ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಾಯಣ ಕೃತಿಗೆ ವಾಲ್ಮೀಕಿಯೇ ಪ್ರೇರಣೆ

ಡಾ.ಜಿ.ಪ್ರಶಾಂತ ನಾಯಕ್‌ ಅವರ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಶಿವಾನಂದ ಕೆಳಗಿನಮನೆ ಅಭಿಮತ
Last Updated 26 ಏಪ್ರಿಲ್ 2022, 6:21 IST
ಅಕ್ಷರ ಗಾತ್ರ

ಶಿವಮೊಗ್ಗ: ಬದಲಾದ ಕಾಲಘಟ್ಟದಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ರಾಮಯಣದ ಕರ್ತೃ ವಾಲ್ಮೀಕಿಯನ್ನೇ ಇಲ್ಲವಾಗಿಸುವ ಕುತಂತ್ರಗಳು ಸದ್ದಿಲ್ಲದೇ ನಡೆಯುತ್ತಿವೆ ಎಂದು ಕುವೆಂಪು ವಿಶ್ವವಿದ್ಯಾಲಯ ಕನ್ನಡ ವಿಭಾಗದ ಪ್ರಾಧ್ಯಾಪಕ ಶಿವಾನಂದ ಕೆಳಗಿನಮನಿ ಕಳವಳ ವ್ಯಕ್ತಪಡಿಸಿದರು.

ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ ಗೀತಾಂಜಲಿ ಪುಸ್ತಕ ಪ್ರಕಾಶನ ಹಮ್ಮಿಕೊಂಡಿದ್ದ ಡಾ.ಜಿ. ಪ್ರಶಾಂತ ನಾಯಕ್‌ ಅವರ ‘ವಾಲ್ಮೀಕಿ ಮತ್ತು ರಾಮಾಯಣ, ರಾಜರ್ಷಿ ಭರತ, ಒಲವೇ ಜೀವನ ಸಾಕ್ಷಾತ್ಕಾರ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಅಸ್ತಿತ್ವದಲ್ಲಿರುವ ರಾಮಾಯಣದ ಎಲ್ಲ ಕೃತಿಗಳೂ ಆದಿ ಕವಿ ವಾಲ್ಮೀಕಿ ಅವರನ್ನೇ ಅವಲಂಬಿತವಾಗಿ ರಚಿತವಾಗಿರುವ ಕೃತಿಗಳು. ವಾಲ್ಮೀಕಿ ಅವರಿಂದ ರಚಿತವಾದ ಕೃತಿ ಸಾವಿರಾರು ವರ್ಷಗಳು ಮೌಖಿಕ ಪರಂಪರೆಯಿಂದ ಸಾಗಿಬಂದಿದೆ. ಆಧುನಿಕ ಅಕ್ಷರ ರೂಪು ಪಡೆದ‌ ನಂತರವೂ ಮೂಲ ಸ್ವರೂಪ ಸ್ವಲ್ಪವೂ ಬದಲಾಗದ ಅಮೂಲ್ಯ ಮಹಾಕಾವ್ಯವಾಗಿದೆ ಎಂದು ಬಣ್ಣಿಸಿದರು.

ಮೂಲ ರಾಮಾಯಣ ಪ್ರತಿಯೊಬ್ಬರ ಮನೆ ಮನೆಯ ರಾಮಾಯಣ. ಆದರ್ಶ ಪುರುಷ, ಮರ್ಯಾದಾ ಪುರುಷೋತ್ತಮ, ಮಾನವೀಯ ಗುಣಗಳು, ಅತ್ಯಂತ ನೋವು ಅನುಭವಿಸಿದವರು ರಾಮ–ರಾವಣನ ಪ್ರಸಂಗಗಳು ಮನಮುಟ್ಟುತ್ತವೆ. ಮಾನವೀಕರಣಗೊಳ್ಳುವ ಸಮಕಾಲೀನ‌ ನಡೆಯನ್ನು ಪ್ರತಿಬಿಂಬಿಸುತ್ತದೆ ಎಂದು ವಿಶ್ಲೇಷಿಸಿದರು.

ಆದರ್ಶದ ಮಾನವೀಯತೆಯ ಕಡೆಗೆ‌ ರಾಜರ್ಷಿ ಭರತ ನಾಟಕ ಕೃತಿ ಸಾಗುತ್ತದೆ. ಪುರಾಣ,‌ ಸಿನಿಮಾ, ಧಾರಾವಾಹಿ ಸಮಾಜ‌ ಶಾಸ್ತ್ರೀಯ ವಿಷಯಗಳನ್ನು ತರ್ಕಬದ್ಧವಾಗಿ‌ ನಿರೂಪಿಸುವುದು, ವಿಮರ್ಶಿಸಿರುವುದು ಡಾ.ಪ್ರಶಾ‍ಂತ್ ನಾಯಕ್ ಅವರ ಕೃತಿಗಳ ಹೆಗ್ಗಳಿಕೆ ಎಂದು ಪ್ರಶಂಶಿಸಿದರು.

ಕೃತಿಗಳನ್ನು ಬಿಡುಗಡೆ ಮಾಡಿದ ಬೆಂಗಳೂರು ಕೇಂದ್ರ ವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಬಿ. ರಮೇಶ್, ‘ಕೃತಿಗಳನ್ನು ಓದುವುದು ಅಕ್ಷರದ ಸಾಲುಗಳ ಮೇಲಿನ‌ ನಡಿಗೆಯಲ್ಲ. ಬರಹದ ಅತ್ಮವನ್ನು ಅರ್ಥ ‌ಮಾಡಿಕೊಳ್ಳುವ, ಗ್ರಹಿಸುವ, ‌ಜ್ಞಾನವನ್ನು ಪಸರಿಸುವ ಪರಿಯೇ ನಿಜವಾದ ಓದು’ ಎಂದು ಬಣ್ಣಿಸಿದರು.

ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ, ‘ಹಲವು ಲೇಖಕರು ವಿಭಿನ್ನ‌ ನೆಲೆಗಟ್ಟಿನಲ್ಲಿ ಸಾಹಿತ್ಯ ರೂಪಿಸಿದ್ದಾರೆ. ರಾಮಯಣ ಕೃತಿಯಲ್ಲಿ ಬರುವ ರಾಮ, ರಾವಣರ ವ್ಯಕ್ತಿತ್ವ, ನಡವಳಿಕೆಗಳನ್ನೂ ಬೇರೆ ಬೇರೆ ರೀತಿ ಬಿಂಬಿಸಿದ್ದಾರೆ. ಇದು ಲೇಖಕರ ಬರಹದ ಶಕ್ತಿ. ಜಾಗತೀಕರಣ ಈ ಕಾಲಘಟ್ಟದಲ್ಲಿ ಛಿದ್ರವಾಗುತ್ತಿರುವ ಕುಟುಂಬಗಳ ಮಧ್ಯೆ ಸಾಹಿತ್ಯ ಕ್ಷೇತ್ರ ಸಂಬಂಧಗಳನ್ನು ಬೆಸೆಯುವ ಕೆಲಸ ಮಾಡುತ್ತಿದೆ’ ಎಂದು ಪ್ರತಿಪಾದಿಸಿದರು.

ವಿಶ್ವವಿದ್ಯಾಲಯದ ಕುಲಸಚಿವೆ ಜಿ. ಅನುರಾಧ ಮಾತನಾಡಿ, ‘ಪ್ರತಿಯೊಬ್ಬರ ಮನಸ್ಸಿನಲ್ಲೂ ರಾಮ‌ ಮತ್ತು ರಾವಣರು‌ ಇದ್ದಾರೆ. ನಮ್ಮೊಳಗಿನ ರಾವಣನನ್ನು ಕೊಂದು ರಾಮನ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಸಮಾಜ ಸಮೃದ್ಧವಾಗುತ್ತದೆ‌’ ಎಂದು ಕಿವಿಮಾತು ಹೇಳಿದರು.

ಗೀತಾಂಜಲಿ ಪುಸ್ತಕ ಪ್ರಕಾಶನದ ಮಾಲೀಕ ಜಿ.ಬಿ.ಟಿ. ಮೋಹನ್ನ್‌, ‘ಪಿಡಿಎಫ್ ಕಾಲಘಟ್ಟದಲ್ಲಿ ಮುದ್ರಿತ ಪುಸ್ತಕಗಳು ಸಂಕಷ್ಟದ ದಿನಗಳನ್ನು ಎದುರಿಸುತ್ತಿವೆ’ ಎಂದು ಸಂಕಷ್ಟ ತೋಡಿಕೊಂಡರು.

ಸಹ್ಯಾದ್ರಿ ಕಾಲೇಜು ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ.ಮೋಹನ್‌ ಚಂದ್ರಗುತ್ತಿ ಸ್ವಾಗತಿಸಿದರು. ಉಪನ್ಯಾಸಕ ಪುರುಷೋತ್ತಮ ನಿರೂಪಿಸಿದರು. ಪ್ರಾಧ್ಯಾಪಕ ನೆಲ್ಲಿಕಟ್ಟೆ ಸಿದ್ದೇಶ್ ವಂದಿಸಿದರು.

ಬದುಕಿನ ನಂತರವೂ ಬರಹ ಪ್ರಸ್ತುತ: ಪ್ರಶಾಂತ ನಾಯಕ್

ಕುವೆಂಪು ಅವರು ಬರೆದ ಕಾಲಘಟ್ಟಕ್ಕಿಂತ ಇಂದು ಅವರು ಹೆಚ್ಚು ಪ್ರಸ್ತುತವಾಗಿದ್ದಾರೆ. 50 ವರ್ಷಗಳ ನಂತರವೂ ಅವರ ಕೃತಿಗಳು ಹೆಚ್ಚು ಮೌಲ್ಯಯುತ ಎನಿಸಲಿವೆ. ಹಾಗೆ ನಾನು ಬರೆದ ಪುಸ್ತಕಗಳೂ ಸಮಾಜದ ಜನರಿಗೆ ಒಂದಷ್ಟು ಉಪಯೋಗವಾದರೆ, ವಿದ್ಯಾರ್ಥಿಗಳು ಅಸಕ್ತಿಯಿಂದ ಓದಿದರೆ ಸಾರ್ಥಕ ಎಂದು ಕೃತಿಗಳ ಲೇಖಕ ಡಾ.ಜಿ. ಪ್ರಶಾಂತ ನಾಯಕ ಅಭಿಪ್ರಾಯ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಶಿಕ್ಷಕರನ್ನು ಪ್ರತಿದಿನ ಪರೀಕ್ಷೆ ಮಾಡುತ್ತಾರೆ. ಶಿಕ್ಷಕರು ಸದಾ ಜಾಗರೂಕತೆಯಿಂದ ಕೆಲಸ ಮಾಡಬೇಕು. ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಜಿ.ಎಸ್. ಶಿವರುದ್ರಪ್ಪ ಅವರು ಹೇಳಿದಂತೆ ‘ನಾನೇಕೆ ಬರೆಯುತ್ತೇನೆ ಎಂದರೆ ಸುಮ್ಮನಿರಲಾಗದಕ್ಕೆ, ನಿಮ್ಮ‌ ಜತೆ ಸಂವಾದಿಸಲಿಕ್ಕೆ, ನನ್ನನ್ನು‌ ನಾನು ಕಂಡುಕೊಳ್ಳಲಿಕ್ಕೆ’ ಎನ್ನುವ ರೀತಿ ಬರಹ ಮುಂದುವರಿಸಿರುವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT