ಶನಿವಾರ, ಮೇ 21, 2022
25 °C

ಮತಾಂತರ ನಿಷೇಧ ಕಾಯ್ದೆ, ಗಣತಿಗೆ ಕ್ರೈಸ್ತ ಸಮುದಾಯ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ರಾಜ್ಯ ಸರ್ಕಾರ ಜಾರಿಗೆ ತರಲು ಬಯಸಿರುವ ಮತಾಂತರ ನಿಷೇಧ ಕಾಯ್ದೆ, ಕ್ರೈಸ್ತ ಸಮುದಾಯದ ಚರ್ಚ್‌ಗಳು ಹಾಗೂ ಸಂಘ ಸಂಸ್ಥೆಗಳ ಗಣತಿ ವಿರೋಧಿಸಿ ಅಖಿಲ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯುಮನ್ ರೈಟ್ಸ್ ಶಿವಮೊಗ್ಗ ಶಾಖೆಯ ಸದಸ್ಯರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ಮತಾಂತರದ ಕುರಿತು ಬಿರುಸಿನ ಚರ್ಚೆ ನಡೆದಿದೆ. ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲು ಚಿಂತನೆ ನಡೆಸಿದೆ. ಕ್ರೈಸ್ತ ಸಮುದಾಯ ಇಂತಹ ನಡೆಯನ್ನು ವಿರೋಧಿಸುತ್ತದೆ. ಸಂವಿಧಾನ ಪ್ರಜೆಗಳಿಗೆ ಯಾವುದೇ ಧರ್ಮ ಪ್ರತಿಪಾದಿಸುವ, ಆಚರಿಸುವ ಮತ್ತು ಅದನ್ನು ಪ್ರಕಟಿಸಲು ಹಕ್ಕುಗಳನ್ನು ನೀಡಿದೆ. ಸಂವಿಧಾನಕ್ಕೆ ವಿರುದ್ಧವಾಗಿ ಕಾಯ್ದೆ ರೂಪಿಸುವುದು ಸಲ್ಲದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ನಡೆದ ಒಂದೆರಡು ಘಟನೆ ಆಧಾರವಾಗಿಟ್ಟುಕೊಂಡು ಕ್ರೈಸ್ತ ಸಮುದಾಯ ದೂರುವುದು ಸರಿಯಲ್ಲ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತನ್ನ ಸಭೆಯೊಂದರಲ್ಲಿ ಕ್ರೈಸ್ತ ಸಮುದಾಯದ ಚರ್ಚ್‌ಗಳ ಗಣತಿಗೆ ಆದೇಶಿಸಿದೆ. ಇದರ ಉದ್ದೇಶವೇನು? ಕ್ರೈಸ್ತ ಸಮುದಾಯ ಗುರಿಯಾಗಿಸಿ ಗಣತಿ ನಡೆಸಲು ಆದೇಶಿಸಿರುವುದು ಏಕೆ? ಇದರ ಅಗತ್ಯವಾದರೂ ಏನು ಎಂದು ಪ್ರಶ್ನಿಸಿದರು.

ಈಗಾಗಲೇ ಕ್ರೈಸ್ತ ಸಮುದಾಯದ ಜನಸಂಖ್ಯೆಯ ಎಲ್ಲಾ ಅಂಕಿ ಅಂಶಗಳು, ವಿವರಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಳಿ ಇವೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಕ್ರೈಸ್ತ ಸಮುದಾಯದ ಜನಸಂಖ್ಯೆ ಶೇಕಡ 3ರಷ್ಟು ಮಾತ್ರವಿದೆ. ರಾಜ್ಯ ಹಾಗೂ ರಾಷ್ಟ್ರದಲ್ಲಿ ಕ್ರೈಸ್ತ ಸಮುದಾಯ ಸಾವಿರಾರು ಶಾಲಾ, ಕಾಲೇಜುಗಳು, ಆಸ್ಪತ್ರೆಗಳನ್ನು ಸ್ಥಾಪಿಸಿ ನಿಸ್ವಾರ್ಥ ಸೇವೆ ಮಾಡುತ್ತಿದೆ ಎಂದರು.

ಮತಾಂತರ ನಿಷೇಧ ಕಾಯ್ದೆ ಜಾರಿಯಾದರೆ ಕೋಮುವಾದಿಗಳ ಕೈಗೆ ಸಿಲುಕಿ ಅಲ್ಪ ಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುವ ಸಾಧ್ಯತೆ ಇದೆ. ಅವರು ಸಾಮಾಜಿಕ ಶಾಂತಿ ಕದಡಲು ಪ್ರಯತ್ನಿಸಬಹುದು. ಈ ಎಲ್ಲಾ ಕಾರಣದಿಂದ ಸರ್ಕಾರ ಕೂಡಲೇ ಈ ಚಿಂತನೆ ಕೈಬಿಡಬೇಕು ಎಂದು ಒತ್ತಾಯಿಸಿದರು.

ಶಿವಮೊಗ್ಗ ಧರ್ಮಾಧ್ಯಕ್ಷರಾದ ಬಿಷಪ್ ಫ್ರಾನ್ಸಿಸ್ ಸೆರಾವೊ, ಭದ್ರಾವತಿ ಧರ್ಮಾಧ್ಯಕ್ಷರಾದ ಬಿಷಪ್ ಜೋಸೆಫ್ ಅರುಮಾಚ್ಚಾಡತ್, ಸಂಚಾಲಕರಾದ ಫಾ.ಜೇರೊಮ್ ಮೊರಾಸ್, ಕ್ರೈಸ್ತ ಮುಖಂಡರಾದ ಚಿನ್ನಪ್ಪ, ಚಿನ್ ಜೋಸೆಫ್, ಮರಿಯಮ್ಮ, ಶಾಂತಿ ಡಿಸೋಜ, ರಿಚರ್ಡ್ ಕ್ವಾಡ್ರಸ್, ಕಿರಣ್ ಫೆರ್ನಾಂಡಿಸ್, ಸಿಸ್ಟರ್ ಪ್ರೇಮಾ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು