ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನಂದಪುರ: ಲಾಭದ ದಾರಿ ತೋರಿದ ಅನಾನಸ್‌ ಕೃಷಿ

ತೆಂಗು, ಬಾಳೆ, ಅಡಿಕೆ, ಗೇರು ಇವೆ ಚಂದ್ರಶೇಖರ್ ಗೌಡ್ರ ತೋಟದಲ್ಲಿ
Last Updated 29 ಡಿಸೆಂಬರ್ 2021, 5:56 IST
ಅಕ್ಷರ ಗಾತ್ರ

ಆನಂದಪುರ: ಪ್ರಸ್ತುತ ಸನ್ನಿವೇಶದಲ್ಲಿ ಕೃಷಿಯಿಂದ ವಿಮುಖರಾಗುತ್ತಿರುವ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಕೃಷಿಯನ್ನೇ ಜೀವನದ ಮೂಲ ಆಧಾರವಾಗಿ ಅವಲಂಬಿಸಿ ಅದರಲ್ಲೇ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ ಚಂದ್ರಶೇಖರ್ ಗೌಡ್ರು ಹಾಗೂ ಅವರ ಕುಟುಂಬ.

ಆನಂದಪುರ ಸಮೀಪದ ಹೊಸಗುಂದದಲ್ಲಿ ನೆಲಸಿರುವ ಇವರು ತಮ್ಮ 4 ಎಕರೆ ಜಮೀನಿನಲ್ಲಿ ತೆಂಗು, ಬಾಳೆ, ಅಡಿಕೆ, ಅನಾನಸ್ ಸೇರಿ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಮೊದಲು ಲಗೇಜ್ ಆಟೊದಿಂದ ಬಂದ ಆದಾಯದಿಂದಲೇ ಜೀವನ ಸಾಗಿಸುತ್ತಿದ್ದ ಇವರು ಇಂದು ಕೃಷಿಯನ್ನೇ ಆದಾಯದ ಮೂಲವಾಗಿಸಿಕೊಂಡಿದ್ದಾರೆ.

ಏಕಬೆಳೆ ಪದ್ಧತಿಯ ಬೆಳೆ ಬೆಳೆಯುವುದಕ್ಕಿಂತ ಮಿಶ್ರಬೆಳೆ ಆಳವಡಿಸಿಕೊಳ್ಳುವುದರಿಂದ ಒಂದು ಬೆಳೆಯಲ್ಲಾದ ನಷ್ಟವನ್ನು ಮತ್ತೊಂದು ಬೆಳೆಯಲ್ಲಿ ಸರಿದೂಗಿಸಬಹುದು ಎನ್ನುವ ಆಲೋಚನೆಯಲ್ಲಿ ಅಡಿಕೆಯ ನಡುವೆ ಅನಾನಸ್‌ ಅನ್ನು ಬೆಳೆಯುತ್ತಿದ್ದಾರೆ. ಇದರಿಂದಾಗಿ ನೀರಿನ ಉಳಿತಾಯದ ಜೊತೆಗೆ ಕೆಲಸ, ಸಮಯವೂ ಉಳಿಯುತ್ತದೆ ಎಂಬುದು ಇವರ ಅಭಿಪ್ರಾಯ.

ಮೂರು ಎಕರೆ ಅಡಿಕೆ ತೋಟದಲ್ಲಿ 3 ವರ್ಷಗಳಿಂದ ಅನಾನಸ್ ಬೆಳೆಯುತ್ತಿದ್ದಾರೆ. ಕೊರೊನಾ ಕಾರಣದಿಂದ ಎರಡು ವರ್ಷಗಳಿಂದ ಬೆಲೆ ಕುಸಿತದಿಂದ ನಷ್ಟ ಅನುಭವಿಸಿದ್ದರು. ಪ್ರಸ್ತುತ ಅನಾನಸ್ ಹಣ್ಣಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಹೀಗಾಗಿ ಇದರ ಜೊತೆಗೆ 2 ಎಕರೆ ಜಮೀನು ಗೇಣಿ ಪಡೆದು ಅನಾನಸ್ ಬೆಳೆಯುತ್ತಿದ್ದಾರೆ.

ಮಾರುಕಟ್ಟೆ ಸಮಸ್ಯೆ ಇಲ್ಲ: ‘ಪ್ರತಿ ವರ್ಷ ನಾವು ಬೆಳೆಯುತ್ತಿರುವ ಅನಾನಸ್ ದೆಹಲಿ ಮಾರುಕಟ್ಟೆಗೆ ಹೋಗುವುದರಿಂದ ಮಾರುಕಟ್ಟೆ ಸಮಸ್ಯೆ ಬಂದಿಲ್ಲ. ಬನವಾಸಿ ಹಾಗೂ ಶಿರಸಿಯ ವರ್ತಕರು ದೆಹಲಿ ಮಾರುಕಟ್ಟೆಗೆ ಕಳುಹಿಸುತ್ತಾರೆ. ಸದ್ಯಕ್ಕೆ ಅನಾನಸ್ ಉತ್ತಮ ಆದಾಯ ತಂದುಕೊಡುವ ಬೆಳೆಯಾಗಿದೆ’ ಎಂದು ಚಂದ್ರಶೇಖರಪ್ಪ ಗೌಡ್ರು ತಿಳಿಸಿದರು.

ಅನಾನಸ್ ಬೆಳೆ ಕೈಗೆ ಸಿಗಲು 16 ತಿಂಗಳುಗಳಿಂದ 18 ತಿಂಗಳು ಬೇಕಾಗುತ್ತದೆ. ಒಂದು ಎಕರೆಗೆ ಸುಮಾರು ₹ 2 ಲಕ್ಷದಷ್ಟು ಖರ್ಚು ಆಗುತ್ತದೆ. ಉತ್ತಮ ಮಾರುಕಟ್ಟೆಯ ಜೊತೆಗೆ ಪ್ರಸ್ತುತ ಇರುವ ಉತ್ತಮ ಬೆಲೆಯೇ ಸಿಕ್ಕರೆ ಎಕರೆಗೆ ₹ 4 ಲಕ್ಷಕ್ಕೂ ಹೆಚ್ಚು ಲಾಭ ಗಳಿಸಬಹುದು. ಮುಂದಿನ ದಿನಗಳಲ್ಲಿ ಅಡಿಕೆ ಫಸಲು ಬರುತ್ತಿದ್ದು, ಉತ್ತಮ ಆದಾಯದ ನೀರಿಕ್ಷೆಯಲ್ಲಿದ್ದಾರೆ. ಕೊಳವೆ ಬಾವಿಯ ಮೂಲಕ ಎಲ್ಲ ಬೆಳೆಗಳಿಗೆ ನೀರುಣಿಸುತ್ತಿದ್ದಾರೆ.

ಅಡಿಕೆ ಸಸಿಗಳು ಲಭ್ಯ:ಅಡಿಕೆ ಬೆಲೆ ನಿರಂತರವಾಗಿ ಏರುತ್ತಿರುವ ಕಾರಣ ಅಡಿಕೆ ಬೆಳೆಯುವವರ ಸಂಖ್ಯೆ ಹೆಚ್ಚುತ್ತಿದೆ. ನೀರಾವರಿ ಜಮೀನಿಗೆ ಮಾತ್ರ ಸಿಮಿತವಾಗಿದ್ದ ಅಡಿಕೆ ಇಂದು ಖುಷ್ಕಿ ಜಮೀನಿಗೂ ವಿಸ್ತರಿಸಿದೆ. ಹೀಗಾಗಿ ಬೇಡಿಕೆ ಹೆಚ್ಚಾದ ಕಾರಣ ಅಡಿಕೆ ಸಸಿಗಳನ್ನೂ ಮಾರಾಟ ಮಾಡಲು ಆರಂಭಿಸಿದ್ದಾರೆ.
ಒಂದು ಅಡಿಕೆ ಸಸಿಗೆ ₹ 8 ರಿಂದ ₹ 10 ವ್ಯಯವಾಗುತ್ತದೆ. ಈಗ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಕಾರಣ ₹ 20 ರಿಂದ₹ 25ರ ದರಕ್ಕೆ ಮಾರಾಟವಾಗುತ್ತಿದೆ. ಮಲೆನಾಡಿನಲ್ಲಿ ಮಾತ್ರವಲ್ಲದೇ ಬಯಲು ಸೀಮೆಯಿಂದಲೂ ಅಡಿಕೆ ಗಿಡಗಳಿಗೆಬೇಡಿಕೆ ಬರುತ್ತಿದೆ. ತೆಂಗಿನಸಸಿಗಳನ್ನೂ ಮಾರುತ್ತೇವೆ’ ಎಂದು ಅವರು ತಿಳಿಸಿದರು.

ಒಂದು ಎಕರೆಯಲ್ಲಿ ಅರಸಿಕೆರೆ,ಬಿರೂರು ತಳಿಯ ತೆಂಗನ್ನು ಬೆಳೆದಿದ್ದುಉತ್ತಮ ಫಸಲು ನೀಡುತ್ತಿದೆ. ಇವರ ಕೃಷಿ ಕಾರ್ಯಕ್ಕೆ ಇಬ್ಬರೂ ಮಕ್ಕಳು ಕೈಜೋಡಿಸಿರುವುದರಿಂದ ಪ್ರಗತಿಸಾಧಿಸಲು ಸಾಧ್ಯವಾಗಿದೆ. ಗೇರು ಹಾಗೂ ಬಾಳೆಯನ್ನು ಸಹ ಬೆಳೆದು ಲಾಭದ ದಾರಿ ಕಂಡುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT