ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಹತ್ಯೆ ನಿಷೇಧಕ್ಕೆ ಮುನ್ನುಡಿಯಾದ ರಾಮಚಂದ್ರಾಪುರ ಮಠ: ಆರಗ ಜ್ಞಾನೇಂದ್ರ

Last Updated 17 ಮೇ 2022, 4:02 IST
ಅಕ್ಷರ ಗಾತ್ರ

ಹೊಸನಗರ: ಗೋಶಾಲೆ, ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಮುನ್ನುಡಿ ಬರೆದಿದ್ದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊರಗೋಡು ಬಳಿ ಸ್ಥಾಪಿಸಲು ಉದ್ದೇಶಿಸಿರುವ ಜಿಲ್ಲೆಗೊಂದು ಗೋಶಾಲೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

₹ 33 ಕೋಟಿ ಜನಸಂಖ್ಯೆ ಇರುವಾಗ 43 ಕೋಟಿ ಜಾನುವಾರು ಇದ್ದವು. ಈಗ 130 ಕೋಟಿ ಜನಸಂಖ್ಯೆ ಇದ್ದು, ಜಾನುವಾರಿನ ಸಂಖ್ಯೆ 11 ಕೋಟಿಗೆ ಇಳಿದಿದೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ಮೇಲೆ ಗಂಡು ಜಾನುವಾರು, ವಯಸ್ಸಾದ ಮತ್ತು ಅನಾರೋಗ್ಯಪೀಡಿತ ಜಾನುವಾರಿನ ನಿರ್ವಹಣೆ ಬಗ್ಗೆ ಆತಂಕ ಉಂಟಾಗಿತ್ತು. ಅದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಗೋಶಾಲೆ ಆರಂಭಕ್ಕೆ ಮುಂದಾಗಿದೆ ಎಂದು ಹೇಳಿದರು.

ಗೊರಗೋಡಿನ 10 ಎಕರೆ ಜಾಗದಲ್ಲಿ ಗೋಶಾಲೆ ಆರಂಭಿಸಲಾಗುತ್ತಿದ್ದು, ಮೊದಲ ಹಂತದಲ್ಲಿ ₹ 36 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಮುಂದಿನ ಹಂತದಲ್ಲಿ ಜಾನುವಾರಿಗೆ ಹುಲ್ಲು ವಿತರಣೆ, ನಿರ್ವಹಣೆ, ಚಿಕಿತ್ಸೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಫಾರಿಗಳಲ್ಲಿ ಪ್ರಾಣಿಗಳನ್ನು ಸೆಲೆಬ್ರೆಟಿಗಳು ದತ್ತು ತೆಗೆದುಕೊಳ್ಳುವಂತೆ ಗೋಶಾಲೆಯ ಜಾನುವಾರನ್ನು ದತ್ತು ತೆಗೆದುಕೊಂಡು ನಿರ್ವಹಿಸಲು ಜನರು ಮುಂದೆ ಬರಬೇಕು. ಗೋವು ಕೇವಲ ಪ್ರಾಣಿಯಲ್ಲ; ಮಾಂಸಕ್ಕೆಂದೇ ಮೀಸಲಾದ ಪ್ರಾಣಿಗಳಿವೆ. ಆದರೆ, ಗೋವಿನ ಕೆಲಸ ಪುಣ್ಯದ ಕೆಲಸ ಎಂದು ಹೇಳಿದರು.

ಶಾಸಕ ಎಚ್.ಹಾಲಪ್ಪ ಹರತಾಳು ಮಾತನಾಡಿ, ‘ಈ ಹಿಂದೆ ಕೂಡುಕುಟುಂಬ ಇತ್ತು. ಜಾನುವಾರು ಸತ್ತಾಗ ನೆರೆಹೊರೆಯವರ ಜೊತೆಗೂಡಿ ಅದರ ಅಂತ್ಯಕ್ರಿಯೆ ಮಾಡಲಾಗುತ್ತಿತ್ತು. ಇಲ್ಲವೇ ಬಯಲು ಪ್ರದೇಶದಲ್ಲಿ ಎಸೆಯಲಾಗುತ್ತಿತ್ತು. ಅದನ್ನು ಹದ್ದುಗಳು ಬಂದು ತಿಂದು ಪರಿಸರವನ್ನು ಸ್ವಚ್ಛಗೊಳಿಸುತ್ತಿದ್ದವು. ಆದರೆ, ಈಗ ಕೂಡು ಕುಟುಂಬಗಳೂ ಇಲ್ಲ. ಹದ್ದುಗಳೂ ಇಲ್ಲ. ಜಾನುವಾರು ಸತ್ತರೆ ಏನು ಮಾಡಬೇಕು ಎಂಬ ಚಿಂತೆ ಇದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಅಂತ್ಯ ಸಂಸ್ಕಾರಕ್ಕೆ ಹಣ ಬಿಡುಗಡೆ ಮಾಡುವ ಅಗತ್ಯವಿದೆ’ ಎಂದರು.

ಮಾಜಿ ಶಾಸಕ ಬಿ. ಸ್ವಾಮಿರಾವ್ ಮಾತನಾಡಿ, ‘ಮಲೆನಾಡಿನಲ್ಲಿ ಮಂಗಗಳ ಕಾಟ ವಿಪರೀತವಾಗಿದೆ. ಮಂಕಿಪಾರ್ಕ್ ಘೋಷಿಸಿದ್ದರೂ ಚಾಲನೆಗೆ ಬಂದಿಲ್ಲ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು’ ಎಂದು ಮನವಿ ಮಾಡಿದರು.

ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್, ಸಾಗರ ಉಪವಿಭಾಗಾಧಿಕಾರಿ ಡಾ.ನಾಗರಾಜ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಶಿವಯೋಗಿ, ತಹಶೀಲ್ದಾರ್ ವಿ.ಎಸ್. ರಾಜೀವ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ಆರ್. ಪ್ರವೀಣ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ನಾಗರಾಜ್, ಉಪಾಧ್ಯಕ್ಷೆ ಚಂದ್ರಕಲಾ ಶ್ರೀನಿವಾಸ್, ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT