ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಟೆಲ್ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

ದೇವರಾಜ ಅರಸು ಮೆಟ್ರಿಕ್- ನಂತರದ ವಿದ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿನಿಯರ ಆಕ್ರೋಶ
Last Updated 25 ನವೆಂಬರ್ 2021, 4:03 IST
ಅಕ್ಷರ ಗಾತ್ರ

ರಿಪ್ಪನ್‌ಪೇಟೆ: ಪಟ್ಟಣದ ಹಳೆ ಸಂತೆ ಮಾರ್ಕೆಟ್ ರಸ್ತೆಯಲ್ಲಿರುವ ದೇವರಾಜ ಅರಸು ಮೆಟ್ರಿಕ್-ನಂತರದ ವಿದ್ಯಾರ್ಥಿನಿಲಯದಲ್ಲಿ ಮೂಲಸೌಕರ್ಯಗಳ ಕೊರತೆ, ಊಟ, ಉಪಚಾರದ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ವಿದ್ಯಾರ್ಥಿನಿಯರು ಬುಧವಾರ ಹಾಸ್ಟೆಲ್‌ ಮುಂಭಾಗ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿನಿಯರು ವಾರ್ಡನ್ ಹಾಗೂ ಕಳಪೆ ಆಹಾರದ ಬಗ್ಗೆ ಅಡುಗೆ ತಯಾರಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಹಾಸ್ಟೆಲ್‌ಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು.

ಜಿಲ್ಲಾ ಹಿರಿಯ ಅಧಿಕಾರಿಗಳನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಹತ್ತು ದಿನಗಳ ಒಳಗೆ ಅವ್ಯವಸ್ಥೆ ಸರಿಪಡಿಸುವಂತೆ ತಾಖೀತು ಮಾಡಿದ ಬಳಿಕ ವಿದ್ಯಾರ್ಥಿನಿಯರು ಪ್ರತಿಭಟನೆ ಹಿಂಪಡೆದರು.

ಅಧಿಕಾರಿಗಳ ಸ್ಪಂದನ:

ಹಾಸ್ಟೆಲ್‌ನ ಅವ್ಯವಸ್ಥೆಗೆ ತಕ್ಷಣವೇ ಸ್ಪಂದಿಸಿದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಬಿಸಿಎಂ ಹಿರಿಯ ಅಧಿಕಾರಿ ಕುಮಾರ್‌, ಬಿಸಿಎಂನ ತಾಲ್ಲೂಕು ಅಧಿಕಾರಿ ಮಂಜಪ್ಪ, ಇ.ಓ. ಪ್ರವೀಣ್‌, ಗ್ರಾಮ ಪಂಚಾಯಿತಿ ಪಿಡಿಒ ಚಂದ್ರಶೇಖರ್‌ ಸ್ಥಳಕ್ಕೆ ಭೇಟಿ ನೀಡಿ ಕಿರಿಯ ಮೇಲ್ವಿಚಾರಕಿ ನೇತ್ರಾವತಿ ಅವರನ್ನು ವಿಚಾರಣೆ ನಡೆಸಿದರು.

‘ಕೆಲ ವಿದ್ಯಾರ್ಥಿನಿಯರು ಹಾಸ್ಟೆಲ್‌ ನಿಯಮ ಮೀರಿ ಮಧ್ಯರಾತ್ರಿ ಜನ್ಮದಿನ ಆಚರಿಸಿಕೊಂಡಿದ್ದಾರೆ. ಆ ವೇಳೆ ಪೀಠೋಪಕರಣಕ್ಕೆ ಹಾನಿಯಾಗಿದೆ. ಈ ಕುರಿತು ವಿದ್ಯಾರ್ಥಿನಿಯರಿಂದ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ಎಚ್ಚರಿಕೆ ನೀಡಿದ್ದೆ. ಅಲ್ಲದೆ ಮೊಬೈಲ್‌ ಬಳಕೆ ನಿಷೇಧ ಇರುವುದರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ವಿದ್ಯಾರ್ಥಿನಿಯರ ಆಕ್ರೋಶಕ್ಕೆ ಕಾರಣವಾಗಿದೆ’ ಎಂದು ನೇತ್ರಾವತಿ ಹೇಳಿದರು.

ವಿದ್ಯಾರ್ಥಿನಿಯರ ಕುಂದು–ಕೊರತೆಗಳನ್ನು ಆಲಿಸಿ, ಪರಿಹಾರ ಕಲ್ಪಿಸುವ ಭರವಸೆ ನೀಡಿದರು. ಸ್ಥಳೀಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಹಾಲಕ್ಷ್ಮಿ ಅಣ್ಣಪ್ಪ, ಸದಸ್ಯರಾದ ದಾನಮ್ಮ, ಧನಲಕ್ಷ್ಮಿ, ನಿರೂಪ್‌ ಕುಮಾರ್‌, ಸ್ಥಳೀಯರಾದ ಮೆಣಸೆ ಆನಂದ್‌, ಎಂ.ಬಿ. ಮಂಜುನಾಥ,
ಎಚ್‌.ಎನ್‌. ಉಮೇಶ್‌, ಮಂಜಪ್ಪ, ಕೆರೆಹಳ್ಳಿ ರವೀಂದ್ರ ಅವರೂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT