ಶನಿವಾರ, ಮೇ 28, 2022
24 °C
ಮಕ್ಕಳಿಂದ ಅತಿಯಾದ ಮೊಬೈಲ್‌ ಬಳಕೆಗೆ ನ್ಯಾಯಾಧೀಶ ವಿಷಾದ

ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ: ನ್ಯಾಯಾಧೀಶ ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಅತಿಯಾದ ಮೊಬೈಲ್‌ ಬಳಕೆ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶರಾದ ಎಸ್.ಎ. ಮುಸ್ತಫಾ ಹುಸೇನ್ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಸೇವಾ ಯೋಜನೆ, ಎಟಿಎನ್‍ಸಿಸಿ ಕಾಲೇಜು, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಮಂಗಳವಾರ ಎಟಿಎನ್‍ಸಿಸಿ ಕಾಲೇಜು ಸಭಾಂಗಣದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ‘ಮಹಿಳೆಯರು ಮತ್ತು ಮಕ್ಕಳ ಅಕ್ರಮ ಸಾಗಾಣಿಕೆ ತಡೆ’ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹದಿಹರೆಯದ ವಿದ್ಯಾರ್ಥಿಗಳಲ್ಲಿ ಮೊಬೈಲ್‌ ಬಳಕೆ ಹೆಚ್ಚುತ್ತಿರುವುದು ಆತಂಕಕಾರಿ. ಸದಾ ಮೊಬೈಲ್‌ ಗೇಮ್‌, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವುದರಿಂದ ಮಾನಸಿಕ ಸ್ಥಿತಿ ಪ್ರಚೋದನಕಾರಿ ಆಗುತ್ತದೆ. ಇದರ ಪರಿಣಾಮ ಅವರ ನಡುವಳಿಕೆಗಳ ಮೇಲೆ ಆಗುತ್ತಿದೆ. ಇಂತಹ ಮಕ್ಕಳ ಮಾನಸಿಕ ಆರೋಗ್ಯ ಏರುಪೇರಾಗುತ್ತದೆ. ನಕಾರಾತ್ಮಕ ನಡವಳಿಕೆಗೆ ಪ್ರಯತ್ನಿಸುತ್ತಾರೆ ಎಂದರು.

ಮಕ್ಕಳ ಮನಸ್ಸನ್ನು ವಿದ್ಯಾಭ್ಯಾಸದ ಕಡೆ ಕೇಂದ್ರೀಕರಿಸಿದರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ಮಾಹಿತಿ, ಫೋಟೊಗಳನ್ನು ಹಂಚಿಕೊಳ್ಳುವಾಗ ಎಚ್ಚರದಿಂದ ಇರಬೇಕು. ದುರುಪಯೋಗ ಆಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದರು.

ಮೊಬೈಲ್‌ ಬಳಕೆಗೆ ಕಡಿವಾಣ ಹಾಕದಿದ್ದರೆ ಮಕ್ಕಳು, ಯುವಜನರು ಮಾನಸಿಕ, ದೈಹಿಕ ಮತ್ತು ಕಾನೂನಿನ ಸಂಘರ್ಷಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಅಗತ್ಯಕ್ಕೆ ಅನುಗುಣವಾಗಿ ಮಾತ್ರ ಮೊಬೈಲ್ ಬಳಕೆ ಮಾಡಬೇಕು. ಈ ನಿಟ್ಟಿನಲ್ಲಿ ಅರಿವು ಹೆಚ್ಚಬೇಕು ಎಂದು ಕಿವಿ ಮಾತು ಹೇಳಿದರು.

ಮನೋವೈದ್ಯೆ ಡಾ.ಪ್ರೀತಿ ವಿ. ಶ್ಯಾನ್‍ಭಾಗ್ ಮಾತನಾಡಿ, ‘ಕಾನೂನಿಗೂ, ಮಾನಸಿಕ ಆರೋಗ್ಯಕ್ಕೂ ಹತ್ತಿರದ ನಂಟಿದೆ. ಒಂದು ಅಪರಾಧದ ಹಿಂದೆ ಸಾಮಾನ್ಯವಾಗಿ ಮಾನಸಿಕ ಸ್ಥಿಮಿತ ಇಲ್ಲದಿರುವುದನ್ನು ಕಾಣಬಹುದು. ಮಾನಸಿಕ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳುವುದು ಮುಖ್ಯ. ಅದರಲ್ಲೂ ಹದಿಹರೆಯದ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪ್ರೌಢಾವಸ್ಥೆಯಲ್ಲಿರುವ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡುವುದು ಅಗತ್ಯ’ ಎಂದು ಹೇಳಿದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಜಿ.ಎಂ. ರೇಖಾ ಮಾತನಾಡಿ, ‘ಮಹಿಳೆಯರು ಮತ್ತು ಮಕ್ಕಳ ಅಕ್ರಮ ಸಾಗಾಣಿಕೆ ಜಗತ್ತಿನ ಮೂರು ಪ್ರಮುಖ ಅಪರಾಧಗಳಲ್ಲಿ ಒಂದಾಗಿದ್ದು, ದೇಶದಾದ್ಯಂತ ಈ ಅಪರಾಧ ನಡೆಯುತ್ತಲೇ ಇದೆ. ಅನಕ್ಷರತೆ, ನಿರುದ್ಯೋಗ, ಬಡತನ ಇತರೆ ಸಾಮಾಜಿಕ, ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿರುವ ದುರ್ಬಲ ವರ್ಗವನ್ನು ಗುರಿಯಾಗಿಸಿಕೊಂಡು ಈ ಕೃತ್ಯವೆಸಲಾಗುತ್ತಿದೆ’ ಎಂದರು.

ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಗುರುತಿಸಲಾದ ಎನ್‍ಜಿಒದಿಂದ ಸಂತ್ರಸ್ತರಿಗೆ ನೆರವು ಮತ್ತ ಪುನರ್‌ ವಸತಿ ಸಿಗುತ್ತದೆ. 2014ರಲ್ಲಿ ಜಿಲ್ಲೆಯಲ್ಲಿ ಆರಂಭವಾದ ಸಖಿ-ಒನ್ ಸ್ಟಾಪ್ ಸೆಂಟರ್‌ನಲ್ಲಿ ವೈದ್ಯಕೀಯ, ಕಾನೂನು, ಪೊಲೀಸ್, ಆಪ್ತ ಸಮಾಲೋಚನೆ ಮತ್ತು ಮಧ್ಯಂತರ ಪರಿಹಾರ ಸೇರಿ ಒಂದೇ ಸೂರಿನಡಿ ಎಲ್ಲ ರೀತಿಯ ನೆರವು ದೊರಕಲಿದೆ ಎಂದು ಮಾಹಿತಿ ನೀಡಿದರು.

ಮಕ್ಕಳ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಕ್ಕಳ ಸಹಾಯವಾಣಿ 1098 ಮತ್ತು ಮಹಿಳೆಯರ ದೌರ್ಜನ್ಯ ಇತರೆ ಪ್ರಕರಣಗಳಿಗೆ ಸಂಬಂಧಿಸಿದಂತೆ 181 ಸಹಾಯವಾಣಿ ಹಾಗೂ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಬಹುದು ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್‌. ಸರಸ್ವತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಟಿಎನ್‍ಸಿಸಿ ಕಾಲೇಜು ಪ್ರಾಂಶುಪಾಲ ಪ್ರೊ.ಎಚ್.ಎಂ. ಸುರೇಶ್, ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷ ಅಶ್ವಥ್
ನಾರಾಯಣ ಶೆಟ್ಟಿ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎನ್. ದೇವೇಂದ್ರ, ಎಟಿಎನ್‍ಸಿಸಿ ಕಾರ್ಯಕ್ರಮಾಧಿಕಾರಿ ಪ್ರೊ.ಕೆ.ಎಂ. ನಾಗರಾಜು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.