ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 5 ಲಕ್ಷದೊಳಗಿನ ಕಾಮಗಾರಿಗಿಲ್ಲ ಇ–ಟೆಂಡರ್

ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಮಂಡಳಿ ಸಭೆಯಲ್ಲಿ ನಿರ್ಣಯ
Last Updated 14 ಅಕ್ಟೋಬರ್ 2021, 4:44 IST
ಅಕ್ಷರ ಗಾತ್ರ

ಶಿವಮೊಗ್ಗ: ₹ 5 ಲಕ್ಷದ ಒಳಗಿನ ಕಾಮಗಾರಿಗಳಿಗೆ ಗುತ್ತಿಗೆ ನೀಡಲು ಇ–ಟೆಂಡರ್‌ ರದ್ದು ಮಾಡಿ, ಭೌತಿಕವಾಗಿ ಕಚೇರಿಯಲ್ಲೇ ಟೆಂಡರ್ ಅರ್ಜಿ ಸ್ವೀಕರಿಸಲು ಅವಕಾಶ ಕಲ್ಪಿಸುವಂತೆ ಪ್ರಸ್ತಾವ ಸಲ್ಲಿಸಲು ಬುಧವಾರ ಮಲವಗೊಪ್ಪದಲ್ಲಿ ನಡೆದಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ 101ನೇ ಸದಸ್ಯ ಮಂಡಳಿ ಸಭೆ ಒಮ್ಮತದ ನಿರ್ಣಯ ಅಂಗೀಕರಿಸಿತು.

ಇ–ಟೆಂಡರ್ ಅನುಸಾರ ದೇಶದ ಯಾವುದೇ ಮೂಲೆಯಲ್ಲಿ ಗುತ್ತಿಗೆದಾರ ಕುಳಿತುಕೊಂಡು ಬಿಡ್ ಮಾಡಬಹುದು. ಬಿಡ್ ಮಾಡುವ ಗುತ್ತಿಗೆದಾರರು ಕಡಿಮೆ ಬೆಲೆ ನಮೂದಿಸುತ್ತಾರೆ. ನಂತರ ಉಪ ಗುತ್ತಿಗೆ ನೀಡುತ್ತಾರೆ. ಸ್ಥಳೀಯವಾಗಿ ಲಭ್ಯವಿಲ್ಲದ ಕಾಮಗಾರಿಯ ಗುಣಮಟ್ಟದ ಕೆಲಸ ನಿರ್ವಹಣೆ ಕಷ್ಟವಾಗುತ್ತದೆ. ಹಾಗಾಗಿ, ನಿಯಮದಲ್ಲಿ ಬದಲಾವಣೆ ತರಲು ಪ್ರಸ್ತಾವ ಸಲ್ಲಿಸಬೇಕು. ಸ್ಥಳೀಯ ಗುತ್ತಿಗೆದಾರರು ಇ–ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಕೊಡಬೇಕು ಎಂದು ಸದಸ್ಯರು ಆಗ್ರಹಿಸಿದರು.

ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಪ್ರತಿಯೊಬ್ಬ ನಿರ್ದೇಶಕರಿಗೂ ₹ 2 ಕೋಟಿಯಂತೆ ಒಟ್ಟು ₹ 25 ಕೋಟಿ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ತೀರ್ಮಾನ ಕೈಗೊಳ್ಳಲಾಯಿತು. ಪ್ರತಿ ಮಂಡಳಿ ಸಭೆಯ ಹಾಜರಾಗುವ ನಿರ್ದೇಶಕರಿಗೆ ನೀಡುವ ₹ 3 ಸಾವಿರ ಭತ್ಯೆಯನ್ನು
₹ 5 ಸಾವಿರಕ್ಕೆ ಹೆಚ್ಚಿಸುವುದು ಹಾಗೂ ಪ್ರಯಾಣ ಭತ್ಯೆ, ದಿನ ನಿತ್ಯ ಭತ್ಯೆ ನೀಡಬೇಕು ಎಂಬ ವಿಷಯಗಳನ್ನೂ ಸೇರಿಸಲಾಯಿತು.

2020–21ನೇ ಸಾಲಿನಲ್ಲಿ ರಾಜ್ಯ 2,705 ಲೆಕ್ಕ ಶೀರ್ಷಿಕೆಯಡಿ ಹೊಲಗಾಲುವೆ, ಬಸಿಗಾಲುವೆ, ಆಯಕಟ್ಟು ರಸ್ತೆ, ಭೂ ಸುಧಾರಣೆ, ಸಂಘದ ವರ್ಷದ ಕಾರ್ಯಾನುದಾನ, ಸಂಘದ ಪದಾಧಿಕಾರಿಗಳಿಗೆ ನೀಡುವ ತರಬೇತಿ ಹಾಗೂ ನಬಾರ್ಡ್ ಯೋಜನೆಗಳಿಗೆ ಒಟ್ಟು ₹ 16.29 ಕೋಟಿ ಅನುದಾನ ಹಂಚಿಕೆಯಾಗಿದೆ. ಇಲ್ಲಿಯವರೆಗೆ ಒಟ್ಟು ₹ 13.04 ಕೋಟಿ ಅನುದಾನ ಬಳಕೆಯಾಗಿದೆ. ಕೇಂದ್ರ ಯೋಜಿತಎಸ್‌ಡಿಪಿ ಯೋಜನೆಯಡಿ ಹೊಲಗಾಲುವೆ, ಬಸಿಗಾಲುವೆ, ಆಯಕಟ್ಟು ರಸ್ತೆ, ಭೂ ಸುಧಾರಣೆ ಕಾಮಗಾರಿಗಳಿಗೆ ₹ 5.96 ಕೋಟಿ ಅನುದಾನ ಮಂಜೂರಾಗಿದೆ. ಸಂಪೂರ್ಣ ಕಾರ್ಯಸಾಧನೆ ಮಾಡಲಾಗಿದೆ ಎಂದು ‘ಕಾಡಾ’ ಅಧ್ಯಕ್ಷೆ ಪವಿತ್ರಾ ರಾಮಯ್ಯ ಮಾಹಿತಿನೀಡಿದರು.

ಪಿಎಂಕೆಎಸ್‌ವೈ ಯೋಜನೆಯ ಅನುಸಾರ ಹೊಲಗಾಲುವೆ, ಬಸಿಗಾಲುವೆ, ಆಯಕಟ್ಟು ರಸ್ತೆ, ಭೂ ಸುಧಾರಣೆ, ಸಂಘದ ವರ್ಷದ ಕಾರ್ಯಾನುದಾನ, ಸಂಘದ ಪದಾಧಿಕಾರಿಗಳಿಗೆ ನೀಡುವ ತರಬೇತಿ, ಮೂಲಸೌಕರ್ಯ ಹಾಗೂ ಇನ್ನಿತರ ಕಾಮಗಾರಿಗಳಿಗೆ ₹ 12 ಕೋಟಿ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.

ಆಡಳಿತಾಧಿಕಾರಿ ಶಿವಕುಮಾರ್, ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಎಂಜಿನಿಯರ್ ರಾಘವನ್, ನಿರ್ದೇಶಕರಾದ ವಿನಾಯಕ್, ಮಂಜುನಾಥ್, ಷಡಾಕ್ಷರಿ, ರುದ್ರಮೂರ್ತಿ, ಷಣ್ಮುಖಪ್ಪ, ಸದಾಶಿವಪ್ಪ, ರಾಜಪ್ಪ, ಹನುಮಂತಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT