ಶನಿವಾರ, ಅಕ್ಟೋಬರ್ 31, 2020
24 °C

ಸೊರಬ: ರೈತ ವಿರೋಧಿ ಕಾಯ್ದೆಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೊರಬ: ಭೂಮಿಯನ್ನು ಬಂಡವಾಳಶಾಹಿಗಳಿಗೆ ಹಸ್ತಾಂತರಿಸಲು ಸರ್ಕಾರ ಭೂಸುಧಾರಣ ಕಾಯ್ದೆಗೆ ತರಾತುರಿಯಲ್ಲಿ ತಿದ್ದುಪಡಿ ತರಲು ಮುಂದಾಗಿದೆ ಎಂದು ಪ್ರಗತಿಪರ ಸಂಘಟನೆಗಳ ತಾಲ್ಲೂಕು ಸಂಚಾಲಕ ರಾಜಪ್ಪ ಮಾಸ್ತರ್ ಆರೋಪಿಸಿದರು.

ವಿವಿಧ ಕಾಯ್ದೆ ತಿದ್ದುಪಡಿ ವಿರೋಧಿಸಿ ಸೆ.28ರಂದು ನಡೆಯುವ ಕರ್ನಾಟಕ ಬಂದ್ ಬೆಂಬಲಿಸಿ ಶನಿವಾರ ಪಟ್ಟಣದಲ್ಲಿ ಪ್ರಗತಿಪರ ಸಂಘಟನೆಗಳು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಕೊರೊನಾದಿಂದ ಜನಸಾಮಾನ್ಯರು ಸಂಕಷ್ಟದಲ್ಲಿದ್ದು, ಅವರ ಬದುಕಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷ ಯೊಜನೆಗಳನ್ನು ರೂಪಿಸುವ ಬದಲಿಗೆ ರೈತವಿರೋಧಿ, ಜನವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಅನ್ಯಾಯ ಎಸಗುತ್ತಿವೆ. ಬಡ‌ ಕುಟುಂಬಗಳು ಇರುವ ಭೂಮಿಯನ್ನು ಉಳ್ಳವರಿಗೆ ಮಾರಾಟ ಮಾಡಿ ಬೀದಿಪಾಲಾಗುವ ಸಾಧ್ಯತೆಗಳಿವೆ. ಸರ್ಕಾರ ಕಾಯ್ದೆ ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರನ್ನು ಕರೆದು ಮಾತನಾಡಿಸುವ ಸೌಜನ್ಯ ತೋರದೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿವೆ ಎಂದು ದೂರಿದರು.

ರಾಜ್ಯ ಕಾರ್ಯಾಧ್ಯಕ್ಷ ಮಂಜುನಾಥಗೌಡ, ‘ಅಧಿವೇಶನದಲ್ಲಿ ಬಹುಮತ ಇಲ್ಲದಿದ್ದರೂ ಮಸೂದೆ ಪಾಸು ಮಾಡಲು ಮುಂದಾಗಿರುವ ಸರ್ಕಾರ ರೈತರನ್ನು ಭೂರಹಿತರಾಗಿ ಮಾಡಲು ಹೊರಟಿದೆ’ ಎಂದು ದೂರಿದರು.

ಡಾ.ಜ್ಞಾನೇಶ್, ‘ಆಳುವ ಸರ್ಕಾರಗಳು ರೈತರ ಆಕ್ರಂದನವನ್ನು ಯಾವತ್ತೂ ಗಂಭೀರವಾಗಿ ಪರಿಗಣಿಸಿಲ್ಲ. ಕಾಯ್ದೆ ತಿದ್ದುಪಡಿಯನ್ನು ಸಮರ್ಥನೆ ಮಾಡುವ ರೈತರಿಗೆ ಮೋಸ ಮಾಡುತ್ತಿವೆ. ಹೋರಾಟ ನಡೆಸುವ ರೈತರನ್ನು ಶ್ರೀಮಂತರು ಎಂದು ಹೇಳುವ ಸಚಿವರು ಎಲ್ಲ ಕಾಲಕ್ಕೂ ರೈತರು ಗುಡಿಸಲಿನಲ್ಲಿ ಬದುಕಬೇಕು ಎಂದು ಹೇಳುತ್ತಿರುವಂತಿದೆ’ ಎಂದರು.

ಜನಸಂಗ್ರಾಮ ಪರಿಷತ್ ಜಿಲ್ಲಾಧ್ಯಕ್ಷ ವಾಮನಗೌಡ, ‘ಕಾಯ್ದೆ ಅನುಷ್ಠಾನಗೊಂಡರೆ ಶ್ರೀಮಂತರ ಜಮೀನನ್ನು ಬಂದೂಕು ಹಿಡಿದು ಕಾಯುವ ಪರಿಸ್ಥಿತಿ ದೂರವಿಲ್ಲ. ಕಾಯ್ದೆ ವಿರೋಧಿಸಿ ಹಮ್ಮಿಕೊಂಡಿರುವ ಹೋರಾಟ ಆಂದೋಲನ ರೀತಿಯಲ್ಲಿ ಬದಲಾದರೆ ಮಾತ್ರ ಸರ್ಕಾರ ಹಿಂಪಡೆಯಬಹುದು’ ಎಂದು ಹೇಳಿದರು.

ಸಾಮಾಜಿಕ ಹೋರಾಟಗಾರ ಕೆ. ಮಂಜುನಾಥ್ ಹಳೇಸೊರಬ, ಸಮಾಜ ಸೇವಕ ರಶೀದ್ ಸಾಬ್, ತಾಲ್ಲೂಕು ರೈತ ಸಂಘದ ಈಶ್ವರಪ್ಪ ಕೊಡಕಣಿ, ಸೀತಾ ಉಳವಿ, ಮಂಜು ಆರೇಕೊಪ್ಪ, ಆರತಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು