ಶಿವಮೊಗ್ಗ: ‘ನಗರದಲ್ಲಿ ಸುಗಮ ಸಂಚಾರಕ್ಕಾಗಿ ಐದು ರೈಲ್ವೆ ಮೇಲ್ಸೇತುವೆ ಹಾಗೂ ಎರಡು ಅಂಡರ್‌ಪಾಸ್‌ಗಳನ್ನು ₹140 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿ ಅಂತಿಮ ಹಂತದಲ್ಲಿದೆ’ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಸವಳಂಗ ರಸ್ತೆಯ ಎಲ್‌ಸಿ-49ರಲ್ಲಿ ₹39 ಕೋಟಿ ವೆಚ್ಚದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪ್ರಗತಿ ಪರಿಶೀಲನೆ ಮಾಡಿ ಗುರುವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಈಗಾಗಲೇ ಸೋಮಿನಕೊಪ್ಪ ರೈಲ್ವೆ ಮೇಲ್ಸೇತುವೆ ಹಾಗೂ ಪಿಎನ್‌ಟಿ ಕಾಲೊನಿ ಬಳಿ ರೈಲ್ವೆ ಅಂಡರ್ ಪಾಸ್‌ಗಳು ಒಟ್ಟು ₹27 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡು ಲೋಕಾರ್ಪಣೆಗೊಂಡಿವೆ ಎಂದರು.
ಭದ್ರಾವತಿ ತಾಲ್ಲೂಕಿನ ಕಡದಕಟ್ಟೆ ಬಳಿ ಎಲ್.ಸಿ-34 ಮೇಲ್ಸೇತುವೆ ಕಾಮಗಾರಿ ಕೂಡ ಪ್ರಗತಿಯಲ್ಲಿದೆ. ವಿದ್ಯಾನಗರದ ರೈಲ್ವೆ ಮೇಲ್ಸೇತುವೆ ₹43 ಕೋಟಿ ವೆಚ್ಚದಲ್ಲಿ ಅತ್ಯಂತ ಸುಂದರವಾಗಿ ನಿರ್ಮಾಣಗೊಂಡಿದೆ. ಪೂರ್ಣಗೊಳ್ಳುವ ಹಂತದಲ್ಲಿದೆ. ಡಿಸೆಂಬರ್ ಅಂತ್ಯಕ್ಕೆ ಎಲ್ಲಾ ಕಾಮಗಾರಿ ಮುಗಿದು ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ ಎಂದರು.
ಕೆಲವು ಕಡೆ ಅಡ್ಡರಸ್ತೆ ಕಾಮಗಾರಿ ಹೆಚ್ಚುವರಿಯಾಗಿ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಹೆಚ್ಚುವರಿಯಾಗಿ ಎರಡು ಸಣ್ಣ ಸೇತುವೆ ಕೂಡ ನಿರ್ಮಿಸಲಾಗುತ್ತಿದೆ ಎಂದರು.
ಇಷ್ಟೊಂದು ವೇಗವಾಗಿ ರೈಲ್ವೆ ಕಾಮಗಾರಿ ಮುಗಿಸಲು ನೆರವಾದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ರೈಲ್ವೆ ಅಧಿಕಾರಿಗಳು ಕೂಡ ಅತ್ಯಂತ ಸಹಕಾರ ನೀಡಿದ್ದಾರೆ. ಶಿವಮೊಗ್ಗ ನಗರದ ಅಭಿವೃದ್ಧಿ ದೃಷ್ಟಿಯಿಂದ ಈ ಕಾಮಗಾರಿ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ರೈಲ್ವೆ ಎಂಜಿನಿಯರ್ ರಾಜ್‌ಕುಮಾರ್, ಸ್ಮಾರ್ಟ್ ಸಿಟಿ ಕಾರ್ಯಪಾಲಕ ಎಂಜಿನಿಯರ್ ವಿಜಯಕುಮಾರ್, ಕರ್ನಾಟಕ ಜಲಮಂಡಳಿ ಕಾರ್ಯಪಾಲಕ ಎಂಜಿನಿಯರ್ ಸಿದ್ದಪ್ಪ, ಸ್ಥಳೀಯ ಕಾರ್ಪೊರೇಟರ್ ಇ. ವಿಶ್ವಾಸ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಜಗದೀಶ್, ಪ್ರಮುಖರಾದ ಜ್ಯೋತಿಪ್ರಕಾಶ್, ಮಾಲತೇಶ್, ದಿವಾಕರ ಶೆಟ್ಟಿ, ರಾಜೇಶ್ ಕಾಮತ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.