ಮಂಗಳವಾರ, ಜೂನ್ 28, 2022
26 °C
ಎಕರೆ ಜಮೀನಿನಲ್ಲಿ ಕೈತುಂಬ ಆದಾಯ ಗಳಿಸುವ ಸಹೋದರರು

ಶ್ರೀನಿವಾಸಪುರದ ರೈತ ಮಲ್ಲೇಶ್ ಬದುಕು ಅರಳಿಸಿದ ಗುಲಾಬಿ

ಕುಮಾರ್ ಅಗಸನಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಳೆಹೊನ್ನೂರು: ಭೂಮಿತಾಯಿಯಲ್ಲಿ ನಂಬಿಕೆ ಇಟ್ಟು ದುಡಿದರೆ ಆಕೆ ಯಾವತ್ತೂ ಕೈ ಬಿಡುವುದಿಲ್ಲ ಎಂಬುದಕ್ಕೆ ಶ್ರೀನಿವಾಸಪುರದ ರೈತ ಮಲ್ಲೇಶ್ ಉದಾಹರಣೆಯಾಗಿ ನಿಲ್ಲುತ್ತಾರೆ.

ಹುಟ್ಟಿನಿಂದಲೂ ಕಡುಬಡವರಾಗಿದ್ದು, ಇವರ ತಂದೆ– ತಾಯಿ ಮೂರು ಹೊತ್ತಿನ ಊಟಕ್ಕಾಗಿ ದಿನನಿತ್ಯ ಕೂಲಿ–ನಾಲಿ ಮಾಡಿ ಜೀವನ ನಡೆಸುತ್ತಿದ್ದರು. ಅವರು ದುಡಿದ ಹಣ ಕುಟುಂಬದ ಖರ್ಚಿಗೆ ಸಾಕಾಗುತ್ತಿತ್ತು.

ಕೆಲವು ರೈತರು ಅಡಿಕೆ ಬೆಳೆಗೆ ಒಲವು ತೋರಿದರು. ಆದರೆ, ಮಲ್ಲೇಶ್ ಅವರು ಕುಟುಂಬದವರ ಸಲಹೆ ಪಡೆದು ಇರುವ ಒಂದು ಎಕರೆ ಜಮೀನಿನಲ್ಲಿ ಗುಲಾಬಿ ಬೆಳೆಯಲು ಮುಂದಾದರು.

ಗುಲಾಬಿ ಹೂವಿನ ಸಸಿಗಳನ್ನು ಬೆಳೆಸಲು ಪ್ರಾರಂಭಿಸಿ, ಒಂದು ವರ್ಷದವರೆಗೂ ಯಾವುದೇ ಆದಾಯ ಇಲ್ಲದಿದ್ದರೂ, ಇತರರ ಜಮೀನಿನಲ್ಲಿ ಕೂಲಿ ಮಾಡಿ ಜೀವನ ಸಾಗಿಸಿದರು. ಗೊಬ್ಬರ ಹಾಕಿ ಸ್ವಚ್ಛ ಮಾಡುತ್ತ, ಉಳಿದ ಆದಾಯವನ್ನೆಲ್ಲ ಹೂವಿನ ತೋಟಕ್ಕೆ ವಿನಿಯೋಗಿಸಿ ಗಿಡಗಳನ್ನು ಚೆನ್ನಾಗಿ ಬೆಳೆಸಿದರು.

ಹೂವು ಕಟಾವಿಗೆ ಬಂದ ನಂತರ ಪ್ರತಿದಿನ ಬೆಳಿಗ್ಗೆ 6 ಗಂಟೆಯ ವೇಳೆ ಮನೆಯಲ್ಲಿ ಅಣ್ಣ ಹಾಗೂ ತಮ್ಮಂದಿರು ಜಮೀನಿಗೆ ಹೋಗಿ ಕಟಾವು ಮಾಡುತ್ತಿದ್ದರು. 10–15 ವರ್ಷಗಳು ದಿನ ನಿತ್ಯ ತಮ್ಮ ಕಾಯಕವೇ ಇದು ಎಂದು ಭಾವಿಸಿ ಯಾವುದೇ ಶುಭ ಸಮಾರಂಭ ಹಾಗೂ ಇನ್ನಿತರೆ ಯಾವುದೇ ಕಾರ್ಯಕ್ರಮಗಳಿಗೆ ಹೋಗದೆ ಶ್ರಮವಹಿಸಿ ಕೆಲಸ ಮಾಡತೊಡಗಿದರು.

‘ಪ್ರತಿ ವರ್ಷವೂ ಸುಮಾರು ₹10 ಲಕ್ಷದಿಂದ ₹ 12 ಲಕ್ಷದವರೆಗೂ ಆದಾಯ ಬರುತ್ತಿತ್ತು. ಖರ್ಚು ಕಳೆದು ₹ 4 ಲಕ್ಷದಿಂದ ₹ 5 ಲಕ್ಷದವರೆಗೂ ಉಳಿತಾಯವಾಗುತ್ತದೆ. ಹೂವಿನ ಬೆಲೆ ಹೆಚ್ಚಾದಾಗ ₹ 6 ಲಕ್ಷದಿಂದ ₹ 8 ಲಕ್ಷದವರೆಗೂ ಉಳಿತಾಯವಾಗಿದೆ’ ಎನ್ನುವರು ಮಲ್ಲೇಶ್‌.

ಇಬ್ಬರು ಅಕ್ಕಂದಿರ ಮದುವೆ ಮಾಡಿ, ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿರುವ ಮಲ್ಲೇಶ್‌ ಹಾಗೂ ಪರಶುರಾಮ್ ಸಹೋದರರು ಮನೆಯನ್ನು ನಿರ್ಮಿಸಿಕೊಂಡು ನೆಮ್ಮದಿ ಜೀವನ ನಡೆಸುತ್ತಿದ್ದಾರೆ.

ಅಲ್ಲದೇ ಇಂದಿಗೂ ಅವರು ಬೇರೆಯವರ ತೋಟದಲ್ಲಿ ಹೂವನ್ನು ಬೆಳೆಸಿ ಪ್ರತಿನಿತ್ಯ ಕಟಾವು ಮಾಡಿ ಮಾರಾಟ ಮಾಡುತ್ತಿದ್ದಾರೆ. ಸಮಾಜದಲ್ಲಿ ತಮ್ಮನ್ನು ತಾವು ಗುರುತಿಕೊಳ್ಳುವಲ್ಲಿ ಗುಲಾಬಿ ಹೂವಿನ ಬೆಳೆಯೇ ಕಾರಣವಾಗಿದೆ ಎಂಬು ಖುಷಿಯಿಂದ ಹೇಳುತ್ತಾರೆ ಪರಶುರಾಮ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು