ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸನಗರ ‌ | ಈಡೇರದ ಸ್ವಂತ ಸೂರಿನ ಕನಸು; 6 ವರ್ಷಗಳಿಂದ ಅಂಬೇಡ್ಕರ್ ಭವನದಲ್ಲಿ ವಾಸ

Published : 2 ಸೆಪ್ಟೆಂಬರ್ 2023, 6:51 IST
Last Updated : 2 ಸೆಪ್ಟೆಂಬರ್ 2023, 6:51 IST
ಫಾಲೋ ಮಾಡಿ
Comments

ರವಿ ನಾಗರಕೊಡಿಗೆ

ಹೊಸನಗರ: ಈಕೆಗೆ ಸ್ವಂತ ಸೂರಿಲ್ಲ. ನಮ್ಮದು ಎಂದು ಏನೂ ಇಲ್ಲ.. ಇದ್ದ ಒಂದು ಮುರುಕಲು ಮನೆ ಕುಸಿದು ಬಿದ್ದು ಹೋಗಿದೆ. ಬೀದಿಗೆ ಬಿದ್ದ ಬದುಕು ದಿಕ್ಕುಗಾಣದೇ ಆಸರೆಗಾಗಿ ಪರಿತಪಿಸುತ್ತಿದೆ. ಕಳೆದ ಆರು ವರ್ಷಗಳಿಂದ ಈಕೆ ಅಂಬೇಡ್ಕರ್ ಭವನದಲ್ಲಿ ವಾಸ್ತವ್ಯ ಇದ್ದಾರೆ. ಸ್ವಂತ ಮನೆ ಕನಸು ಕಂಡ ಈಕೆಯ ಸಮಸ್ಯೆಯತ್ತ ಜಿಲ್ಲಾಡಳಿತ ಕಣ್ಣು ಹರಿಸಬೇಕಿದೆ.

ತಾಲ್ಲೂಕಿನ ಮಾರುತೀಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೇಲಿನ ಸಂಪಳ್ಳಿ ಗ್ರಾಮದಲ್ಲಿ ನೆಲೆ ಇಲ್ಲದೆ ಅತಂತ್ರರಾಗಿ ಬದುಕು ಕಟ್ಟಿಕೊಳ್ಳಲು ಹೋರಾಡುತ್ತಿರುವ ಶಶಿಕಲಾ ಅವರ ದಾರುಣ ಸ್ಥಿತಿ ಇದು.

ಎಲ್ಲ ಸರ್ಕಾರಿ ಸೌಲಭ್ಯಗಳಿಂದಲೂ ವಂಚಿತರಾದ ಶಶಿಕಲಾ ಇದ್ದು ಇಲ್ಲದಂತೆ ಬದುಕುತ್ತಿದ್ದಾರೆ. ಸರ್ಕಾರ ಮಹಿಳಾ ಸಬಲೀಕರಣದ ಕುರಿತು ಸಾವಿರ ಆಶ್ವಾಸನೆ ನೀಡುತ್ತಿದೆ. ಆದರೆ ಬದುಕಿನಾಶ್ರಯ ಇಲ್ಲದ ಶಶಿಕಲಾ ಬಾಳಿನಲ್ಲಿ ಯಾವುದೇ ಭರವಸೆ ಕಾರ್ಯರೂಪಕ್ಕೆ ಬರಲಿಲ್ಲ.

ಸಂಪಳ್ಳಿ ಗ್ರಾಮದ ಶಶಿಕಲಾ ಸರ್ಕಾರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅವರ ಹತ್ತಿರ ಯಾವುದೇ ಆಧಾರಗಳಿಲ್ಲ. ಆಧಾರ್ ಪಡಿತರ ವಿಧವಾವೇತನ ಇತರೆ ಸವಲತ್ತು ಕೊಡಿಸುವ ಕುರಿತಾಗಿ ಕ್ರಮ ಕೈಗೊಳ್ಳಲಾಗುವುದು.
ರಾಕೇಶ್ ಬ್ರೀಟ್ಟೊ. ತಹಶೀಲ್ದಾರ್. ಹೊಸನಗರ

40 ವರ್ಷದ ಪ್ರಾಯದ ಶಶಿಕಲಾ ಸಂಪಳ್ಳಿ ನಿವಾಸಿ. ಮದುವೆಯಾಗಿ ಸಂಪಳ್ಳಿಗೆ ಬಂದ ಶಶಿಕಲಾ ಗಂಡನ ಜೊತೆ ತುಂಬು ಜೀವನ ನಡೆಸಿದವಳು. ಜಮೀನು, ಯೋಗ್ಯ ವಾಸದ ಮನೆ ಇಲ್ಲದಿದ್ದರೂ ಇದ್ದ ಜಾಗದಲ್ಲಿ ಸಣ್ಣ ಮನೆ ಕಟ್ಟಿಕೊಂಡು ನೆಲೆ ನಿಂತರು. ಊರಿನ ಗೌಡರ ಮನೆಯಲ್ಲಿ ಇಬ್ಬರು ಕೂಲಿ ಮಾಡಿ ನೆಮ್ಮದಿ ಕಂಡು ಕೊಂಡವರು.  ಬುದ್ದಿಮಾಂದ್ಯ ಮಗು ಹೆತ್ತ ಶಶಿಕಲಾ, ಪಾಲಿಗೆ ಬಂದಿದ್ದು ಪಂಚಾಮೃತ ಎಂದೆಣಿಸಿ ಆ ಮಗುವಿನ ಲಾಲನೆ ಪಾಲನೆಯಲ್ಲೆ ಸುಖ ಕಂಡಳು. ಇದೇ ವೇಳೆ ಶಶಿಕಲಾ ಗಂಡ ಹುಷಾರಿಲ್ಲದೆ ಹಾಸಿಗೆ ಹಿಡಿದರು. ನರಳಾಡಿ ಸಾವನ್ನಪ್ಪಿದರು. ಆಗ ಶಶಿಕಲಾ ಬದುಕು ಕುಸಿದು ಬೀಳುವಂತಾಯಿತು. 

2017ರಲ್ಲಿ ಬಿದ್ದ ಬಾರಿ ಮಳೆಗೆ ಇದ್ದ ಒಂದು ಜೋಪುಡಿ ಮನೆ ಕುಸಿದು ಬಿತ್ತು. ತಲೆ ಮೇಲಿದ್ದ ಒಂದು ಸೂರು ಇಲ್ಲವಾಗಿ ಶಶಿಕಲಾ ಬದುಕು ಬೀದಿ ಪಾಲಾಯಿತು. ಆಗ ಊರ ಜನರು ಸಹಾಯಕ್ಕೆ ನಿಂತರು. ಸಮೀಪದಲ್ಲೆ ಇದ್ದ ಅಂಬೇಡ್ಕರ್ ಭವನದಲ್ಲಿ ಇರಲು ಅನುವು ಮಾಡಿಕೊಟ್ಟರು. ಅಲ್ಲಿಂದ ಇಲ್ಲಿವರೆಗೆ ಅಂಬೇಡ್ಕರ್ ಭವನದಲ್ಲಿಯೇ ಆಕೆಯ ವಾಸ್ತವ್ಯ ಸಾಗುತ್ತಿದೆ.  ಸ್ವಂತ ಮನೆ ಕನಸು ಕಂಡ ಶಶಿಕಲಾ ಕನಸು ನನಸಾಗುವ ಸಾಧ್ಯತೆ ಕಾಣುತ್ತಿಲ್ಲ. ಜಿಲ್ಲಾಡಳಿತ ಆಶ್ರಯ ನೀಡಬೇಕಿದೆ.

‘ಇಲ್ಲಿ ನೀರು ಇಲ್ಲ. ಶೌಚಾಲಯ ಕೂಡ ಇಲ್ಲ. ಮಗಳನ್ನು ಕೂಡಿ ಹಾಕಿ  ಕೆಲಸಕ್ಕೆ ಹೋಗತ್ತೇನೆ. ಸರ್ಕಾರದಿಂದ ಯಾವ ಸಹಾಯ ಬಂದಿಲ್ಲ. ಜೀವನ ಸಾಕಾಗಿ ಹೋಗಿದೆ. ನಮ್ಮ ಸಮಸ್ಯೆ ಯಾವಾಗ ಬಗೆಹರಿತ್ತೋ ಏನೋ’ ಎಂದು ಶಶಿಕಲಾ ಬೇಸರ ವ್ಯಕ್ತಪಡಿಸಿದರು.

ಯಾವ ಸವಲತ್ತು ಇಲ್ಲ..

ಶಶಿಕಲಾ ಬಳಿ ಚುನಾವಣಾ ಗುರುತಿನ ಚೀಟಿ ಬಿಟ್ಟು ಮಾತ್ಯಾವುದೆ ಆಧಾರ ಅವರ ಬಳಿ ಇಲ್ಲ. ಪಡಿತರ ಚೀಟಿ ಮನೆ ಬಿದ್ದಾಗ ಕಳೆದುಹೋಗಿದೆ. ಸರ್ಕಾರದಿಂದ ವಿಧವಾ ವೇತನ ಶಶಿಕಲಾಗೆ ಬಂದಿಲ್ಲ. ಹೀಗಾಗಿ ಗೃಹಲಕ್ಷ್ಮಿ ಹಣ ಪಡೆಯಲು ಅವರು ಅರ್ಹರಾಗಿಲ್ಲ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT