ಶನಿವಾರ, ಜನವರಿ 22, 2022
16 °C
ವಿಶ್ವ ಹಿಂದೂ ಪರಿಷತ್, ಬಜರಂಗದಳ, ಗೋ ಪ್ರೇಮಿಗಳ ನೇತೃತ್ವದಲ್ಲಿ ರಸ್ತೆ ತಡೆ

ಪೊಲೀಸ್‌ ಇಲಾಖೆ ವೈಫಲ್ಯ ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೀರ್ಥಹಳ್ಳಿ: ತಾಲ್ಲೂಕಿನಲ್ಲಿ ಅಕ್ರಮ ಗೋ ಸಾಗಣೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ವಿಶ್ವ ಹಿಂದೂ ಪರಿಷತ್, ಬಜರಂಗದಳ, ಗೋ ಪ್ರೇಮಿಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಮಂಗಳವಾರ ಬೆಜ್ಜವಳ್ಳಿಯಲ್ಲಿ ಅಕ್ರಮ ಜಾನುವಾರು ಸಾಗಣೆ ತಡೆಯಲು ಮುಂದಾದ ಸಹೋದರರ ಮೇಲೆ ವಾಹನ ಹತ್ತಿಸುವ ಯತ್ನದ ಪ್ರಕರಣಕ್ಕೆ ಸಂಬಂಧಿಸಿ ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು. ತಾಲ್ಲೂಕು ಕಚೇರಿ ಮುಂಭಾಗದ ಶಿವಮೊಗ್ಗ-ಉಡುಪಿ ರಾಷ್ಟ್ರೀಯ ಹೆದ್ದಾರಿ 169 ಮಾರ್ಗದ ಆಜಾದ್ ರಸ್ತೆ ತಡೆದು ಆಕ್ರೋಶ
ವ್ಯಕ್ತಪಡಿಸಿದರು.

‘ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಪೊಲೀಸ್ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಅಸಮರ್ಥ ಪೊಲೀಸ್ ಇಲಾಖೆ ನಂಬಿ ಕಾರ್ಯಕರ್ತರು ಸುಮ್ಮನಿರಲು ಸಾಧ್ಯವಿಲ್ಲ. ಕಿರಣ್, ಚರಣ್ ಮೇಲೆ ವಾಹನ ಹತ್ತಿಸಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಗುರುವಾರ ರಾತ್ರಿ ಅಕ್ರಮ ಗೋ ಸಾಗಣೆ: ಜಿಲ್ಲೆಯಲ್ಲಿ ಅಕ್ರಮ ಗೋವುಗಳ ಸಾಗಣೆ ಹೆಚ್ಚಾಗಿದೆ. ಸಮಯ ನೋಡಿ ಗೋವುಗಳನ್ನು ವಾಹನಗಳಿಗೆ ತುಂಬಲಾಗುತ್ತಿದೆ. ವಿಶ್ವ ಹಿಂದೂ ಪರಿಷತ್, ಬಜರಂಗದಳ, ಗೋ ಪ್ರೇಮಿಗಳ ಗೋವುಗಳು ಕಳುವಾಗುವ ಸ್ಥಳದ ಮಾಹಿತಿ ನೀಡಿದರೂ ಇಲಾಖೆ ಸುಮ್ಮನಿದೆ. ಕಾರ್ಯಕರ್ತರಿಗೆ ವೀಡಿಯೊ ನೀಡಲು ಇಲಾಖೆ ಹೇಳುತ್ತಿದೆ. ತಡೆಯಲು ಆಗದ ಪೊಲೀಸರು ರಾಜೀನಾಮೆ ನೀಡಬೇಕು. ತಾಲ್ಲೂಕಿನಲ್ಲಿ ಹೆಚ್ಚಾಗಿ ಗುರುವಾರ ರಾತ್ರಿ ಗೋವುಗಳ ಕಳವು ಪ್ರಕರಣ ಅಧಿಕವಾಗಿದೆ ಎಂದು ಪ್ರತಿಭಟನಕಾರರು ದೂರಿದರು.

ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ, ಆರ್‌ಎಸ್‌ಎಸ್‌ ಪ್ರಮುಖರಾದ ಭಾರತೀಪುರ ದಿನೇಶ್, ಕ್ಯಾದಿಗೆರೆ ಲೋಹಿತಾಶ್ವ, ಗಣೇಶ್ ದೇವಾಡಿಗ, ನಾಗರಾಜ ಶೆಟ್ಟಿ, ಎಬಿವಿಪಿಯ ರಾಹುಲ್, ಬಜರಂಗದಳ ಮುಖಂಡರು ಮಾತನಾಡಿದರು. ಪ್ರತಿಭಟನೆಯಲ್ಲಿ ಬಜರಂಗದಳ ಸಂಚಾಲಕ ಬಾಳೇಬೈಲು ಸಂತೋಷ್ ಪೂಜಾರಿ, ಬಿಜೆಪಿ ಮುಖಂಡರಾದ ಸಂದೇಶ್ ಜವಳಿ, ಚಂದವಳ್ಳಿ ಸೋಮಶೇಖರ್, ಕುಕ್ಕೆ ಪ್ರಶಾಂತ್, ಗೀತಾ ಶೆಟ್ಟಿ, ರಾಘವೇಂದ್ರ ನಾಯಕ್, ಕುರುವಳ್ಳಿ ಪೂರ್ಣೇಶ್ ಪೂಜಾರಿ, ಆಗುಂಬೆ ನಿತ್ಯಾನಂದ ಇದ್ದರು.

***

ಚೆಕ್ ಪೋಸ್ಟ್ ಹೆಚ್ಚಿಸಲು ಕ್ರಮ

ಜಾನುವಾರು ರಫ್ತು ಆಗುತ್ತಿದ್ದ ಶಿವಮೊಗ್ಗದ ಸ್ಥಳದ ಮೇಲೆ ದಾಳಿ ಮಾಡಲಾಗಿದೆ. ಮೂರು ವರ್ಷಗಳಿಂದ ಕಳ್ಳ ಸಾಗಣೆಯಲ್ಲಿ ಭಾಗಿಯಾದವರ ವರದಿ ತಯಾರಾಗುತ್ತಿದೆ. ಚೆಕ್ ಪೋಸ್ಟ್ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗಿದೆ.

–ಲಕ್ಷ್ಮೀ ಪ್ರಸಾದ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

***

ಕುಸಿದ ಕಾನೂನು ಸುವ್ಯವಸ್ಥೆ

ಕುಸಿತ ಕಾನೂನು ವ್ಯವಸ್ಥೆ ಬಿಜೆಪಿಯು ಮಗುವನ್ನು ಚಿವುಟಿ ಕೂಗಿಸುತ್ತಿದೆ. ಸಮಾಧಾನ ಮಾಡಲು ಹಾಲು ಕುಡಿಸುತ್ತಿದೆ. ಅಕ್ರಮ ಜಾನುವಾರು ಸಾಗಣೆಯಲ್ಲಿ ಸಿಂಹಪಾಲು ಬಿಜೆಪಿಯವರದ್ದು. ಗೃಹ ಸಚಿವ ಆರಗ ಜ್ಞಾನೇಂದ್ರ ಸ್ವಕ್ಷೇತ್ರದಲ್ಲೇ ಕಾನೂನು ಸುವ್ಯವಸ್ಥೆ ಕುಸಿದಿದೆ. ಬಿಜೆಪಿಯ ಸಹ ಸಂಘಟನೆಗಳ ಪ್ರತಿಭಟನೆಯೇ ಇದಕ್ಕೆ ಸಾಕ್ಷಿ.

-ಕಿಮ್ಮನೆ ರತ್ನಾಕರ್, ಮಾಜಿ ಸಚಿವ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು