ಮಾರಿಕಾಂಬಾ ಜಾತ್ರೆ: ನಗರ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ

ಸಾಗರ: ಇಲ್ಲಿನ ಮಾರಿಕಾಂಬಾ ದೇವಿಯ ಜಾತ್ರೆಯು ಫೆ. 7ರಿಂದ ನಡೆಯಲಿದ್ದು ಅದಕ್ಕೂ ಮುನ್ನವೇ ನಗರದ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಹೇಳಿದರು.
ಇಲ್ಲಿನ ಮಾರಿಕಾಂಬಾ ಜಾತ್ರೆ ಅಂಗವಾಗಿ ನಗರವ್ಯಾಪ್ತಿಯ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಜಾತ್ರೆಯ ಮೊದಲ ದಿನ ಹಾಗೂ ಕೊನೆಯ ದಿನ ಮಾರಿಕಾಂಬಾ ದೇವಿಯ ರಾಜಬೀದಿ ಉತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ದೇವಿಯ ರಥದೊಂದಿಗೆ ಮೆರವಣಿಗೆ ಹಾದು ಹೋಗುವ ರಸ್ತೆಯ ಗುಣಮಟ್ಟ ಉತ್ತಮವಾಗಿರುವಂತೆ ನಿಗಾ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಹೆಚ್ಚು ಜನ ಸಂಚಾರವಿರುವ ರಸ್ತೆಗಳಲ್ಲಿ ಜಾತ್ರೆ ಸಂದರ್ಭದಲ್ಲಿ ಮತ್ತಷ್ಟು ವಾಹನಗಳ ಹಾಗೂ ಜನದಟ್ಟಣೆ ಉಂಟಾಗುತ್ತದೆ. ಹೀಗಾಗಿ ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆಯಿಂದ ಈ ರಸ್ತೆಗಳನ್ನು ಕೂಡ ಅಭಿವೃದ್ಧಿಪಡಿಸುವ ಮೂಲಕ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಜಾತ್ರೆ ವೇಳೆಯಲ್ಲಿ ಸ್ವಚ್ಛತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲಾಗುವುದು. ಅದೇ ರೀತಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯ ಜೊತೆಗೆ ಹೆಚ್ಚುವರಿಯಾಗಿ ಅಗತ್ಯವಿರುವಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗುವುದು ಎಂದರು.
ಜ. 28 ಹಾಗೂ 29ರಂದು ಕೆರೆ ಹಬ್ಬ ನಡೆಯಲಿದೆ. ಕೆರೆ ಹಬ್ಬದ ಅಂಗವಾಗಿ ಆಹಾರ ಮೇಳ ನಡೆಯಲಿದೆ. ಜೊತೆಗೆ ಗಣಪತಿ ಕೆರೆಗೆ ಆರತಿ ಎತ್ತುವ ವಿಶೇಷ ಕಾರ್ಯಕ್ರಮ ‘ಸಾಗರರಾತಿ’ ನಡೆಯಲಿದೆ ಎಂದು ಅವರು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ. ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ರಾಯ್ಕರ್, ಸದಸ್ಯರಾದ ಬಿ.ಎಚ್. ಲಿಂಗರಾಜ್, ಕುಸುಮಾ ಸುಬ್ಬಣ್ಣ, ಪ್ರೇಮಾ ಕಿರಣ್ ಸಿಂಗ್, ಮೈತ್ರಿ ಪಾಟೀಲ್, ಸವಿತಾ ವಾಸು, ಪೌರಾಯುಕ್ತ ಎಚ್.ಕೆ. ನಾಗಪ್ಪ ಇದ್ದರು.
‘ಗಣಪತಿ ಕೆರೆ ಅಭಿವೃದ್ಧಿಗೆ ಟೀಕೆ: ಜನರೇ ಉತ್ತರ ಕೊಡುತ್ತಾರೆ’
ನಗರದ ಹೃದಯ ಭಾಗದಲ್ಲಿರುವ ಗಣಪತಿ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಆಮ್ ಆದ್ಮಿ ಪಕ್ಷದ ಮುಖಂಡರು ಟೀಕಿಸಿದ್ದಾರೆ. ಇದಕ್ಕೆ ಈಗ ನಾನು ಉತ್ತರ ಕೊಡುವುದಿಲ್ಲ. ಆರು ತಿಂಗಳ ನಂತರ ಜನರೇ ಉತ್ತರ ಕೊಡುತ್ತಾರೆ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಪ್ರತಿಕ್ರಿಯಿಸಿದ್ದಾರೆ.
ಕೆರೆ ಅಭಿವೃದ್ಧಿ ಹೆಸರಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆಮ್ ಆದ್ಮಿ ಮುಖಂಡ ಕೆ. ದಿವಾಕರ್ ಟೀಕೆಗೆ ಉತ್ತರಿಸಿದ ಅವರು, ‘ಸೂಕ್ತ ಮಾಹಿತಿ ಇಲ್ಲದೇ ಟೀಕಿಸುತ್ತ ಜನರಿಗೆ ತಪ್ಪು ಮಾಹಿತಿ ನೀಡುವವರ ಬಗ್ಗೆ ಏನೂ ಹೇಳಲಾಗದು’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.