ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹು ನಿರೀಕ್ಷಿತ ಸ್ಮಾರ್ಟ್‌ ಸಿಟಿ: ನಾಗರಿಕರಿಗೆ ನಿತ್ಯ ಕಿರಿಕಿರಿ

Last Updated 5 ಜುಲೈ 2021, 4:08 IST
ಅಕ್ಷರ ಗಾತ್ರ

ಶಿವಮೊಗ್ಗ: ಬಹು ನಿರೀಕ್ಷಿತ ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನ ನಗರದ ನಾಗರಿಕರಿಗೆ ಹೆಮ್ಮೆಯ ಗರಿ ಮೂಡಿಸಿದೆ. ಆದರೆ, ನಿಧಾನಗತಿಯ, ಯೋಜಿತವಲ್ಲದ ಅವೈಜ್ಞಾನಿಕ ಕಾಮಗಾರಿಗಳ ಫಲವಾಗಿ ನಿತ್ಯವೂ ಕಿರಿಕಿರಿ ಅನುಭವಿಸುತ್ತಿದ್ದಾರೆ.

ಸ್ಮಾರ್ಟ್‌ ಸಿಟಿ ಯೋಜನೆಯ ಅನುಷ್ಠಾನಕ್ಕಾಗಿ₹ 979.98 ಕೋಟಿ ಮೊತ್ತದ ಕ್ರಿಯಾಯೋಜನೆ ರೂಪಿಸಲಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಈವರೆಗೆ ₹ 396 ಕೋಟಿ ಅನುದಾನ ನೀಡಿವೆ. ₹ 309.41 ಕೋಟಿ ವೆಚ್ಚ ಮಾಡಲಾಗಿದೆ.

53 ಕಾಮಗಾರಿಗಳಲ್ಲಿ ₹ 54.20 ಕೋಟಿ ಮೌಲ್ಯದ 21 ಕಾಮಗಾರಿಗಳು ಪೂರ್ಣಗೊಂಡಿವೆ. ₹ 889.8 ಕೋಟಿ ಮೊತ್ತದ 30 ಕಾಮಗಾರಿಗಳು ಪ್ರಗತಿಯಲ್ಲಿವೆ. ₹36.70 ಕೋಟಿ ಮೊತ್ತದ ಎರಡು ಕಾಮಗಾರಿ ಡಿ.ಪಿ.ಆರ್. ಹಂತದಲ್ಲಿವೆ. ಸಾರ್ವಜನಿಕ ಸಹಭಾಗಿತ್ವದ ಎರಡು ಯೋಜನೆಗಳು ಪ್ರಗತಿಯಲ್ಲಿವೆ. ₹ 143.60 ಕೋಟಿ ಮೊತ್ತದ ಎರಡು ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ.ವಿವಿಧ ಇಲಾಖೆಗಳ ಒಗ್ಗೂಡಿಸುವಿಕೆಯಲ್ಲಿ ₹ 329.10 ಕೋಟಿ ಮೊತ್ತದ 31 ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿವೆ. ಅವುಗಳಲ್ಲಿ ₹ 193.70 ಕೋಟಿ ಮೊತ್ತದ 30 ಕಾಮಗಾರಿಗಳು ಪೂರ್ಣಗೊಂಡಿವೆ.
₹ 135.40 ಕೋಟಿ ಮೊತ್ತದ ಒಂದು ಕಾಮಗಾರಿಗಳು ಪ್ರಗತಿಯಲ್ಲಿವೆ.ಒಟ್ಟಾರೆ ₹ 1,485.61 ಕೋಟಿ ಮೊತ್ತದ 87 ಯೋಜನೆಗಳನ್ನು ಸ್ಮಾರ್ಟ್‌ ಸಿಟಿ ಪ್ರದೇಶ (ಎ.ಬಿ.ಡಿ.) ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ.

ಕೈಗೆತ್ತಿಕೊಂಡ ಕಾಮಗಾರಿಗಳು:

₹ 505.71 ಕೋಟಿ ವೆಚ್ಚದಲ್ಲಿ 110 ಕಿ.ಮೀ ಸ್ಮಾರ್ಟ್ ರಸ್ತೆಗಳ ಅಭಿವೃದ್ಧಿ,₹ 20.69 ಕೋಟಿ ವೆಚ್ಚದಲ್ಲಿ 5 ಪ್ಯಾಕೇಜುಗಳ ಮೂಲಕ 113 ಕನ್ಸರ್‌ವೆನ್ಸಿಗಳ ಅಭಿವೃದ್ಧಿ,₹ 141.14 ಕೋಟಿ ವೆಚ್ಚದಲ್ಲಿ ನಗರದ 11 ಪ್ರದೇಶಗಳಲ್ಲಿ ಹಸಿರೀಕರಣ, ಉದ್ಯಾನಗಳ ಅಭಿವೃದ್ಧಿ ಹಾಗೂ ಜಲಾಭಿಮುಖ ನದಿ ಯೊಜನೆಗಳ ಅನುಷ್ಠಾನ ಮಾಡಲಾಗುತ್ತಿದೆ. ₹ 68.87 ಕೋಟಿ ವೆಚ್ಚದಲ್ಲಿ ಸಂಯೋಜಿತ ಆಜ್ಞೆ ಮತ್ತು ನಿಯಂತ್ರಣ ಕೇಂದ್ರ ವ್ಯವಸ್ಥೆ, ₹ 17.26 ಕೋಟಿ ವೆಚ್ಚದಲ್ಲಿ 3 ಪಾರಂಪರಿಕ ಕಟ್ಟಡಗಳ ಪುನರುಜ್ಜೀವನ ನಿರ್ವಹಣೆ, ₹92.66 ಕೋಟಿ ವೆಚ್ಚದಲ್ಲಿ ಬಹು ಹಂತದ ವಾಹನ ನಿಲುಗಡೆ ವ್ಯವಸ್ಥೆ, ಹಾಕರ್ಸ್ ವಲಯ, ಇತ್ಯಾದಿ 11 ಇತರೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಎಲ್‌ಇಡಿ ಬೀದಿ ದೀಪಗಳ ಅಳವಡಿಕೆ:

ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಗಣನೀಯ ಪ್ರಮಾಣದ ವಿದ್ಯುತ್ ಉಳಿತಾಯ, 7 ವರ್ಷಗಳ ನಿರ್ವಹಣೆ, ಕೇಂದ್ರೀಕೃತ ನಿಯಂತ್ರಣ ವ್ಯವಸ್ಥೆ, ಯಾವುದೇ ಲೋಪದೋಷಗಳನ್ನು 24 ಗಂಟೆಗಳ ಒಳಗೆ ಸರಿಪಡಿಸುವ ಒಪ್ಪಂದದೊಂದಿಗೆ₹ 44.43 ಕೋಟಿ ವೆಚ್ಚದಲ್ಲಿ ಎಲ್‌ಇಡಿ ದೀಪ ಅಳವಡಿಕೆಗೆ ಚಾಲನೆ ನೀಡಲಾಗಿದೆ.ಹಳೇ ಜೈಲು ಆವರಣದ 46 ಎಕರೆ ಜಾಗದಲ್ಲಿ ಬಹು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ.ತುಂಗಾ ನದಿ ಮುಂಭಾಗದ ಉತ್ತರ ದಂಡೆ ಪ್ರದೇಶವನ್ನು ₹ 103.22 ಕೋಟಿ ವೆಚ್ಚದಲ್ಲಿ ಮೂಲಸೌಲಭ್ಯ, ಪಾದಚಾರಿ ಸೇತುವೆ, ವಾಯು ವಿಹಾರ ವ್ಯವಸ್ಥೆಗಳೊಂದಿಗೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದುವರೆಗೆ ₹ 18.20 ಕೋಟಿ ವೆಚ್ಚ ಮಾಡಲಾಗಿದೆ. ಶೇ 17ರಷ್ಟು ಪ್ರಗತಿ ಸಾಧಿಸಲಾಗಿದೆ.ವಾಹನ ನಿಲುಗಡೆ ವ್ಯವಸ್ಥೆ ಉತ್ತಮಪಡಿಸಲು ₹ 30 ಕೋಟಿ ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ, ಬಹು ಹಂತದ ವಾಹನ ನಿಲುಗಡೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ.

100 ಸ್ಮಾರ್ಟ್‌ ಬಸ್‌ ನಿಲ್ದಾಣ:

ನಗರದ 100 ಕಡೆ ಸ್ಮಾರ್ಟ್ ಬಸ್‌ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದೆ.ವನ್ಯಜೀವಿ ವ್ಯಾಖ್ಯಾನ ಕೇಂದ್ರ, ಮಹಾತ್ಮ ಗಾಂಧಿ ಪಾರ್ಕಿನ ಆವರಣದಲ್ಲಿ ತಾರಾಲಯ, ವನ್ಯಜೀವಿ ವ್ಯಾಖ್ಯಾನ ಕೇಂದ್ರ ಸ್ಥಾಪನೆ, ₹ 7 ಕೋಟಿ ವೆಚ್ಚದಲ್ಲಿ ಶಿವಮೊಗ್ಗದ ಖಾಸಗಿ ಬಸ್‌ ನಿಲ್ದಾಣದ ಅಭಿವೃದ್ಧಿ, ರವೀಂದ್ರನಗರ–ರಾಜೇಂದ್ರನಗರ ಪ್ರದೇಶದಲ್ಲಿ ₹ 11 ಕೋಟಿ ವೆಚ್ಚದಲ್ಲಿ ನಾಲಾ ಪುನರ್ ಅಭಿವೃದ್ಧಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ₹ 130 ಕೋಟಿ ವೆಚ್ಚದಲ್ಲಿ ತುಂಗಾ ನದಿಯ ಉತ್ತರ ದಡದಲ್ಲಿ ಮೂಲಸೌಕರ್ಯ ಅಭಿವೃದ್ಧಿಯೊಂದಿಗೆ ಕಾಲು ಸೇತುವೆ, ವಾಯು ವಿಹಾರ ಪಥ, ₹ 3.19 ಕೋಟಿ ವೆಚ್ಚದಲ್ಲಿ ನಗರದ ವಿವಿಧೆಡೆ ಬೈಸಿಕಲ್ ಹಂಚಿಕೆ ಯೋಜನೆ ಅನುಷ್ಠಾನ ಗೊಳಿಸಲು ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ₹ 1.45 ಕೋಟಿ ಅಂದಾಜು ವೆಚ್ಚದಲ್ಲಿ ಮಾದರಿ ಪೊಲೀಸ್ ಮಾಹಿತಿ ಹಾಗೂ ಪ್ರವಾಸ ಕಿಯೋಸ್ಕ್‌ಗಳ ಅನುಷ್ಠಾನ ಪ್ರಕ್ರಿಯೆ ನಡೆಯುತ್ತಿದೆ. ₹ 15.93 ಕೋಟಿ ಅಂದಾಜು ವೆಚ್ಚದಲ್ಲಿ ಟ್ಯಾಕ್ಸಿನಿಲ್ದಾಣ ಮತ್ತು ಆಟೊರಿಕ್ಷಾ ನಿಲ್ದಾಣಗಳೊಂದಿಗೆ ಬೀದಿ ವ್ಯಾಪಾರಿಗಳ ವಲಯ ನಿರ್ಮಾಣ ಮಾಡಲಾಗುತ್ತಿದೆ.

ಶಿಸ್ತು ಕಳೆದುಕೊಂಡ ಮಹತ್ವದ ಯೋಜನೆ:

ಅತ್ಯುತ್ತಮ ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನ ಕ್ರಮಗಳ ವಿರುದ್ಧ ನಗರದ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದು ರಸ್ತೆಯಲ್ಲಿ ಹಲವು ಕಾಮಗಾರಿ ಕೈಗೊಳ್ಳುವಾಗ ಯೋಜಿತವಾಗಿ ಮಾಡುತ್ತಿಲ್ಲ. ರಸ್ತೆ ಅತಿಕ್ರಮ ಮಾಡಿದ ಜಾಗ ತೆರವುಗೊಳಿಸದೇ ಇರುವ ಜಾಗದಲ್ಲೇ ಕೆಲಸ ಮಾಡಲಾಗುತ್ತಿದೆ. ರಸ್ತೆ ಮಧ್ಯದಲ್ಲೇ ಯುಜಿಡಿ, ನೀರಿನ ಪೈಪ್‌ಲೈನ್, ಚರಂಡಿ, ವಿದ್ಯುತ್ ಕೇಬಲ್‌ ಅಳವಡಿಸಲಾಗುತ್ತಿದೆ. ಪೈಪ್‌ಲೈನ್ ಅಳವಡಿಕೆಗೆ ಗುಂಡಿ ತೆಗೆಯುವಾಗ ಒಂದೇ ಬಾರಿ ತೆಗೆಯದೇ ಪ್ರತಿಯೊಂದು ಪೈಪ್‌ಲೈನ್‌ಗೂ ಪ್ರತ್ಯೇಕ ಕಾಮಗಾರಿ ನಡೆಸಲಾಗುತ್ತಿದೆ. ಒಂದು ರಸ್ತೆಯಲ್ಲಿ ಕಾಮಗಾರಿ ಕೈಗೊಳ್ಳುವಾಗ ಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಸಾಕಷ್ಟು ದಿನಗಳು ಕಿರಿಕಿರಿ ಅನುಭವಿಸುವಂತಾಗಿದೆ. ಕೆಲವು ತಿಂಗಳ ಹಿಂದೆ ನಿರ್ಮಿಸಿದ ಸುಂದರ ರಸ್ತೆಗಳು ಅಗೆತದ ಪರಿಣಾಮ ಸಂಪೂರ್ಣ ಹಾಳಾಗಿವೆ. ಒಂದು ಪ್ರದೇಶದಲ್ಲಿ ಕೆಲಸ ಕೈಗೊಂಡ ನಂತರ ಆ ಕಾಮಗಾರಿ ಪೂರ್ಣಗೊಳಿಸದೆ, ಅರ್ಧಕ್ಕೆ ಬಿಟ್ಟು ಬೇರೆ ಪ್ರದೇಶದಲ್ಲಿ ಕಾಮಗಾರಿ ಕೈಗೊಳ್ಳುತ್ತಿದ್ದಾರೆ. ಇದು ಜನರಿಗೆ ಸಾಕಷ್ಟು ತೊಂದರೆ ಮಾಡಿದೆ.

₹ 979.98 ಕೋಟಿ

ಸ್ಮಾರ್ಟ್‌ ಸಿಟಿ ಕ್ರಿಯಾ ಯೋಜನೆ

₹ 396 ಕೋಟಿ

ರಾಜ್ಯ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಮೊತ್ತ

₹ 309.41 ಕೋಟಿ

ಇದುವರೆಗೂ ವೆಚ್ಚ ಮಾಡಿದ ಮೊತ್ತ

ಸಂಚಾರ ಸಮಸ್ಯೆ ಕೊಡುಗೆ

ಶಿವಮೊಗ್ಗ: ಸ್ಮಾರ್ಟ್ ಸಿಟಿಯಾಗಲು ಅತ್ಯಂತ ವೇಗವಾಗಿ ಸಾಗುತ್ತಿರುವ ಶಿವಮೊಗ್ಗ ಈಚಿನ ದಿನಗಳಲ್ಲಿ ಸಂಚಾರದ ಸಮಸ್ಯೆ ತೀವ್ರವಾಗಿ ಎದುರಿಸುತ್ತಿದೆ. ಸಂಚಾರ ನಿಯಂತ್ರಣ ಮಾಡಲು ಪೊಲೀಸರು ಹರಸಾಹಸ ಮಾಡುವಂತಾಗಿದೆ.

ಸುಗಮ ಸಂಚಾರಕ್ಕೆ ನಾಗರಿಕರ ಸಹಕಾರ ಅತ್ಯಂತ ಅಗತ್ಯ. ಈಗ ಗಮನಿಸಿದಂತೆ ವಾಹನ ಚಾಲಕರು ಏಕಮುಖ ರಸ್ತೆಯಲ್ಲೂ ಎರಡು ಭಾಗದಿಂದ ಓಡಾಡುತ್ತಿದ್ದಾರೆ.ಸ್ವಯಂ ಶಿಸ್ತು ಇಲ್ಲ.ಕೊರೊನಾ ಸಮಯದಲ್ಲಿ ಸಾರ್ವಜನಿಕ ಸಾರಿಗೆ ಕಡಿಮೆ ಇರುವುದರಿಂದ ಸ್ವಂತ ವಾಹನಗಳಲ್ಲಿ ಓಡಾಡುವವರ ಸಂಖ್ಯೆ ಹೆಚ್ಚಾಗಿ ಸಮಸ್ಯೆ ಇನ್ನಷ್ಟು ಜಟಿಲವಾಗಿದೆ. ಸ್ಮಾರ್ಟ್‌ ಸಿಟಿ ಕೆಲಸಗಳಿಗೆ ಎಲ್ಲೆಂದರಲ್ಲಿ ಗುಂಡಿ ಅಗೆದಿರುವುದು ಪೈಪ್‌ಲೈನ್ ಅಳವಡಿಸುತ್ತಿರುವುದು ಇತ್ಯಾದಿ ಕೆಲಸ ಮಾಡುತ್ತಿರುವ ಕಾರಣ ಎಲ್ಲಾ ರಸ್ತೆಗಳು ಪೂರ್ಣವಾಗಿ ತೆರೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರತಿ ರಸ್ತೆಯೂ ವಾಹನ ದಟ್ಟಣೆಯಿಂದ ಕೂಡಿ ಮನೆಯಲ್ಲೇ ಇರುವುದು ಸೂಕ್ತ ಎನ್ನುವಂತಾಗಿದೆ.

ಲಾಕ್‌ಡೌನ್‌ ನಿರ್ವಹಣೆ ಇತರ ಕೆಲಸಗಳಿಂದಾಗಿ ಪೊಲೀಸರು ಕೂಡ ಸರಿಯಾದ ರೀತಿಯಲ್ಲಿ ವಾಹನಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಮುಖ್ಯ ರಸ್ತೆಗಳಲ್ಲೂ ಗುಂಡಿ ಅಗೆದಿರುವುದರಿಂದ ಪರ್ಯಾಯ ಮಾರ್ಗ ಕಂಡುಕೊಳ್ಳುವ ದೃಷ್ಟಿಯಿಂದ ವಾಹನ ಚಾಲಕರು ಚಿಕ್ಕ ಚಿಕ್ಕ ರಸ್ತೆಗಳ ಕಡೆ ಮುಖಮಾಡುತ್ತಿದ್ದಾರೆ. ಹೀಗಾಗಿ ಎಲ್ಲಾ ಕಡೆಯಲ್ಲಿಯೂ ತೀವ್ರವಾದ ಸಂಚಾರ ಸಮಸ್ಯೆ ಇದೆ. ಪಾದಚಾರಿಗಳಗೋಳನ್ನು ಕೇಳುವವರೇ ಇಲ್ಲ.

ಸ್ಮಾರ್ಟ್‌ ಸಿಟಿ ಕೆಲಸವನ್ನು ವ್ಯವಸ್ಥಿತವಾಗಿ ಶಿಸ್ತುಬದ್ಧವಾಗಿ ಮಾಡಿದ್ದರೆ ಅರ್ಧ ಸಮಸ್ಯೆ ಬಗೆಹರಿಯುತ್ತಿತ್ತು. ಪ್ರತಿನಿತ್ಯ ಪ್ರತಿ ರಸ್ತೆಯಲ್ಲೂ ಚಾಲಕರು ಪರಸ್ಪರ ಹೊಡೆದಾಡಿಕೊಳ್ಳುವ‌ ದೃಶ್ಯ ಸಾಮಾನ್ಯವಾಗಿದೆ. ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದು‌ ಅನಿವಾರ್ಯವಾಗಿದೆ. ಕಾಮಗಾರಿ ಸ್ವಲ್ಪ ವೈಜ್ಞಾನಿಕವಾಗಿ ಮಾಡಿದರೆ ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT