ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಯುತ ಹಕ್ಕಿಗಾಗಿ ಅಂಗವಿಕಲರ ಪರದಾಟ

ವ್ಯವಸ್ಥೆಯ ಲೋಪಗಳ ಪರಿಣಾಮ ಗುರಿ ತಲುಪದ ಹೋರಾಟ
Last Updated 3 ಡಿಸೆಂಬರ್ 2020, 13:39 IST
ಅಕ್ಷರ ಗಾತ್ರ

ಶಿವಮೊಗ್ಗ: ಸರ್ಕಾರ ಅಂಗವಿಕಲರಿಗಾಗಿ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ. ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ, ಬಡ್ತಿಯ ಅವಕಾಶ ನೀಡಿದೆ. ಆದರೂ, ಅವರ ಬದುಕು ಹಸನಾಗಿಲ್ಲ. ಸೌಲಭ್ಯಗಳು ತಲುಪಿಲ್ಲ. ನ್ಯಾಯಯುತ ಹಕ್ಕಿಗಾಗಿ ನಡೆಸಿದ ಅವರ ಹೋರಾಟ ಗುರಿ ಮುಟ್ಟಿಲ್ಲ.

ಜಿಲ್ಲೆಯಲ್ಲಿ ದೈಹಿಕ ಅಂಗವಿಕಲರು, ಬುದ್ಧಿಮಾಂದ್ಯರು, ದೃಷ್ಟಿ, ವಾಕ್, ಶ್ರವಣ ದೋಷ ಇರುವವರೂ ಸೇರಿ 18,636 ಜನ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅಂಗವಿಕಲರ ಸಂಘಟನೆಗಳ ಪ್ರಕಾರ ಜಿಲ್ಲೆಯಲ್ಲಿ 50 ಸಾವಿರಕ್ಕೂ ಹೆಚ್ಚು ಸದಸ್ಯರು ಇದ್ದಾರೆ. ಸರ್ಕಾರದ ಸೌಲಭ್ಯ ಪಡೆದವರು ಬೆರಳೆಣಿಕೆಯಷ್ಟು.

ಅಂಗವಿಕಲರು ಸರ್ಕಾರದ ಸವಲತ್ತು ಪಡೆಯಬೇಕಾದರೆ ಅವರ ಅಂಗ ವೈಕಲ್ಯ ಶೇ 40ಕ್ಕಿಂತ ಹೆಚ್ಚು ಇರಬೇಕು. ಸೂಚಿತ ವೈದ್ಯರಿಂದ ಪ್ರಮಾಣಪತ್ರ ಪಡೆದ ನಂತರ ಇಲಾಖೆಯಲ್ಲಿ ಹೆಸರು ನೋಂದಾಯಿಕೊಂಡವರಿಗೆ ಗುರುತಿನ ಚೀಟಿ ನೀಡಲಾಗುತ್ತದೆ. ನಂತರ ಅವರು ಸೌಲಭ್ಯ ಪಡೆಯಬಹುದು.

ಮಾಸಾಶನಕ್ಕೂ ಪರದಾಟ: ಶೇ 75ಕ್ಕಿಂತ ಹೆಚ್ಚು ನೂನ್ಯತೆ ಇರುವ ಅಂಗವಿಕಲರಿಗೆ ₹ 1,400 ಹಾಗೂ ಶೇ 40ಕ್ಕಿಂತ ಹೆಚ್ಚು ಸಮಸ್ಯೆ ಇರುವವರಿಗೆ ₹ 1 ಸಾವಿರ ಮಾಸಾಶನವನ್ನು ಸರ್ಕಾರ ನೀಡುತ್ತದೆ. ಕೆಲವು ಬಾರಿ ಐದಾರು ತಿಂಗಳಾದರೂ ಸೌಲಭ್ಯ ಸಿಗುವುದಿಲ್ಲ. ಹಣ ಪಡೆಯಲು ಪರದಾಟ ನಡೆಸಬೇಕು ಎಂದು ಹಲವರು ದೂರುತ್ತಾರೆ.

ಗಾಲಿ ಕುರ್ಚಿಗಳೂ ಇಲ್ಲ: 20ರಿಂದ 60 ವರ್ಷಗಳ ಒಳಗೆ ಇರುವ ಅಂಗವಿಕಲರ ಕುಟುಂಬದ ವಾರ್ಷಿಕ ವರಮಾನ ₹ 2 ಲಕ್ಷಕ್ಕಿಂತ ಕಡಿಮೆ ಇದ್ದರೆ ಅವರಿಗೆ ಯಂತ್ರಚಾಲಿತ ತ್ರಿಚಕ್ರ ವಾಹನಗಳನ್ನು ವಿತರಿಸಬೇಕು. ಜಿಲ್ಲೆಯಲ್ಲಿ ಅಂಥ ವ್ಯಕ್ತಿಗಳಿಗೆ ಗಾಲಿ ಕುರ್ಚಿಗಳನ್ನೂ ನೀಡಿಲ್ಲ. ಇಂದಿಗೂ ಎಷ್ಟೋ ಅಂಗವಿಕಲರು ಕೋಲುಗಳನ್ನೇ ಊರಿಕೊಂಡು ನಡೆದಾಡುತ್ತಿದ್ದಾರೆ.

ವೈದ್ಯಕೀಯ ಪ್ರಮಾಣಪತ್ರ ಪಡೆಯುವುದಕ್ಕೂ ಲಂಚ ನೀಡಬೇಕಿದೆ. ಸರ್ಕಾರ ಅಂಗವಿಕಲರಿಗಾಗಿಯೇ ಹಲವು ಯೋಜನೆ ರೂಪಿಸಿದೆ. ಅಂತಹ ಯೋಜನೆಗಳ ಸೌಲಭ್ಯ ಪಡೆಯಲು ಅರ್ಹತೆ ಇದ್ದರೂ ಕಚೇರಿಗಳಿಗೆ ಅನಗತ್ಯ ಅಲೆಸುತ್ತಾರೆ. ದೈಹಿಕ ನ್ಯೂನತೆ ಇರುವ ಕಾರಣಕ್ಕಾದರೂ ಮಾನವೀಯತೆ, ಅನುಕಂಪ ತೋರುವುದಿಲ್ಲ. ಭ್ರಷ್ಟಾಚಾರ ಮಿತಿ ಮೀರಿದೆ ಎಂಬುದು ಭಾರತೀಯ ಮಾನವ ಹಕ್ಕುಗಳ ಸಮಿತಿ ಅಂಗವಿಕಲರ ಘಟಕದ ಅಧ್ಯಕ್ಷ ಸಿ.ಆರ್. ಶಿವಕುಮಾರ್ ಆರೋಪ.

‘ಶೇ 70ಕ್ಕೂ ಹೆಚ್ಚು ಸೌಲಭ್ಯಗಳನ್ನು ಅಂಗವಿಕಲರ ಹೆಸರು ಹೇಳಿಕೊಂಡು ಬೇರೆಯವರು ಕಬಳಿಸುತ್ತಿದ್ದಾರೆ. ಹಣ ನೀಡದೇ ಯಾವ ಕಚೇರಿಗಳಲ್ಲೂ ಸೌಲಭ್ಯಗಳು ಸುಲಭವಾಗಿ ಸಿಗುತ್ತಿಲ್ಲ. ಜಿಲ್ಲೆಯ ವಿಕಲಚೇತನರ ಇಲಾಖೆ ಅಧಿಕಾರಿಗಳು ಇಂತಹ ದೂರಿಗೆ ಸ್ಪಂದಿಸುವುದೇ ಇಲ್ಲ. ಅಂಗವಿಕಲರ ಅಹವಾಲು ಸ್ವೀಕರಿಸಲು ಪ್ರವಾಸ ಮಾಡುವುದಿಲ್ಲ’ ಎಂದು ದೂರುತ್ತಾರೆ ಅಂಗವಿಕಲರ ಹಕ್ಕುಗಳ ಹೋರಾಟದ ಮುಂಚೂಣಿಯಲ್ಲಿರುವ ಕೆಪಿಸಿ ನೌಕರ ಹೊಂಬೇಗೌಡ.

‘1995ರ ಕಾಯ್ದೆ ಪ್ರಕಾರ ಸರ್ಕಾರಿ ನೌಕರಿ, ಬಡ್ತಿಗಳಲ್ಲಿ ಮೀಸಲಾತಿ ನೀಡಬೇಕು. ಈ ಕಾನೂನಿನ ಪಾಲನೆ ಸರಿಯಾಗಿ ಆಗುತ್ತಿಲ್ಲ. ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಒಬ್ಬ ಅಂಗವಿಕಲರಿಗೆ ನೌಕರಿ ನೀಡಬೇಕು ಎಂಬ ನಿಯಮ ಪಾಲನೆಯಾಗಿಲ್ಲ. ವರ್ಗಾವಣೆ ಮಾಡಬಾರದು ಎಂಬ ನಿಯಮ ಅನುಷ್ಠಾನವಾಗಿಲ್ಲ. ಕಚೇರಿಗಳಲ್ಲಿ ಲಿಫ್ಟ್‌, ಪ್ರತ್ಯೇಕ ಶೌಚಾಲಯಗಳು ಇಲ್ಲ. ಅಧಿಕಾರಿಗಳು ಕೀಳಾಗಿ ಕಾಣುತ್ತಾರೆ’ ಎಂದು ನೋವು ತೋಡಿಕೊಂಡರು.

‘ದೈಹಿಕವಾಗಿ ಸಬಲರಾಗಿರುವ ಎಷ್ಟೋ ಜನರು ಲಂಚ ಕೊಟ್ಟು ಅಂಗವಿಕಲರ ಪ್ರಮಾಣ ಪತ್ರ ಪಡೆದು ನೌಕರಿ, ಸೌಲಭ್ಯ ಪಡೆದಿದ್ದಾರೆ. ನಮ್ಮ ಹಕ್ಕುಗಳನ್ನು ಕಸಿದುಕೊಂಡಿದ್ದಾರೆ. ಕೇಂದ್ರದ ಒಂದು ದೇಶ–ಒಂದು ಕಾರ್ಡ್’ ಸೌಲಭ್ಯಗಳೂ ದುರುಪಯೋಗವಾಗಿವೆ. ಪ್ರತಿ ಇಲಾಖೆಯೂ ಅಂಗವಿಕಲರಿಗೆ ಹಣಕಾಸಿನ ನೆರವು ನೀಡುತ್ತವೆ. ಕೋಟ್ಯಂತರ ಹಣವಿದೆ. ಆದರೆ, ಪ್ರಯೋಜನವಾಗುತ್ತಿಲ್ಲ’ ಎನ್ನುತ್ತಾರೆ ಅಂಗವಿಕಲ ನೌಕರ ಯೋಗೇಶ್.

ರಚನೆಯಾಗದ ಸಮಿತಿ: ಅಂಗವಿಕಲರ ಕುಂದುಕೊರತೆ ಆಲಿಸಲು, ಪರಿಹಾರ ದೊರಕಿಸಲು ನಿಯಮದಂತೆ ಜಿಲ್ಲಾ ಮಟ್ಟದ ಸಮಿತಿ ರಚಿಸಬೇಕು. ಆದರೆ, ಇದುವರೆಗೂ ಸಮಿತಿ
ರಚನೆಯಾಗಿಲ್ಲ.

ಶೇ 99ರಷ್ಟು ಕಚೇರಿಗಳಲ್ಲಿ ಲಿಫ್ಟ್‌, ರ‍್ಯಾಂಪ್‌ ಇಲ್ಲ

ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಹೊರತುಪಡಿಸಿದರೆ ಶೇ 99ರಷ್ಟು ಸರ್ಕಾರಿ ಕಚೇರಿಗಳಲ್ಲಿ ಲಿಫ್ಟ್‌, ರ‍್ಯಾಂಪ್‌ ಸೌಲಭ್ಯಗಳೇ ಇಲ್ಲ. ಕಚೇರಿಗಳಿಗೆ ಬರುವ ಅಂಗವಿಕಲರು ಕಷ್ಟಪಟ್ಟು ಮೆಟ್ಟಿಲುಗಳನ್ನು ಏರಿ ಕಚೇರಿ ತಲುಪಬೇಕಿದೆ. ಇಂತಹ ಸೂಕ್ಷ್ಮ ಸನ್ನಿವೇಶ ನಿಭಾಯಿಸಲು ಸರ್ಕಾರ ಅಗತ್ಯ ಕ್ರಮಗಳನ್ನೇ ಕೈಗೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT