ಸೋಮವಾರ, ನವೆಂಬರ್ 29, 2021
20 °C
ಎಚ್.ಆರ್. ಬಸವರಾಜಪ್ಪ

ನಾಗಸಮುದ್ರ: 28ಕ್ಕೆ ಹುತಾತ್ಮ ರೈತರಿಗೆ ಗೌರವ ಸಮರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಭದ್ರಾವತಿ ತಾಲ್ಲೂಕು ನಾಗಸಮುದ್ರದ ಮಲ್ಲೇಶ್ವರ ಕಲ್ಯಾಣ ಮಂಟಪದಲ್ಲಿ ಅ.28ರಂದು ಸಂಜೆ 4ಕ್ಕೆ ಹುತಾತ್ಮ ರೈತರಿಗೆ  ಗೌರವ ಸಮರ್ಪಣೆ ಹಾಗೂ ರೈತ ವಿರೋಧಿ ಕೃಷಿ ಕಾಯ್ದೆಗಳ ದುಷ್ಪರಿಣಾಮದ ಬಗ್ಗೆ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಗೌರವಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ತಿಳಿಸಿದರು.

‘ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್ ಅವರು ವಿಚಾರಸಂಕಿರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ರೈತರಿಗೆ ಹೇಗೆ ಮಾರಕ ಎಂಬುದನ್ನು ದಾಖಲೆಗಳ ಸಮೇತ ವಿವರಿಸಲಿದ್ದಾರೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕೃಷಿ ಕಾಯ್ದೆಗಳು ರೈತರಿಗೆ ಮರಣ ಶಾಸನವಾಗಲಿರುವುದರಿಂದ ಇವುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ದೆಹಲಿಯಲ್ಲಿ ಈಗಾಗಲೇ ರೈತರು ಹೋರಾಟ ನಡೆಸುತ್ತಿದ್ದಾರೆ. ಆದರೆ, ಬಿಜೆಪಿಯವರು ಕಾಯ್ದೆಗಳನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಯಾವ ದೃಷ್ಟಿಕೋನದಲ್ಲಿ ಈ ಕಾಯ್ದೆಗಳು ರೈತರಿಗೆ ಪೂರಕ ಎಂಬುದನ್ನು ದಾಖಲೆಗಳ ಸಮೇತ ಮನದಟ್ಟು ಮಾಡಿದರೆ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ಹಿಂಪಡೆಯಲಾಗುವುದು’ ಎಂದರು.

‘ಸರ್ಕಾರಿ ಪ್ರಾಯೋಜಿತ ಅಧಿಕಾರಿಗಳು ಹಾಗೂ ಕೆಲವು ಕೃಷಿ ವಿಜ್ಞಾನಿಗಳು ತಮ್ಮ ಬೇಳೆ ಬೇಯಿಸಿಕೊಂಡು ಉನ್ನತ ಹುದ್ದೆ ಗಿಟ್ಟಿಸಿಕೊಳ್ಳುವ ಸಲುವಾಗಿ ಕಾಯ್ದೆಗಳನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಈ ಕಾಯ್ದೆಗಳ ಪರವಾಗಿ ಮಾತನಾಡುವ ಯಾರು ಬೇಕಾದರೂ ಅಂದಿನ ಕಾರ್ಯಕ್ರಮಕ್ಕೆ ಬರಬಹುದೆಂದು’ ಆಹ್ವಾನ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ರಾಘವೇಂದ್ರ, ಡಾ. ಬಿ.ಎಂ.ಚಿಕ್ಕಸ್ವಾಮಿ, ಹಸಿರು ಸೇನೆ ಜಿಲ್ಲಾ ಸಂಚಾಲಕ ಎಂ.ಡಿ. ನಾಗರಾಜ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು