ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕವಿಶೈಲ’ಕ್ಕೆ ಒಂದು ತಿಂಗಳಲ್ಲಿ 40 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಭೇಟಿ

ಇಂದು ಕುವೆಂಪು ಜನ್ಮದಿನ; ಕುಪ್ಪಳಿಗೆ ಹೆಚ್ಚಿದ ಶಾಲಾ ವಿದ್ಯಾರ್ಥಿಗಳ ಪ್ರವಾಸ
Last Updated 29 ಡಿಸೆಂಬರ್ 2022, 5:30 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ರಾಜ್ಯದ‌‌ಲ್ಲಿ ಈ ವರ್ಷ ಶಾಲಾ ವಿದ್ಯಾರ್ಥಿಗಳ ಪ್ರವಾಸ ಹೆಚ್ಚಿದೆ. ಹೆಚ್ಚಿನ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಆಯ್ಕೆ ತಾಲ್ಲೂಕಿನ ಕುಪ್ಪಳಿಯ ‘ಕವಿಶೈಲ’. ಡಿಸೆಂಬರ್ ತಿಂಗಳೊಂದರಲ್ಲೇ 40,000ಕ್ಕೂ ‌ಹೆಚ್ಚು ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡಿದ್ದಾರೆ.

ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಮನೆ, ಕವಿಶೈಲದ ಪ್ರಾಕೃತಿಕ ಸೌಂದರ್ಯ ಸವಿದು ಸಂಭ್ರಮಿಸಿದ್ದಾರೆ.

ಕುವೆಂಪು ಮನೆಗೆ ಪ್ರತಿನಿತ್ಯ 3 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಬರುತ್ತಾರೆ. ಕವಿಮನೆ, ಕವಿಶೈಲ, ತೇಜಸ್ವಿ ಸಮಾಧಿ, ಸಿಬ್ಬಲಗುಡ್ಡೆ ಮತ್ಸ್ಯಧಾಮ, ನವಿಲುಕಲ್ಲು, ತೀರ್ಥಹಳ್ಳಿಯ ತುಂಗಾ ನದಿಯ ಕಲ್ಲುಸಾರ, ಕೊಪ್ಪ ತಾಲ್ಲೂಕಿನಲ್ಲಿರುವ ಹುಟ್ಟೂರು ಹಿರೇಕೊಡಿಗೆ ಮುಂತಾದ ಸ್ಥಳಗಳಿಗೆ ಭೇಟಿ ನೀಡಿಆನಂದಿಸುತ್ತಿದ್ದಾರೆ.

ಖುಷಿ, ಸಂತೋಷ, ಆಟೋಟ, ಧಾರ್ಮಿಕ, ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳ ನಡುವೆಯೂ ಕುಪ್ಪಳಿಯ ಪ್ರವಾಸ ಎರಡು ದಶಕಗಳಿಂದ ಪ್ರಾಮುಖ್ಯತೆ ಪಡೆದಿದೆ. ರಾಜ್ಯದ ವಿವಿಧ ಭಾಗಗಳ ಕಿರಿಯ, ಹಿರಿಯ, ಪ್ರೌಢಶಾಲೆಯ ವಿದ್ಯಾರ್ಥಿಗಳು ಈ ವರ್ಷ ಗರಿಷ್ಠ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡಿದ್ದಾರೆ. ಕಳೆದ ವರ್ಷ ಈ ಪ್ರಮಾಣ 20,000ದಷ್ಟಿತ್ತು.

2022ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 1.60 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದಾರೆ. ಕರ್ನಾಟಕ ಅಲ್ಲದೇ ದೇಶದ ನಾನಾ ರಾಜ್ಯದ ಜನರು ಹಾಗೂ ವಿದೇಶಿಗರೂ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಗುಜರಾತ್, ಮಹಾರಾಷ್ಟ್ರ, ಕೇರಳ ರಾಜ್ಯದ ಜನ ಹೆಚ್ಚಿನ ಸಂಖ್ಯೆಯಲ್ಲಿ ಕುಪ್ಪಳಿಗೆ ಭೇಟಿ ನೀಡಿದ್ದಾರೆ.

ಪ್ರವಾಸ ಅಲ್ಲದೇ ಕುಪ್ಪಳಿಯ ಪರಿಸರದಲ್ಲಿ ಕುವೆಂಪು ಆಶಯದ ‘ಮಂತ್ರ ಮಾಂಗಲ್ಯ’ದ ಮದುವೆ ಸಂಖ್ಯೆಯೂ ಹೆಚ್ಚುತ್ತಿದೆ. ಸರಳ ವಿವಾಹಕ್ಕಾಗಿ ಮಂತ್ರಮಾಂಗಲ್ಯದ ಕಡೆಗೆ ವಾಲುತ್ತಿದ್ದಾರೆ. ಇಲ್ಲಿನ ‘ಹೇಮಾಂಗ’ ಸಭಾಭವನದಲ್ಲಿ ಇಲ್ಲಿಯವರೆಗೆ 100ಕ್ಕೂ ಹೆಚ್ಚು ಮಂತ್ರಮಾಂಗಲ್ಯ ವಿವಾಹ ನಡೆದಿದೆ.

ಕುವೆಂಪು ಚಿಂತನೆ ವಿಶ್ವವ್ಯಾಪಿ ಪಸರಿಸಿದೆ. ಮಲೆನಾಡಿನ ಸ್ವಚ್ಛಂದ ಪರಿಸರವನ್ನು ಜನರುಪ್ರೀತಿಸುತ್ತಿದ್ದಾರೆ. ವಿದ್ಯಾರ್ಥಿಗಳ ಪ್ರವಾಸ ಹೆಚ್ಚಾಗಿದ್ದು, ಕುವೆಂಪು ಸಾಹಿತ್ಯದೆಡೆಗೆ ಒಲವು ತೋರುತ್ತಿದ್ದಾರೆ.

-ಕಡಿದಾಳು ಪ್ರಕಾಶ್, ಸಮಕಾರ್ಯದರ್ಶಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ

ನೆನಪಿನ ದೋಣಿ ಪುಸ್ತಕ ಓದಿಕೊಂಡಿದ್ದ ನಮಗೆ ನೇರವಾಗಿ ಅವರ ಮನೆಯನ್ನು ನೋಡಲು ಖುಷಿಯಾಗಿದೆ. ಕುವೆಂಪು ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನನಗೆ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ದೊರೆತಿದೆ.

-ಶಂಕರಗುರು ಎಸ್‌. ಮರಡಿ,ಶಿಕ್ಷಕ, ಗಜೇಂದ್ರಗಘಡ

ಧಾರವಾಡ ಜಿಲ್ಲೆಯಲ್ಲಿ ಬೇಂದ್ರೆಯ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳುವ ಅವಕಾಶ ಸಿಕ್ಕಿತ್ತು. ಪ್ರವಾಸದಿಂದ ಕುವೆಂಪು ಸ್ಮರಣೀಯ ವಸ್ತುಗಳನ್ನು ನೋಡಿದ್ದು, ಇಲ್ಲಿನ ವಾತಾವರಣ ತಿಳಿದುಕೊಳ್ಳಲು ಅವಕಾಶ ದೊರೆತಿದೆ.

-ಮಹಾರುದ್ರಯ್ಯ ಹೂಗಾರ್‌, ವಿದ್ಯಾರ್ಥಿ, ತಡಕೋಡ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT