ಗುರುವಾರ , ಮಾರ್ಚ್ 23, 2023
30 °C
ವಿಮಾನ ನಿಲ್ದಾಣ ಕಾಮಗಾರಿ ಸ್ಥಳದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಲು ನಿರ್ಧಾರ

ನಿವೇಶನಕ್ಕಾಗಿ ಭೂಮಿ ಕಳೆದುಕೊಂಡವರ ಮೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಒಂದು ವಾರದ ಒಳಗೆ ನಿವೇಶನ ನೀಡದಿದ್ದರೆ ವಿಮಾನ ನಿಲ್ದಾಣ ಬಳಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಸೋಗಾನೆ ವಿಮಾನ ನಿಲ್ದಾಣಕ್ಕೆ ಜಮೀನು ನೀಡಿರುವ ರೈತರು ಎಚ್ಚರಿಸಿದ್ದಾರೆ.

ವಿಮಾನ ನಿಲ್ದಾಣಕ್ಕೆ ಜಮೀನು ನೀಡಿದ್ದ ಸಮಯದಲ್ಲಿ ಜಮೀನು ಕೊಟ್ಟ ರೈತರಿಗೆ ನಿವೇಶನ ನೀಡುವುದಾಗಿ ಭರವಸೆ ನೀಡಿದ್ದರು. ಇಷ್ಟು ವರ್ಷ ಕಳೆದರೂ ನಮಗೆ ನಿವೇಶನ ನೀಡಿಲ್ಲ ಎಂದು ದೂರಿದರು.

ಶಿವಮೊಗ್ಗ ತಾಲ್ಲೂಕು, ನಿಧಿಗೆ ಹೋಬಳಿ, ಸೋಗಾನೆ ಗ್ರಾಮದಲ್ಲಿ ವಿಮಾನ ನಿಲ್ದಾಣಕ್ಕಾಗಿ ಜಮೀನು ಕಳೆದುಕೊಂಡ ಸಂತ್ರಸ್ತ ರೈತರಿಗೆ 40×60 ನಿವೇಶನ ಹಾಗೂ ಸುಸಜ್ಜಿತ ಮನೆ ಕಟ್ಟಿಕೊಡಲು 2006ರಲ್ಲೇ ಅಂದು ಉಪ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಮಾತು ಕೊಟ್ಟಿದ್ದರು. ಅದರಂತೆ ಸೋಗಾನೆ ಗ್ರಾಮದ ಸರ್ವೆ ನಂಬರ್ 120ರಲ್ಲಿ 34.9 ಎಕರೆ ಜಮೀನು ಗುರುತಿಸಿ ಕರ್ನಾಟಕ ಗೃಹ ಮಂಡಳಿಯ ಮೂಲಕ ಅಭಿವೃದ್ಧಿಪಡಿಸಲು  ನಿರ್ಧರಿಸಲಾಗಿತ್ತು ಎಂದರು.

ಇದಾದ ಬಳಿಕ ಜಮೀನು ಕಳೆದುಕೊಂಡ ಸಂತ್ರಸ್ತ ರೈತರಿಗೆ ನಿವೇಶನ ನೀಡಿಲ್ಲ. ಇದೇ ಕಾರಣಕ್ಕೆ  ಹೈಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ.  ಜಮೀನಿನಲ್ಲಿ ಅಭಿವೃದ್ಧಿ ಪಡಿಸಿರುವ ಜಾಗದಲ್ಲಿಯೇ 40×60ರ ನಿವೇಶನ ಕೊಟ್ಟು ಮನೆಗಳನ್ನು ಕಟ್ಟಿಸಿಕೊಡುವಂತೆ ನ್ಯಾಯಾಲಯ ಆದೇಶ ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ವಿಮಾನ ನಿಲ್ದಾಣ ಕಾಮಗಾರಿ ಪ್ರಾರಂಭ ಮಾಡಿದ ಸಮಯದಲ್ಲೂ ಸಂಸದರು ಹಾಗೂ ಜಿಲ್ಲಾಧಿಕಾರಿ ಹಲವು ಬಾರಿ ಸಭೆ ನಡೆಸಿ ನ್ಯಾಯಾಲಯದ ಆದೇಶದಂತೆ ಅಭಿವೃದ್ಧಿಪಡಿಸಿದ ಜಾಗದಲ್ಲಿ ನಿವೇಶನ ಕೊಡಲು ಸಭೆಯಲ್ಲಿ ತೀರ್ಮಾನಿಸಲಾಗಿತ್ತು.  ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಮಾನ ನಿಲ್ದಾಣದ ಟರ್ಮಿನಲ್ ಕಾಮಗಾರಿ ವೀಕ್ಷಣೆಗೆ ಬಂದಾಗಲೂ ಮನವಿ ಸಲ್ಲಿಸಲಾಗಿದೆ.  ಆದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಗಲಾದರೂ ಸಂತ್ರಸ್ತ ರೈತರಿಗೆ ನ್ಯಾಯ ಸಿಗಬೇಕು. ಇಲ್ಲದಿದ್ದರೆ ವಿಮಾನ ನಿಲ್ದಾಣ ಕಾಮಗಾರಿಯ ಬಳಿ ನ್ಯಾಯ ಸಿಗುವವರೆಗೂ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

***

ಈ ಕೂಡಲೇ ಜಿಲ್ಲಾಧಿಕಾರಿಗಳ ಜತೆ ಮಾತನಾಡಿ ರೈತರಿಗೆ ನಿವೇಶನ ನೀಡುವ ಕುರಿತು ಚರ್ಚಿಸಲಾಗುವುದು. ಒಂದು ವೇಳೆ ಒಂದು ವಾರದೊಳಗೆ ಸಮಸ್ಯೆ ಬಗೆಹರಿಸದಿದ್ದರೆ ನಾನೂ ಧರಣಿ ಕೂರುತ್ತೇನೆ.

ಕೆ.ಬಿ.ಅಶೋಕ್‌ ನಾಯ್ಕ್‌, ಶಾಸಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.