ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ: ಆಡಳಿತ ಯಂತ್ರಕ್ಕೆ ಬೇಕಿದೆ ಮೇಜರ್ ಸರ್ಜರಿ

ನೂತನ ಶಾಸಕ ಗೋಪಾಲಕೃಷ್ಣ ಬೇಳೂರು ಎದುರು ಬೆಟ್ಟದಷ್ಟು ಸವಾಲು
Published 24 ಮೇ 2023, 19:30 IST
Last Updated 24 ಮೇ 2023, 19:30 IST
ಅಕ್ಷರ ಗಾತ್ರ

ಸಾಗರ: ಮೂರನೇ ಬಾರಿ ಸಾಗರ ಕ್ಷೇತ್ರದ ಶಾಸಕರಾಗಿರುವ ಗೋಪಾಲಕೃಷ್ಣ ಬೇಳೂರು ಅವರ ಎದುರು ಕ್ಷೇತ್ರದ ಆಡಳಿತ ಯಂತ್ರವನ್ನು ಸುಧಾರಿಸುವ ಮಹತ್ವದ ಜವಾಬ್ದಾರಿಯ ಜೊತೆಗೆ ಬೆಟ್ಟದಷ್ಟು ಸವಾಲುಗಳಿವೆ. ಈ ಜವಾಬ್ದಾರಿಗಳ ನಿರ್ವಹಣೆ ಕುರಿತು ಕ್ಷೇತ್ರದ ಜನರಲ್ಲಿ ಅಪಾರ ನಿರೀಕ್ಷೆ ಇದೆ.

ಚುನಾವಣೆ ಸಂದರ್ಭದಲ್ಲಿ ಪ್ರಸ್ತಾಪವಾದ ಪ್ರಮುಖ ವಿಷಯಗಳಲ್ಲಿ ತಾಲ್ಲೂಕಿನ ಸರ್ಕಾರಿ ಕಚೇರಿಗಳಲ್ಲಿನ ಅವ್ಯವಸ್ಥೆ ಒಂದಾಗಿದೆ. ಯಾವುದೇ ಸರ್ಕಾರಿ ಕಚೇರಿಯಲ್ಲೂ ಹಣ ಕೊಡದೆ ಜನರ ಕೆಲಸ ಆಗುವುದಿಲ್ಲ ಎಂಬ ಅಭಿಪ್ರಾಯ ಜನರಲ್ಲಿದ್ದು, ಆಡಳಿತ ಯಂತ್ರಕ್ಕೆ ನೂತನ ಶಾಸಕರು ಮೇಜರ್ ಸರ್ಜರಿ ಮಾಡಿದರೆ ಮಾತ್ರ ಈ ಪರಿಸ್ಥಿತಿ ಬದಲಾಗಬಹುದು ಎನ್ನುವ ಮಾತುಗಳಿವೆ.

ಭೂಮಿಯ ಹಕ್ಕಿನ ಸಮಸ್ಯೆ ಜಟಿಲವಾಗಿದ್ದು, ಇದಕ್ಕೆ ಸದನದ ಒಳಗೆ ಮತ್ತು ಹೊರಗೆ ಹೋರಾಟದ ಅವಶ್ಯಕತೆ ಇದೆ ಎಂಬ ಮಾತುಗಳು ಕೂಡ ಕ್ಷೇತ್ರದಲ್ಲಿ ಪ್ರತಿಧ್ವನಿಸುತ್ತಿದೆ. ಕಾನು, ಕುಮ್ಕಿ, ಗೋಮಾಳ, ಸೊಪ್ಪಿನಬೆಟ್ಟ, ಪರಿಭಾವಿತ ಅರಣ್ಯ, ಶರಾವತಿ ಅಭಯಾರಣ್ಯ, ಸಿಂಗಳೀಕ ಅರಣ್ಯ ಪ್ರದೇಶ ಹೀಗೆ ಹಲವು ಪ್ರದೇಶಗಳಲ್ಲಿ ಜನ ವಸತಿ ಇದ್ದು, ಭೂಮಿಯ ಹಕ್ಕಿಗಾಗಿ ಹೋರಾಟ ನಡೆಸುತ್ತಿರುವವರಿಗೆ ಹೊಸದಾಗಿ ಜಾರಿಗೆ ಬರುತ್ತಿರುವ ಕಾನೂನು, ನ್ಯಾಯಾಲಯದ ಆದೇಶಗಳು ತೊಡಕಾಗಿ ಪರಿಣಮಿಸಿವೆ.

ಶರಾವತಿ ಮುಳುಗಡೆ ಸಂತ್ರಸ್ತರು ಹಲವು ದಶಕಗಳಿಂದ ಭೂಮಿಯ ಹಕ್ಕು ದೊರಕದೆ ಹೋರಾಟ ನಡೆಸುತ್ತಲೇ ಇದ್ದಾರೆ. ಕೆಲವು ಸಂತ್ರಸ್ತರಿಗೆ ಭೂಮಿಯ ಹಕ್ಕು ನೀಡುವ ಸಲುವಾಗಿ ಡಿನೋಟಿಫಿಕೇಷನ್ ಮಾಡಿದ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿರುವುದು ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಹೊಸದಾಗಿ ಡಿನೋಟಿಫಿಕೇಷನ್ ಮಾಡಿಸಬೇಕಾದ ಸವಾಲು ನೂತನ ಶಾಸಕರ ಎದುರು ಇದೆ.

ನಗರದ ಹೃದಯ ಭಾಗದಲ್ಲಿರುವ ಗಣಪತಿ ಕೆರೆ ಅಭಿವೃದ್ಧಿ ಕಾಮಗಾರಿ ವಿವಾದದ ಕೇಂದ್ರ ಬಿಂದುವಾಗಿದೆ. ಈ ಸಮಸ್ಯೆಗೂ ತಾರ್ಕಿಕ ಅಂತ್ಯ ದೊರಕುವುದೇ ಎಂದು ಜನರು ಕಾಯುತ್ತಿದ್ದಾರೆ. ಬಿಎಚ್ ರಸ್ತೆಯ ಹೆದ್ದಾರಿ ವಿಸ್ತರಣೆ, ಮಾರ್ಕೆಟ್ ರಸ್ತೆ ವಿಸ್ತರಣೆ ಕಾಮಗಾರಿಗೆ ಹೈಕೋರ್ಟ್ ತಡೆಯಾಜ್ಞೆ ಅಡ್ಡಗಾಲಾಗಿದ್ದು, ಸ್ಥಳೀಯರ ಮನವೊಲಿಸಿ ಕಾಮಗಾರಿ ಪೂರೈಸಬೇಕಾದ ಜವಾಬ್ದಾರಿಯೂ ನೂತನ ಜನಪ್ರತಿನಿಧಿಯ ಹೆಗಲೇರಿದೆ.

ತಾಲ್ಲೂಕು ಕೇಂದ್ರದಿಂದ ದೂರದ ಪ್ರದೇಶದಲ್ಲಿರುವ ಕರೂರು– ಭಾರಂಗಿ ಹೋಬಳಿ ಸೇರಿದಂತೆ ಕ್ಷೇತ್ರದ ಹಲವೆಡೆ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲೂ ನೂತನ ಶಾಸಕರು ಗಮನ ಹರಿಸಬೇಕಿದೆ. ಇದೇ ಹೋಬಳಿಯ ಹಲವು ಗ್ರಾಮಗಳಿಗೆ ವಿದ್ಯುತ್‌ನಂತಹ ಮೂಲ ಸೌಕರ್ಯ ಒದಗಿಸುವತ್ತಲೂ ಆದ್ಯತೆ ನೀಡಬೇಕಿದೆ.

ಗ್ರಾಮೀಣ ಪ್ರದೇಶಗಳಲ್ಲಿ ನೀರು ಪೂರೈಕೆ ಸಮಸ್ಯೆ ಗಂಭೀರವಾಗಿದ್ದು, ಜಲ ಜೀವನ್ ಮಿಷನ್ ಯೋಜನೆಯಡಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ದೂರುಗಳಿವೆ. ನಗರವ್ಯಾಪ್ತಿಯಲ್ಲಿ 10 ವರ್ಷಗಳ ಹಿಂದೆ ಆರಂಭವಾದ ಒಳ ಚರಂಡಿ ಯೋಜನೆ ಕಾಮಗಾರಿ ಪೂರ್ಣಗೊಳ್ಳದೆ ನನೆಗುದಿದೆ ಬಿದ್ದಿದೆ. 5 ವರ್ಷಗಳ ಹಿಂದೆಯೇ ಆರಂಭಗೊಂಡ ನೂತನ ತಾಲ್ಲೂಕು ಕಚೇರಿ ಕಟ್ಟಡ ಉದ್ಘಾಟನೆಗೆ ಕಾದಿದೆ. ಇವೆಲ್ಲವನ್ನೂ ಶೀಘ್ರ ಸಮರ್ಪಕವಾಗಿ ನಿಭಾಯಿಸುವ ಜವಾಬ್ದಾರಿ ಶಾಸಕರ ಮೇಲಿದೆ.

ನಿರಂತರವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಸುಸಜ್ಜಿತ ರಂಗಮಂದಿರ ನಿರ್ಮಾಣ, ಬೀದಿ ಬದಿ ವ್ಯಾಪಾರಿಗಳಿಗಾಗಿ ಫುಡ್‌ಕೋರ್ಟ್ ನಿರ್ಮಾಣ, ನಗರವ್ಯಾಪ್ತಿಯಲ್ಲಿ ನಿರ್ವಹಣೆ ಇಲ್ಲದೆ ಸೊರಗುತ್ತಿರುವ ಪಾರ್ಕ್‌ಗಳ ಪುನಶ್ಚೇತನ, ಅಕ್ರಮ ಲೇಔಟ್‌ಗಳಿಗೆ ಕಡಿವಾಣ, ಕೈಗಾರಿಕಾ ವಸಾಹತು ಪ್ರದೇಶದ ಅಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಹೊಸ ಉದ್ಯಮಗಳ ಸ್ಥಾಪನೆ ಸೇರಿ ಹತ್ತು ಹಲವು ನಿರೀಕ್ಷೆಗಳು ಕ್ಷೇತ್ರದ ಜನರದ್ದಾಗಿದೆ.

ಗೋಪಾಲಕೃಷ್ಣ ಬೇಳೂರು
ಗೋಪಾಲಕೃಷ್ಣ ಬೇಳೂರು
ಪ್ರಭಾವತಿ ಚಂದ್ರಕಾಂತ್
ಪ್ರಭಾವತಿ ಚಂದ್ರಕಾಂತ್
ಪುರುಷೋತ್ತಮ ತಲವಾಟ
ಪುರುಷೋತ್ತಮ ತಲವಾಟ
ಜನಾರ್ಧನ್ ರಾವ್ ಹಕ್ರೆ
ಜನಾರ್ಧನ್ ರಾವ್ ಹಕ್ರೆ

Quote - ಸಾಗರದಲ್ಲಿ ವರ್ಷದ 12 ತಿಂಗಳೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತದೆ. ಆದರೆ ಸುಸಜ್ಜಿತ ರಂಗಮಂದಿರ ಇಲ್ಲದೇ ಇರುವುದು ಪ್ರಮುಖ ಕೊರತೆಯಾಗಿದೆ. ಇದನ್ನು ತುಂಬುವತ್ತ ನೂತನ ಶಾಸಕರು ಗಮನ ಹರಿಸಬೇಕು. ಪುರುಷೋತ್ತಮ ತಲವಾಟ ರಂಗಕರ್ಮಿ

Cut-off box - ಅರಣ್ಯ ಇಲಾಖೆ ಕಿರುಕುಳ ತಪ್ಪಿಸಿ ಸಿಂಗಳೀಕ ಅಭಯಾರಣ್ಯ ಶರಾವತಿ ಅಭಯಾರಣ್ಯದ ಹೆಸರಿನಲ್ಲಿ ಕರೂರು– ಭಾರಂಗಿ ಹೋಬಳಿಯ ರೈತರಿಗೆ ಅರಣ್ಯ ಇಲಾಖೆ ಕಿರುಕುಳ ನೀಡುತ್ತಿದೆ. ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಾಗಿದ್ದಾಗ ಜಂಟಿ ಸರ್ವೆ ನಡೆಸಿ ಜನವಸತಿ ಪ್ರದೇಶವನ್ನು ಅಭಯಾರಣ್ಯದ ವ್ಯಾಪ್ತಿಯಿಂದ ಹೊರಗಿಡುವಂತೆ ಆದೇಶಿಸಿದ್ದರು. ಅದು ಜಾರಿಗೆ ಬರಬೇಕು. ಪ್ರಭಾವತಿ ಚಂದ್ರಕಾಂತ್ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ತಾಲ್ಲೂಕು ಕಚೇರಿ ಮುಕ್ತಗೊಳಿಸಿ ಗ್ರಾಮೀಣ ಜನರು ಪ್ರತಿಯೊಂದು ಕೆಲಸಕ್ಕೂ ತಾಲ್ಲೂಕು ಕಚೇರಿಗೆ ಬರಲೇಬೇಕು. 5 ವರ್ಷಗಳಿಂದ ತಾಲ್ಲೂಕು ಕಚೇರಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದರೂ ಉದ್ಘಾಟನೆ ವಿಳಂಬವಾಗಿದೆ. ಕೂಡಲೇ ಹೊಸ ಕಟ್ಟಡ ಉದ್ಘಾಟಿಸಿ ತಾಲ್ಲೂಕು ಕಚೇರಿ ಆವರಣದಲ್ಲೇ ಸರ್ವೇ ಉಪನೋಂದಣಾಧಿಕಾರಿ ಕಚೇರಿ ತೆರೆಯುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಜನಾರ್ಧನ್ ರಾವ್ ಹಕ್ರೆ ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT