ಗುರುವಾರ , ಡಿಸೆಂಬರ್ 1, 2022
20 °C
ಕೃಷಿ ಮತ್ತು ತೋಟಗಾರಿಕಾ ವಿ.ವಿ.ಯ 10ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಬಿ.ವೈ.ರಾಘವೇಂದ್ರ

ಬೆಳೆ ವಿಷಮುಕ್ತವಾಗಿಸುವತ್ತ ಸಂಶೋಧನೆ ನಡೆಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನಂದಪುರ: ‘ಅತಿವೃಷ್ಟಿ, ಅನಾವೃಷ್ಟಿ, ವಿವಿಧ ರೋಗಗಳಿಂದ ರೈತರು ತಮ್ಮ ಬೆಳೆ ಕಳೆದುಕೊಳ್ಳುತ್ತಿದ್ದಾರೆ. ಅವರಿಗೆ ನೈತಿಕ ಸ್ಥೈರ್ಯ, ಸ್ವಾಭಿಮಾನದ ಬದುಕು ಕಟ್ಟಿಕೊಡುವ ಕೆಲಸವನ್ನು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಮಾಡಬೇಕು’ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಸಮೀಪದ ಇರುವಕ್ಕಿಯಲ್ಲಿರುವ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ 10ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ನೀವು ಮಾಡುತ್ತಿರುವ ವಿದ್ಯಾಭ್ಯಾಸ ಸ್ವಾರ್ಥಕ್ಕಲ್ಲ. ರೈತರ ಹಿತದೃಷ್ಟಿಯಿಂದ ಅವರ ಚಿಂತನೆಗಳಿಗೆ ಒಳ್ಳೆಯದಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಬೇಕು. ನಿಮ್ಮ ಓದು ಕಂದಾಯ ಹಾಗೂ ಇನ್ನಿತರ ಇಲಾಖೆಗಳಿಗೆ ಸಿಮಿತವಾಗದೆ ಉನ್ನತ ವಿದ್ಯಾಭ್ಯಾಸದತ್ತ ಗಮನಹರಿಸಬೇಕು. ನಾವು ತಿನ್ನುವ ಆಹಾರ ವಿಷವಾಗುತ್ತಿದೆ. ರೈತರು ಬೆಳೆಯುವ ಬೆಳೆಯನ್ನು ವಿಷಮುಕ್ತವಾಗಿಸುವ ನಿಟ್ಟಿನಲ್ಲಿ ಸಂಶೋಧನೆಗಳ ಅಗತ್ಯವಿದೆ’ ಎಂದು ತಿಳಿಸಿದರು.

‘ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ಕಾಲೇಜನ್ನು ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೆ ಏರಿಸುವ ಕನಸನ್ನು ಬಿ.ಎಸ್.ಯಡಿಯೂರಪ್ಪ ಹೊಂದಿದ್ದರು. ಹಾಸನಕ್ಕೆ ಹೋಗಬೇಕಾದ ಕೃಷಿ ವಿಶ್ವವಿದ್ಯಾಲಯವನ್ನು ಶಿವಮೊಗ್ಗದ ಇರುವಕ್ಕಿಗೆ ತರುವಲ್ಲಿ ಯಡಿಯೂರಪ್ಪ ಪ್ರಮುಖ ಪಾತ್ರ ವಹಿಸಿದ್ದರು’ ಎಂದು ಹೇಳಿದರು.

‘ರೈತರು ಇಳುವರಿಯ ಬೆನ್ನುಹತ್ತಿ ವಿಪರೀತ ಪ್ರಮಾಣದ ಕೀಟನಾಶಕ ಬಳಕೆ ಮಾಡುತ್ತಿದ್ದಾರೆ. ಇದರಿಂದ ಆಹಾರದ ಗುಣಮಟ್ಟ ಕಳೆದುಕೊಳ್ಳುತ್ತಿದ್ದೇವೆ. ಅಧಿಕ
ಇಳುವರಿ ಬಂದರೂ ರೈತ ಸಾಲದ ಹೊರೆಯಿಂದ ಆತ್ಮಹತ್ಯೆ ನಿಲ್ಲುತ್ತಿಲ್ಲ. ಇದರ ಕುರಿತು ಚಿಂತನೆ ಮಾಡಬೇಕಾಗಿದೆ’ ಎಂದು ಮುರುಘಾಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಭೂಮಿಕಾ ಎಚ್.ಆರ್, ಡಾ.ಸಿ.ಸುನೀಲ್, ಡಾ.ಪ್ರಕಾಶ್ ಕೆರೂರು, ಬಸವರಾಜ್ ನಾಯ್ಕ್ ಟಿ, ಡಾ.ಚೈತನ್ಯ ಎಚ್.ಎಸ್ ಹಾಗೂ ಶಿಕ್ಷಕೇತರ ಕ್ಷೇತ್ರದಿಂದ ರಮೇಶ್ ಮೂಲ್ಯ, ನಾಗೇಶ್, ವನಜ, ಮಹೇಶ್ವರಪ್ಪ, ರವಿಕುಮಾರ್ ಡಿ, ಸುಚಿತ್ರ ಕುಮಾರಿ ಅವರನ್ನು ಸನ್ಮಾನಿಸಲಾಯಿತು.

ಕುಲಪತಿ ಡಾ.ಆರ್.ಸಿ.ಜಗದೀಶ್, ಆಡಳಿತ ಮಂಡಳಿ ಸದಸ್ಯರಾದ ಡೊಡ್ಡಗೌಡ ಸಿ.ಪಾಟೀಲ್, ಪ್ರಗತಿಪರ ಕೃಷಿಕರಾದ ವೀರಭದ್ರಪ್ಪ ಪೂಜಾರಿ, ಕೆ.ನಾಗರಾಜ್, ಡಾ.ಎಂ.ದಿನೇಶ್ ಕುಮಾರ್, ಡಾ.ಎನ್.ಶಿವಶಂಕರ್, ಡಾ.ತಿಪ್ಪೇಶ್, ಡಾ.ಸಿ.ಜೆ ಕುಶಾಲಪ್ಪ, ಡಾ.ಬಿ.ಎಂ.ದುಶ್ಯಂತ್ ಕುಮಾರ್, ಡಾ.ಕೆ.ಸಿ.ಶಶಿಧರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು