ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಾವತಿ ಹಿನ್ನೀರಿನ ಮುಪ್ಪಾನೆ ಹಲ್ಕೆ ಲಾಂಚ್ ಮೇ 5ರಿಂದ ಸ್ಥಗಿತ

Published 3 ಮೇ 2024, 22:40 IST
Last Updated 3 ಮೇ 2024, 22:40 IST
ಅಕ್ಷರ ಗಾತ್ರ

ಮುಪ್ಪಾನೆ: ದ್ವೀಪದ ಕರೂರು ಹೋಬಳಿಯಿಂದ ಕಾರ್ಗಲ್– ಜೋಗಕ್ಕೆ ತ್ವರಿತವಾಗಿ ಸಂಪರ್ಕ ಕಲ್ಪಿಸುವ ಹಲ್ಕೆ– ಮುಪ್ಪಾನೆ ಕಡವು ಮಾರ್ಗ ಮೇ 5ರಿಂದ ಸ್ಥಗಿತಗೊಳ್ಳಲಿದೆ ಎಂದು ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಮಾಹಿತಿ ನೀಡಿದೆ.

‘ಶರಾವತಿ ಹಿನ್ನೀರಿನಲ್ಲಿ ನೀರಿನ ಹರಿವು ಕಡಿಮೆ ಕಂಡುಬಂದ ಹಿನ್ನೆಲೆಯಲ್ಲಿ ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲ್ಕೆ– ಮುಪ್ಪಾನೆ ಲಾಂಚ್‌ಗೆ ಆಡಚಣೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಜಲ ಸಾರಿಗೆ ಇಲಾಖೆ ಅಧಿಕಾರಿಗಳು ಮೇ 2ರಂದು ಮುಪ್ಪಾನೆ ಕಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಲಾಂಚ್ ಸಂಚಾರಕ್ಕೆ ಮರದ ದಿಣ್ಣೆಗಳು, ಮರಳಿನ ದಿಬ್ಬಗಳು ಲಾಂಚ್ ತಳಭಾಗಕ್ಕೆ ತಗುಲುವುದರಿಂದ ಲಾಂಚ್ ತಾಂತ್ರಿಕ ದೋಷಕ್ಕೆ ಒಳಗಾಗುವ ಸಾಧ್ಯತೆಯಿದೆ. ಮುಂಜಾಗ್ರತಾ ಕ್ರಮವಾಗಿ ಹಾಗೂ ಜನರ ಸುರಕ್ಷತೆಯ ದೃಷ್ಟಿಯಿಂದ ತಾತ್ಕಾಲಿಕವಾಗಿ ಲಾಂಚ್ ಸೇವೆಯನ್ನು ಸ್ಥಗಿತಗೊಳಿಸಲಾಗುವುದು’ ಎಂದು ಕಡವು ನಿರೀಕ್ಷಕ ಧನೇಂದ್ರ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಸದ್ಯ ಲಾಂಚ್ ಸ್ಥಗಿತದಿಂದ ಈ ಭಾಗದ ತುಮರಿ, ಮಾರಲಗೋಡು, ಬ್ಯಾಕೋಡು ಭಾಗದ ತುರ್ತು ಆರೋಗ್ಯ ಸೇವೆ ಸೇರಿ ಜೋಗ– ಕಾರ್ಗಲ್ ತೆರಳಲು ತೊಂದರೆಯಾಗುತ್ತದೆ. ಅಲ್ಲದೇ ಹೊಳೆಬಾಗಿಲು ಲಾಂಚ್‌ನಲ್ಲಿ ಪ್ರತಿನಿತ್ಯ ಜನದಟ್ಟಣೆ ಇರುವ ಕಾರಣ ಬಹುತೇಕ ಸಿಗಂದೂರು ಪ್ರವಾಸಿಗರು ಈ ಸುಗಮ ಮಾರ್ಗದ ಮೊರೆ ಹೋಗಿದ್ದರು. ಸದ್ಯ ಇದು ಕೂಡ ಸ್ಥಗಿತಗೊಂಡಿದ್ದು, ಈ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ.

ಹಸಿರು ಮಕ್ಕಿ ಲಾಂಚ್ ಜನರಿಗಷ್ಟೇ ಅವಕಾಶ

‘ಶರಾವತಿ ಹಿನ್ನೀರಿನಲ್ಲಿ ನೀರಿನ ಹರಿವು ಗಣನೀಯ ಪ್ರಮಾಣದಲ್ಲಿ ಕಡಿಮೆಯಾದ ಕಾರಣ ಸಮೀಪದ ಹಸಿರು ಮಕ್ಕಿ ಕಡವು ಮೇ 15ರವರೆಗೆ ಮಾತ್ರ ಸೇವೆ ನೀಡಲಿದೆ. ಮೇ 3ರಿಂದ ಲಾಂಚ್‌ನಲ್ಲಿ ಎಲ್ಲ ರೀತಿಯ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ಮುಂದಿನ ಆದೇಶದವರೆಗೆ ಲಾಂಚ್‌ನಲ್ಲಿ ಜನರನ್ನು ಮಾತ್ರ ಸಾಗಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT