ಶಿವಮೊಗ್ಗ: ‘ಬರದಿಂದ ಎದುರಾಗಿರುವ ಸಂಕಷ್ಟದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ರೈತರ ನೆರವಿಗೆ ನಿಲ್ಲಬೇಕು. ಇಲ್ಲವಾದರೆ, ಪ್ರತಿ ಜಿಲ್ಲೆಯಲ್ಲೂ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ’ ಎಂದು ಸಂಸದ ಬಿ.ವೈ.ರಾಘವೇಂದ್ರ ಎಚ್ಚರಿಸಿದರು.
‘ರಾಜ್ಯದ ಬಹುತೇಕ ತಾಲ್ಲೂಕಿನಲ್ಲಿ ಬರ ತಾಂಡವವಾಡುತ್ತಿದೆ. ಇಂತಹ ಸಂದಿಗ್ಧ ಸ್ಥಿತಿ ಎದುರಾಗಿದ್ದರೂ ಕಾಂಗ್ರೆಸ್ ಸರ್ಕಾರ ಪರಿಹಾರ ನೀಡುವತ್ತ ಗಮನಹರಿಸಿಲ್ಲ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
‘ಜಿಲ್ಲೆಯ ಏಳು ತಾಲ್ಲೂಕಿನಲ್ಲಿ ಒಟ್ಟು 41,530 ಎಕರೆ ಭತ್ತ ಒಣಗಿದೆ. ಇದರಿಂದ ರೈತರಿಗೆ ₹192 ಕೋಟಿಯಷ್ಟು ಬೆಳೆ ನಷ್ಟವಾಗಿದೆ. ಅದೇ ರೀತಿ 38,240 ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ನಾಶವಾಗಿದ್ದು, ರೈತರು ₹230 ಕೋಟಿ ನಷ್ಟ ಅನುಭವಿಸಿದ್ದಾರೆ. ಇದೆಲ್ಲದಕ್ಕೂ ಸರ್ಕಾರ ಉತ್ತರ ನೀಡಬೇಕು’ ಎಂದು ಆಗ್ರಹಿಸಿದರು.
‘ರೈತರ ಕೃಷಿ ಪಂಪ್‌ಸೆಟ್‌ಗಳಿಗೆ 7 ಗಂಟೆ ನಿರಂತರ ವಿದ್ಯುತ್ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಜೂನ್, ಜುಲೈ, ಆಗಸ್ಟ್ ತಿಂಗಳಲ್ಲೇ ಈ ತೀರ್ಮಾನ ತೆಗೆದುಕೊಳ್ಳಬೇಕಿತ್ತು. ಬೆಳೆಯೆಲ್ಲಾ ಒಣಗಿ ಹೋದ ಮೇಲೆ ನಿರಂತರ ವಿದ್ಯುತ್ ನೀಡಿದರೆ ಏನು ಪ್ರಯೋಜನ’ ಎಂದು ಪ್ರಶ್ನಿಸಿದರು.
‘ರಾಜ್ಯದಲ್ಲಿ ಕೇಂದ್ರ ತಂಡದಿಂದ ಬರ ಅಧ್ಯಯನ ಮಾಡಲಾಗುತ್ತಿದೆ. ಈ ವರದಿಯಂತೆ ಕೇಂದ್ರ ಸರ್ಕಾರ ತನ್ನ ಪಾಲಿನ ಹಣವನ್ನು ಬಿಡುಗಡೆ ಮಾಡಲಿದೆ. ರಾಜ್ಯ ಸರ್ಕಾರವು ತನ್ನ ಪಾಲಿನ ಹಣ ಬಿಡುಗಡೆ ಮಾಡದೆಯೇ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಾ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ಇದು ನುಣುಚಿಕೊಳ್ಳುವ ಪ್ರಯತ್ನ. ಸರ್ಕಾರವು ಗೋಶಾಲೆಗಳಿಗೆ ನೀರು ಮತ್ತು ಮೇವಿನ ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಎಸ್.ರುದ್ರೇಗೌಡ, ಡಿ.ಎಸ್. ಅರುಣ್, ಮಾಜಿ ಶಾಸಕರಾದ ಭಾನುಪ್ರಕಾಶ್, ಕೆ.ಬಿ.ಅಶೋಕ ನಾಯ್ಕ ಇದ್ದರು.