ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಠಿಣ ಕಾನೂನುಗಳಿಂದ ಬದುಕು ಸಂಕಷ್ಟ

11ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಶಾಸಕ ಹಾಲಪ್ಪ
Last Updated 21 ಮಾರ್ಚ್ 2023, 5:33 IST
ಅಕ್ಷರ ಗಾತ್ರ

ಸಾಗರ: ಹಲವು ರೀತಿಯ ಕಾನೂನಿನ ಸಂಕೋಲೆಯೊಳಗೆ ಸಿಲುಕಿರುವ ಕಾರಣಕ್ಕೆ ಮಲೆನಾಡಿನ ಜನರ ಬದುಕು ಸಂಕಷ್ಟಕ್ಕೆ ಈಡಾಗಿದೆ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ತಿಳಿಸಿದರು.

ಇಲ್ಲಿನ ಸಾಹಿತ್ಯ ಭವನದಲ್ಲಿ ಸೋಮವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ 11ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಅರಣ್ಯ ಇಲಾಖೆಗೆ ಸಂಬಂಧಿಸಿದ ಕಠಿಣ ಕಾನೂನುಗಳಿಂದಾಗಿ ಮಲೆನಾಡಿನ ಗ್ರಾಮೀಣ ಜನರ ಬದುಕು ಕಗ್ಗಂಟಾಗಿದೆ. ಈ ಕಾನೂನುಗಳಿಗೆ ತಿದ್ದುಪಡಿ ತರದೇ ಭೂಮಿಯ ಹಕ್ಕಿನ ಸಮಸ್ಯೆಗೆ ಉತ್ತರ ಕಂಡುಕೊಳ್ಳುವುದು ಕಷ್ಟಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಕನ್ನಡ ಭಾಷೆ ಕೇವಲ ಸಾಹಿತ್ಯಕ್ಕೆ ಸೀಮಿತವಾದರೆ ಅದರ ಬೆಳವಣಿಗೆ ಸಾಧ್ಯವಿಲ್ಲ. ಎಲ್ಲಾ ಕ್ಷೇತ್ರಗಳಿಗೂ ಕನ್ನಡ ಭಾಷೆಯ ವಿಸ್ತರಣೆಯಾಗಬೇಕು. ಭಾಷೆಯನ್ನು ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಯೋಜನೆಗಳನ್ನು ರೂಪಿಸಬೇಕು ಎಂದು ದಿಕ್ಸೂಚಿ ಭಾಷಣ ಮಾಡಿದ ಸಾಹಿತಿ ನಾ.ಡಿಸೋಜ ತಿಳಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಆರ್. ಜಯಂತ್, ಹೈಕೋರ್ಟ್ ವಕೀಲ ಕೆ. ದಿವಾಕರ್ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಿ. ಮಂಜುನಾಥ್, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ. ಮಹೇಶ್, ಸದಸ್ಯರಾದ ಬಿ.ಎಚ್. ಲಿಂಗರಾಜ್, ಕೆ.ಆರ್. ಗಣೇಶ್ ಪ್ರಸಾದ್, ಸೈಯದ್ ಜಾಕಿರ್, ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ಪ್ರಮುಖರಾದ ಮೋಹನಮೂರ್ತಿ, ಡಾ.ಕೆಳದಿ ಗುಂಡಾ ಜೋಯಿಸ್, ವಿ.ಕೆ. ವಿಜಯಕುಮಾರ್, ಜಿ. ಪರಮೇಶ್ವರಪ್ಪ ಇದ್ದರು.

ಸ್ನೇಹ ಸಾಗರ ಸ್ವಸಹಾಯ ಮಂಡಳಿ ಸದಸ್ಯರು ನಾಡಗೀತೆ ಹಾಡಿದರು. ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ವಿ.ಟಿ. ಸ್ವಾಮಿ ಸ್ವಾಗತಿಸಿದರು. ಜಿ. ನಾಗೇಶ್ ವಂದಿಸಿದರು. ನಾರಾಯಣಮೂರ್ತಿ ಕಾನುಗೋಡು ನಿರೂಪಿಸಿದರು.

ಪ್ರತಿಭಾ ಪಲಾಯನಕ್ಕೆ ಅವಕಾಶ ನೀಡಬಾರದು: ವಿ. ಗಣೇಶ್

ಯುವಜನರಲ್ಲಿ ಅಸಂಖ್ಯಾತ ಪ್ರತಿಭಾವಂತರಿದ್ದಾರೆ. ಇಂತಹವರ ಪ್ರತಿಭಾ ಪಲಾಯನಕ್ಕೆ ಅವಕಾಶ ನೀಡದೆ ಅವರಿಗೆ ಸೂಕ್ತ ಉದ್ಯೋಗ ಕಲ್ಪಿಸುವ ಮೂಲಕ ನಮ್ಮಲ್ಲೇ ಉಳಿಸಿಕೊಳ್ಳುವ ಕೆಲಸ ಆಗಬೇಕಿದೆ ಎಂದು 11ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸಾಹಿತಿ ವಿ. ಗಣೇಶ್ ಅಭಿಪ್ರಾಯಪಟ್ಟರು.

ವಿಶ್ವದಲ್ಲಿಯೇ ಭಾರತ ಹೆಚ್ಚಿನ ಮಾನವ ಸಂಪತ್ತನ್ನು ಹೊಂದಿದೆ. ಈ ಸಂಪತ್ತಿನ ಸದ್ಬಳಕೆಯಾಗಬೇಕಾದರೆ ಪ್ರತಿಭೆಗಳಿಗೆ ಸೂಕ್ತ ಅವಕಾಶ ಕಲ್ಪಿಸಬೇಕು. ಉದ್ಯೋಗಾವಕಾಶ ಸೃಷ್ಟಿಸುವ ಜೊತೆಗೆ ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ ನೀಡುವ ಜವಾಬ್ದಾರಿಯನ್ನು ಸರ್ಕಾರ ಸಮರ್ಥವಾಗಿ ನಿರ್ವಹಿಸಬೇಕು ಎಂದು ಅವರು ಒತ್ತಾಯಿಸಿದರು.

ಹಸಿರಿನಿಂದ ಕಂಗೊಳಿಸುತ್ತಿದ್ದ ಮಲೆನಾಡು ಇಂದು ಅಭಿವೃದ್ಧಿಯ ಹೆಸರಿನಲ್ಲಿ ಬೆಂಗಾಡಾಗುತ್ತಿದೆ. ಹೆದ್ದಾರಿ ವಿಸ್ತರಣೆ ಹೆಸರಿನಲ್ಲಿ ನೂರಾರು ಮರಗಳನ್ನು ಕಡಿತಲೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಕಡಿದ ಮರಗಳ ಸ್ಥಾನದಲ್ಲಿ ಬದಲಿಯಾಗಿ ಸಸಿ ನೆಡುವ ಜವಾಬ್ದಾರಿಯನ್ನು ಮರೆಯುತ್ತಿರುವುದು ಬೇಸರದ ಸಂಗತಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT