ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನವಟ್ಟಿ: ಆರೋಗ್ಯ ಕೇಂದ್ರದಲ್ಲಿ ರಾತ್ರಿ ವೈದ್ಯರೇ ಇಲ್ಲ

ಸಮುದಾಯ ಆರೋಗ್ಯ ಕೇಂದ್ರದ ದುಸ್ಥಿತಿ; ಸಿಬ್ಬಂದಿಗೆ ಕ್ವಾಟ್ರಸ್‌ ಭಾಗ್ಯವಿಲ್ಲ
Last Updated 26 ಮೇ 2021, 19:30 IST
ಅಕ್ಷರ ಗಾತ್ರ

ಆನವಟ್ಟಿ: ಇಲ್ಲಿನ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಯಾದರೂ, ಸಮುದಾಯ ಆರೋಗ್ಯ ಕೇಂದ್ರ ಮಾತ್ರ ಉನ್ನತ ದರ್ಜೆ ಆಸ್ಪತ್ರೆಯಾಗಿ ಪರಿವರ್ತನೆಯಾಗಿಲ್ಲ. ಆನವಟ್ಟಿ ಹಾಗೂ ಸುತ್ತಲ ಗ್ರಾಮಗಳ ಜನಸಂಖ್ಯೆ ಅನುಗುಣವಾಗಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಆಸ್ಪತ್ರೆಗೆ ಬರುವ ರೋಗಿಗಳಿಗೆ ರಾತ್ರಿ ವೈದ್ಯರ ಸೇವೆ ಲಭ್ಯವಿಲ್ಲ. ಶುಶ್ರೂಷಕಿಯರೇ (ನರ್ಸ್ ಆಫೀಸರ್) ರಾತ್ರಿ ಕರ್ತವ್ಯ ನೋಡಿಕೊಳ್ಳಬೇಕು. ಆದರೆ, ಅವರಿಗೆ ಸರ್ಕಾರಿ ಕ್ವಾಟ್ರಸ್ ಭಾಗ್ಯ ಇಲ್ಲ. ಇಂತಹ ಹತ್ತು ಹಲವು ಸಮಸ್ಯೆಗಳ ನಡುವೆ ಆನವಟ್ಟಿ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಕರ್ತವ್ಯ ನಿವರ್ಹಿಸಬೇಕಾಗಿದೆ.

ಐವರು ವೈದ್ಯರು, ಗುತ್ತಿಗೆ ಹಾಗೂ ಹೊರ ಗುತ್ತಿಗೆ ನರ್ಸ್ ಹಾಗೂ ಸಿಬ್ಬಂದಿ ಸೇರಿ ಒಟ್ಟು 47 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಾರೆ. ಅದರಲ್ಲಿ 12 ಸಿಬ್ಬಂದಿ ಹಳ್ಳಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಇಷ್ಟು ಸಿಬ್ಬಂದಿಯಲ್ಲಿ ಕೆಲವೇ ಸಿಬ್ಬಂದಿಗೆ ಸರ್ಕಾರಿ ಕ್ವಾಟ್ರಸ್ ಇದ್ದು, ನರ್ಸ್ ಆಫೀಸರ್ ಸೇರಿ ಬಹುಪಾಲು ಸಿಬ್ಬಂದಿ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ.

‘4 ಎಕರೆಗಿಂತಲೂ ಹೆಚ್ಚು ವಿಸ್ತೀರ್ಣವಿರುವ ಆಸ್ಪತ್ರೆ ಜಾಗದಲ್ಲಿ ಕ್ವಾಟ್ರಸ್ ನಿರ್ಮಿಸಲು ಜಾಗವಿದ್ದು, ಜನಪ್ರತಿನಿಧಿಗಳು ಹಾಗೂ ಇಲಾಖಾ ಅಧಿಕಾರಿಗಳು ಕ್ರಮ ಕೈಗೊಂಡರೆ ಆಸ್ಪತ್ರೆ ಪಕ್ಕದಲ್ಲೇ ಎಲ್ಲ ಸಿಬ್ಬಂದಿಗೂ ಕ್ವಾಟ್ರಸ್ ನಿರ್ಮಿಸಬಹುದು. ಆರೋಗ್ಯ ಸಿಬ್ಬಂದಿ ಹಾಗೂ ವೈದ್ಯರು ಆಸ್ಪತ್ರೆಯ ಕ್ವಾಟ್ರಸ್‍ನಲ್ಲೇ ಇದ್ದರೆ, ರೋಗಿಗಳಿಗೆ ಇನ್ನಷ್ಟು ಉತ್ತಮ ಆರೋಗ್ಯ ಸೇವೆ ನೀಡಲು ಸಹಾಯವಾಗುತ್ತದೆ’ ಎನ್ನುತ್ತಾರೆ ಗ್ರಾಮಸ್ಥರು.

ಕೋವಿಡ್ ಆಸ್ಪತ್ರೆಗೆ ಪ್ರತ್ಯೇಕ ಸಿಬ್ಬಂದಿ ನೇಮಿಸಿ: ಈಚೆಗೆ ಆನವಟ್ಟಿಯಲ್ಲಿ ಕೋವಿಡ್ ಸೋಂಕಿತರು ಹೆಚ್ಚಾಗುತ್ತಿರುವ ಕಾರಣ 50 ಹಾಸಿಗೆಗಳುಳ್ಳ ಕೋವಿಡ್ ಕೇಂದ್ರ ಉದ್ಘಾಟಿಸಲಾಗಿದೆ. ಈಗ ಇರುವ ಆಸ್ಪತ್ರೆ ಸಿಬ್ಬಂದಿಯನ್ನೇ ಕೋವಿಡ್‍ ಚಿಕಿತ್ಸೆಗೆ ನೇಮಿಸಲಾಗುತ್ತಿದೆ. ಇದರಿಂದ ಇತರೆ ರೋಗಿಗಳಿಗೆ ಸೋಂಕು ತಗಲುವ ಅಪಾಯವಿದ್ದು, ಕೋವಿಡ್ ಸೋಂಕಿತರಿಗಾಗಿ ಪ್ರತ್ಯೇಕ ಸಿಬ್ಬಂದಿ ನೇಮಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

‘ಆನವಟ್ಟಿಯ ಸರ್ಕಾರಿ ಆಸ್ಪತ್ರೆ ಮೂಲ ಸೌಕರ್ಯದಿಂದ ಹೊರಗುಳಿದಿದೆ. ವೈದ್ಯಕೀಯ ಸಿಬ್ಬಂದಿ ಕೊರತೆ ಇದ್ದು, ರಾತ್ರಿ ವೇಳೆ ಯಾವ ರೀತಿಯ ಚಿಕಿತ್ಸೆಯೂ ಸಿಗುವುದಿಲ್ಲ. ಸರ್ಕಾರಿ ಆಸ್ಪತ್ರೆ ನಂಬಿಕೊಂಡು ಬಂದವರಿಗೆ ಶಿಕಾರಿಪುರ ಮಾರ್ಗ ತೋರಿಸುವುದು ಇಲ್ಲಿನ ನಿತ್ಯ ಕಾಯಕವಾಗಿದೆ. ದಿನದ 24 ಗಂಟೆ ಚಿಕಿತ್ಸೆ ಸಿಗುವಂತೆ ಮಾಡಿ ರೋಗಿಗಳ ಪ್ರಾಣ ಉಳಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು’ ಎಂದು ಕರವೇ ಯುವ ಘಟಕದ ಅಧ್ಯಕ್ಷ ಅಮಿತ್ ಎಸ್.ಎ. ಆಗ್ರಹಿಸುವರು.

‘ಶಾಸಕ ಕುಮಾರ ಬಂಗಾರಪ್ಪ ಅವರ ಸತತ ಪ್ರಯತ್ನದಿಂದ ಆನವಟ್ಟಿಯಲ್ಲಿ ಸುಸಜ್ಜಿತ ಕೋವಿಡ್ ಕೇರ್ ಸೆಂಟರ್ ಪ್ರಾರಂಭವಾಗಿದೆ. ಆಸ್ಪತ್ರೆಗೆ ಬೇಕಾಗುವ ಕ್ವಾಟ್ರಸ್ ಮುಂತಾದ ಮೂಲಸೌಲಭ್ಯ ಒದಗಿಸುವ ಪ್ರಯತ್ನ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸವಲತ್ತುಗಳನ್ನು ಕಲ್ಪಿಸುವ ಯೋಜನೆ ರೂಪಿಸಿದ್ದಾರೆ’ ಎನ್ನುವರು ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಪ್ರಧಾನ ಕಾರ್ಯದರ್ಶಿ ಶಬ್ಬೀರ್ ಅಹ್ಮದ್ ಕಿಲ್ಲೇದಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT