ ಹೆಚ್ಚು ಭಯ ಇದೆ. ಆರೋಗ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಲಸಿಕೆ ನೀಡಬೇಕು ಎಂದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಕೇವಲ ಆರೋಗ್ಯ ಇಲಾಖೆ ಮಾತ್ರವಲ್ಲ, ಪಶುಪಾಲನೆ, ಅರಣ್ಯ, ಗ್ರಾಮೀಣಾಭಿವೃದ್ದಿ, ಕಂದಾಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಶಿಕ್ಷಣ ಇಲಾಖೆಗಳು ಸಮನ್ವಯದೊಂದಿಗೆ ಕೆಎಫ್‍ಡಿ ನಿಯಂತ್ರಣದಲ್ಲಿ ಕಾರ್ಯನಿರತರಾಗಬೇಕು ಎಂದು ಸೂಚಿಸಿದರು.
 
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ, ಡಿಸಿಎಫ್‌ಗಳಾದ ಇ. ಶಿವಶಂಕರ್, ಪ್ರಸನ್ನಕೃಷ್ಣ ಪಟಗಾರ, ಎಸ್ಪಿ ಮಿಥುನ್ ಕುಮಾರ್, ವಿಡಿಎಲ್ ಅಧಿಕಾರಿ ಡಾ.ಹರ್ಷವರ್ಧನ್, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಶಿವಯೋಗಿ ಎಲಿ ತಾಲ್ಲೂಕು ವೈದ್ಯಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಕೆಎಫ್‌ಡಿ ಬಾಧಿತ ಪ್ರದೇಶಗಳಲ್ಲಿ ಇನ್ನು 2-3 ತಿಂಗಳು ಕಾಲ ಆಂಬುಲೆನ್ಸ್ ಸೇರಿದಂತೆ ಅಗತ್ಯ ವಾಹನ ಸೇವೆ ಒದಗಿಸಿ ಜ್ವರದಂತಹ ಪ್ರಕರಣ ಶೀಘ್ರವಾಗಿ ಉಪಚರಿಸಲು ಅನುಕೂಲ ಮಾಡಿಕೊಡಿ
ಆರಗ ಜ್ಞಾನೇಂದ್ರ ತೀರ್ಥಹಳ್ಳಿ ಶಾಸಕ
ಕೆಎಫ್‌ಡಿ ಬಾಧಿತ ಪ್ರದೇಶದಲ್ಲಿ ಜನರಿಗೆ ಹೆಚ್ಚಿನ ಸಹಾಯ ಅಗತ್ಯವಿದ್ದಲ್ಲಿ ಡಿಎಚ್‍ಒ ಕಚೇರಿ ಹೆಲ್ಪ್‌ಲೈನ್‌ ಸಂಖ್ಯೆ: 08182-222382 ಕರೆ ಮಾಡಿ ಆಂಬುಲೆನ್ಸ್ ಸೇರಿದಂತೆ ಅಗತ್ಯ ಸೇವೆ ಪಡೆಯಬಹುದು
ಗುರುದತ್ತ ಹೆಗಡೆ ಶಿವಮೊಗ್ಗ ಜಿಲ್ಲಾಧಿಕಾರಿ
ಕೆಎಫ್‍ಡಿ ಬಗ್ಗೆ ಅರಿವು ಮೂಡಿಸಲು ಪ್ರತಿ ಗ್ರಾಮ ಪಂಚಾಯಿತಿ ಬಸ್‍ ನಿಲ್ದಾಣಗಳಲ್ಲಿ ಜನರಿಗೆ ಕಾಣುವಂತೆ ಪೋಸ್ಟರ್‌ಗಳನ್ನು ಅಂಟಿಸುವ ಜೊತೆಗೆ ಕರಪತ್ರಗಳನ್ನು ವಿತರಿಸಲು ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಿ
ಮಧು ಬಂಗಾರಪ್ಪ ಜಿಲ್ಲಾ ಉಸ್ತುವಾರಿ ಸಚಿವ

ಪರಿಹಾರ ಕೊಡಿಸಲು ಬದ್ಧ: ಮಧು ಬಂಗಾರಪ್ಪ

ಕೋವಿಡ್ ಸಂತ್ರಸ್ತರ ರೀತಿಯಲ್ಲಿಯೇ ಕೆಎಫ್‌ಡಿಯಿಂದ ಸಾವಿಗೀಡಾದವರ ಕುಟುಂಬದವರಿಗೂ ಪರಿಹಾರ ಕೊಡಿಸಲು ಬದ್ಧನಿದ್ದೇನೆ. ಈ ಬಗ್ಗೆ ಫೆ.12ರಿಂದ ಆರಂಭವಾಗುವ ವಿಧಾನಮಂಡಲದ ಅಧಿವೇಶನದಲ್ಲಿ ದನಿ ಎತ್ತಿ ಸರ್ಕಾರದಿಂದ ಈ ಸವಲತ್ತು ಕೊಡಿಸುವುದಾಗಿ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು. ಕೆಎಫ್‌ಡಿ ಬಾಧಿತರು ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರವಲ್ಲ ಮಣಿಪಾಲ್‌ನಲ್ಲಿ ಚಿಕಿತ್ಸೆ ಪಡೆದರೂ ಅದು ಉಚಿತವಾಗಿರುತ್ತದೆ. ರೋಗಿಗಳನ್ನು ಆಸ್ಪತ್ರೆಗೆ ಕಳುಹಿಸಿಕೊಡಲು (ಮಣಿಪಾಲ್‌ಗೆ ಕರೆದೊಯ್ದರೂ) ಆಂಬುಲೆನ್ಸ್ ಸೇವೆ ಉಚಿತವಾಗಿರುತ್ತದೆ ಎಂದು ಡಿಎಚ್‌ಒ ಡಾ.ರಾಜೇಶ ಸುರಗಿಹಳ್ಳಿ ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಸಭೆ ಫೆ.13 14ಕ್ಕೆ

ಕೆಎಫ್‍ಡಿ (ಮಂಗನ ಕಾಯಿಲೆ) ಶಾಶ್ವತ ಪರಿಹಾರ ಹಾಗೂ ಲಸಿಕೆ ಬಗ್ಗೆ ಚರ್ಚಿಸಲು ಏಪ್ರಿಲ್ 13 ಮತ್ತು 14 ರಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ಸಭೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಭೆಯಲ್ಲಿ ತಿಳಿಸಿದರು. ಶಿವಮೊಗ್ಗ ಜಿಲ್ಲೆಯ ಆರೋಗ್ಯ ಇಲಾಖೆ ಅಧಿಕಾರಿಗಳು ತಜ್ಞರ ತಂಡ ಹಾಗೂ ಜನಪ್ರತಿನಿಧಿಗಳು ಆರೋಗ್ಯ ಸಚಿವರೊಂದಿಗೆ ಎರಡು ಹಂತದ ಸಭೆಯನ್ನು ನಡೆಸಲು ಅವಕಾಶ ಕಲ್ಪಿಸಲಾಗುತ್ತಿದೆ. ಕೆಎಫ್‌ಡಿ ಚಿಕಿತ್ಸೆಗೆ ತುರ್ತು ಕ್ರಮ ವಿಶೇಷ ಅನುದಾನ ಬಾಧಿತ ಪ್ರದೇಶ ಆಶಾ ಕಾರ್ಯಕರ್ತೆಯರು ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ವಿಶೇಷ ಭತ್ಯೆ ಕಲ್ಪಿಸುವುದು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಬಗ್ಗೆಯೂ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT