ಭಾನುವಾರ, ಸೆಪ್ಟೆಂಬರ್ 19, 2021
23 °C

ಫಲಾನುಭವಿಗಳಿಗೆ ತಲುಪುತ್ತಿದೆ ಯೋಜನೆಗಳ ಶೇ 100 ಲಾಭ: ಸಚಿವ ರಾಜೀವ್ ಚಂದ್ರಶೇಖರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಯೋಜನೆಗಳ ಶೇ 100ರಷ್ಟು ಲಾಭ ಫಲಾನುಭವಿಗಳಿಗೆ ತಲುಪುತ್ತಿದೆ. ಜನ್‌ಧನ್‌ ಖಾತೆಗೆ ನೇರವಾಗಿ ಜಮೆಯಾಗುತ್ತಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.

ನಗರದ ಶುಭ ಮಂಗಳ ಸಮುದಾಯ ಭವನದಲ್ಲಿ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ಜನಾಶೀರ್ವಾದ ಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂದು ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಹೇಳಿದಂತೆ ಯೋಜನೆಯ ₹ 100ಗೆ ಕೇವಲ ₹ 15 ಬಡವರಿಗೆ ಸಿಗುತ್ತಿತ್ತು. ಇಂದು ಮೋದಿ ಪ್ರಧಾನಿಯಾದ ನಂತರ ಫಲ ಶೇ 100 ಸಿಗುವಂತೆ ಮಾಡಿದ್ದಾರೆ. ಹಿಂದಿನ 60 ವರ್ಷಗಳಿಗೆ ಹೋಲಿಸಿದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ 7 ವರ್ಷಗಳಲ್ಲಿ ಮಾಡಿದ ಸಾಧನೆಯ ವೇಗ ಅರಿವಾಗುತ್ತದೆ. ತಾಂತ್ರಿಕತೆಯಲ್ಲಿ ದೇಶ ಸ್ವಾವಲಂಬಿಯಾಗಿದೆ. ಕೃಷಿ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ 5ನೇ ಸ್ಥಾನಕ್ಕೆ ಏರಿದೆ ಎಂದು ಬಣ್ಣಿಸಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕಾಶ್ಮಿರದ ರಾಜಕೀಯ ಅಸ್ಥಿರತೆ, ಭಯೋತ್ಪಾದನೆಗೆ ಕಡಿವಾಣ ಹಾಕಿದೆ. ಇಲ್ಲದಿದ್ದರೆ ಆಫ್ಘಾನಿಸ್ಥಾನದ ಅಸ್ಥಿರತೆ  ಕಾಶ್ಮೀರ ಭಾಗದಲ್ಲೂ ಉಂಟಾಗುತ್ತಿತ್ತು. ಬಹುವರ್ಷದ ಕನಸು ರಾಮಮಂದಿರ ನಿರ್ಮಾಣಕ್ಕೆ ಚಾಲನೆ ದೊರೆಯಿತು. ಹಿಂದೆ ಭಯೋತ್ಪಾದನಾ ದಾಳಿಗಳು ನಡೆದಾಗ ಕೇಂದ್ರ ಸರ್ಕಾರ ಮೃದು ಧೋರಣೆ ತಾಳಿತ್ತು. ಪುಲ್ವಾಮಾ ದಾಳಿ ಬಳಿಕ ಮೋದಿ ಸರ್ಕಾರ ಏನು ಮಾಡಿದೆ ಎನ್ನುವುದು ದೇಶದ ಜನರಿಗೆ ಮನವರಿಕೆಯಾಗಿದೆ. ಚೀನಾ ವಿಷಯದಲ್ಲೂ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ಒಂದಿಂಚು ಜಾಗ ಕಬಳಿಸಲು ಬಿಟ್ಟಿಲ್ಲ ಎಂದು ಶ್ಲಾಘಿಸಿದರು.

60 ವರ್ಷಗಳ ಆಡಳಿತದಲ್ಲಿ ಲೆಕ್ಕವಿಲ್ಲದಷ್ಟು ಭ್ರಷ್ಟಾಚಾರ ನಡೆದಿವೆ. ಮೋದಿ ಸರ್ಕಾರದ 7 ವರ್ಷದ ಅವಧಿಯಲ್ಲಿ ಭ್ರಷ್ಟಚಾರದ ಒಂದು ಕಪ್ಪು ಚುಕ್ಕೆ ಇಲ್ಲ. ಪೋಲಿಯೊ ಮುಕ್ತ ದೇಶ ಮಾಡಲು ಲಸಿಕೆಗಾಗಿ ಹಿಂದಿನ ಸರ್ಕಾರಗಳು 12 ವರ್ಷ ತೆಗೆದುಕೊಂಡಿದ್ದವು. ಕೊರೊನಾ ಬಂದ ಒಂದು ವರ್ಷದಲ್ಲಿ ಲಸಿಕೆ ತಯಾರಿಸಲಾಗಿದೆ. 50 ಕೋಟಿ ಜನರಿಗೆ ನೀಡಲಾಗಿದೆ ಎಂದರು.

ಹೊಸ ಪರಿಕಲ್ಪನೆಗಳು, ವೈವಿಧ್ಯ ಯೋಜನೆಗಳ ಜಾರಿಗೆ ಬದ್ಧತೆ, ಸಮರ್ಪಣೆ, ಸಾರ್ವಜನಿಕ ಸೇವೆ, ಸಾರ್ವಜನಿಕ ಸಂಪರ್ಕ, ಕೌಶಾಲಾಭಿವೃದ್ಧಿ, ಮಾಹಿತಿ ತಂತ್ರಜ್ಞಾನದಲ್ಲಿ ಕ್ರಾಂತಿ, ಆತ್ಮನಿರ್ಭರ್ ಯೋಜನೆಯಡಿ ಸ್ವಾವಲಂಬನೆಗಾಗಿ ವಿಶೇಷ ಯೋಜನೆಗಳನ್ನು ಕೇಂದ್ರ ಜಾರಿಗೆ ತಂದಿದೆ. ಸರ್ಕಾರದ ಇಂತಹ ಸಾಧನೆಗಳನ್ನು ಜನರಿಗೆ ತಿಳಿಸುವ ಮೂಲಕ ಜನಾಶೀರ್ವಾದ ಪಡೆಯಲು ಮೋದಿ ಎಲ್ಲ ಸಚಿವರನ್ನು ಕಳುಹಿಸಿದ್ದಾರೆ ಎಂದು ವಿವರ ನೀಡಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ, ನಾಮಕಾವಸ್ತೆಗೆ ಮಂತ್ರಿಯಾಗಬಾರದು. ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎನ್ನುವುದು ಪ್ರಧಾನಿ ಆಶಯ. ತಳಮಟ್ಟದಲ್ಲಿ ದೇಶದ ಜನರ ಅನಿಸಿಕೆ ಮತ್ತು ಅಭಿಪ್ರಾಯ ತಿಳಿಯಲು ಕೇಂದ್ರ ಸರ್ಕಾರದ ವಿನೂತನ ಕಾರ್ಯಕ್ರಮ ಆಯೋಜಿಸಿದೆ ಎಂದರು.

ಅನೇಕ ರೋಗಗಳಿಂದ ಬಳಲುತ್ತಿರುವ ಬಡವರಿಗೆ ಆಯುಷ್ಮಾನ್ ಆರೋಗ್ಯ ಕಾರ್ಡ್ ನೀಡಿದ್ದರಿಂದ ಉಚಿತ ಚಿಕಿತ್ಸೆ ಸೌಲಭ್ಯ ಸಿಕ್ಕಿದೆ. ಜನ್ ಧನ್ ಯೋಜನೆ ಖಾತೆದಾರರಿಗೆ ಪ್ರಧಾನ್ ಮಂತ್ರಿ ವಿಮಾ ಯೋಜನೆಯಡಿ 2 ಲಕ್ಷ ವಿಮೆ ಸೌಲಭ್ಯ ಕಲ್ಪಿಸಿದ್ದು, ಇದರಿಂದ ಅನೇಕ ಕುಟುಂಬಗಳು ನೆರವು ಪಡೆದಿವೆ ಎಂದರು.

ವರ್ಕ್ ಫ್ರಂ ಹೋಂ ಆಗಲಿ, ಆನ್ ಲೈನ್ ಕ್ಲಾಸ್ ಆಗಲಿ ಕೇಳಲು ಮಲೆನಾಡಿನ ಹಳ್ಳಿಗಳಲ್ಲಿ ನೆಟ್ ವರ್ಕ್ ಸಮಸ್ಯೆ ಇದ್ದು, ಇದನ್ನು ಸರಿಪಡಿಸಲು ಕೇಂದ್ರ ಸಚಿವರು ಗಮನಹರಿಸಬೇಕು ಎಂದರು.

ಸಂಸದ ಬಿ.ವೈ. ರಾಘವೇಂದ್ರ, ದಕ್ಷಿಣ ಭಾರತದಲ್ಲಿ ಬಿಜೆಪಿ ಬಲವರ್ಧನೆಗೆ ಶ್ರಮಿಸದವರಲ್ಲಿ ರಾಜೀವ್ ಚಂದ್ರಶೇಖರ್ ಕೂಡ ಒಬ್ಬರು ಎಂದು ಬಣ್ಣಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್, ಶಾಸಕರಾದ ಕುಮಾರ್ ಬಂಗಾರಪ್ಪ, ಕೆ.ಬಿ. ಅಶೋಕ್ ನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಆಯನೂರು ಮಂಜುನಾಥ್, ಭಾರತಿ ಶೆಟ್ಟಿ, ಸಂಜೀವ ಮಠಂದೂರು, ಮಾಜಿ ಶಾಸಕರಾದ ಕೆ.ಜಿ.ಕುಮಾರಸ್ವಾಮಿ, ಎಂ.ಬಿ.ಭಾನುಪ್ರಕಾಶ್, ಆರ್.ಕೆ.ಸಿದ್ಧರಾಮಣ್ಣ, ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ‘ಸೂಡಾ’ ಜ್ಯೋತಿ ಪ್ರಕಾಶ್, ಮಾಜಿ ಅಧ್ಯಕ್ಷ ಎಸ್.ದತ್ತಾತ್ರಿ, ‘ಕಾಡಾ’ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಮೇಯರ್ ಸುನಿತಾ ಅಣ್ಣಪ್ಪ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು