ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಗರ: ಇಂದಿನಿಂದ ‘ಕಲೆಗಳ ಸಂಗಡ ಮಾತುಕತೆ’ ಕಾರ್ಯಕ್ರಮ

75 ರ ಹೊಸ್ತಿಲಿನಲ್ಲಿ ರಂಗಭೂಮಿಯ ‘ಕರ್ಮಭೂಮಿ’ ನೀನಾಸಂ ಹೆಗ್ಗೋಡು
Published : 2 ಅಕ್ಟೋಬರ್ 2024, 5:41 IST
Last Updated : 2 ಅಕ್ಟೋಬರ್ 2024, 5:41 IST
ಫಾಲೋ ಮಾಡಿ
Comments

ಸಾಗರ: ಬೆರಳಣಿಕೆಯಷ್ಟು ಜನರು ಸೇರಿ ಹವ್ಯಾಸಿ ರಂಗತಂಡವಾಗಿ 1949 ರಲ್ಲಿ ಆರಂಭಿಸಿದ ತಾಲ್ಲೂಕಿನ ಹೆಗ್ಗೋಡಿನ ನೀನಾಸಂ (ನೀಲಕಂಠೇಶ್ವರ ನಾಟ್ಯ ಸೇವಾ ಸಂಘ) ದೇಶ ವಿದೇಶಗಳಲ್ಲಿ ಹೆಸರು ಮಾಡಿದೆ. ರಂಗಭೂಮಿಯ ‘ಕರ್ಮಭೂಮಿ’ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನೀನಾಸಂ ಈಗ 75 ವರ್ಷದ ಹೊಸ್ತಿಲಿನಲ್ಲಿದೆ. 

ಸಾಧ್ಯವಾದಷ್ಟೂ ತನ್ನ ಚಟುವಟಿಕೆಗಳನ್ನು ಅನೌಪಚಾರಿಕವಾಗಿ ನಡೆಸುವ ಪದ್ಧತಿ ಮೊದಲಿನಿಂದಲೂ ನೀನಾಸಂನಲ್ಲಿದೆ. 75 ರ ಸಂಭ್ರಮವನ್ನು ಕೂಡ ಅದು ಯಾವುದೇ ಸಭೆ, ಸಮಾರಂಭ ಮಾಡದೆ ವರ್ಷಪೂರ್ತಿ ನಾಟಕ ಪ್ರದರ್ಶನಗಳ ಮೂಲಕವೇ ಆಚರಿಸುತ್ತಿದೆ. 

ರಂಗ ಶಿಕ್ಷಣ, ನೀನಾಸಂ ತಿರುಗಾಟ, ಮರು ತಿರುಗಾಟ, ಚಲನಚಿತ್ರ ರಸಗ್ರಹಣ ಶಿಬಿರ, ಸಂಸ್ಕೃತಿ ಶಿಬಿರ, ವಿದ್ಯಾರ್ಥಿಗಳಿಗಾಗಿ ಸಾಹಿತ್ಯ ಅನುಸಂಧಾನ ಶಿಬಿರ, ಜನಸ್ಪಂದನ, ಮಕ್ಕಳ ರಂಗ ತರಬೇತಿ ಶಿಬಿರ, ಊರುಮನೆ ಉತ್ಸವ, ಬೇಸಿಗೆ ರಂಗ ಶಿಬಿರ ಹೀಗೆ ಹತ್ತು ಹಲವು ಚಟವಟಿಕೆಗಳ ಮೂಲಕ ನೀನಾಸಂ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಲೇ ಬಂದಿದೆ. 

1980 ರಲ್ಲಿ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿರುವ ನೀನಾಸಂ ರಂಗ ಶಿಕ್ಷಣ ಕೇಂದ್ರದಲ್ಲಿ ಈವರೆಗೆ ಸುಮಾರು 700 ವಿದ್ಯಾರ್ಥಿಗಳು ರಂಗ ಶಿಕ್ಷಣ ಪಡೆದಿದ್ದಾರೆ. ಈ ಪೈಕಿ ಹೆಚ್ಚಿನವರು ತಾವು ನೆಲೆಸಿರುವ ಊರುಗಳಲ್ಲೇ ರಂಗಭೂಮಿ ಕ್ಷೇತ್ರದಲ್ಲಿ ಮುಂದುವರೆದಿದ್ದಾರೆ ಎಂಬುದು ವಿಶಿಷ್ಟ ಸಂಗತಿಯಾಗಿದೆ. 

‘ಆರಂಭದಲ್ಲಿ ರಂಗ ಶಿಕ್ಷಣ ಕೇಂದ್ರಕ್ಕೆ ವಿದ್ಯಾರ್ಥಿಗಳನ್ನು ಹುಡುಕಬೇಕಿತ್ತು. ಹೆಣ್ಣು ಮಕ್ಕಳಂತೂ ಬರುತ್ತಲೇ ಇರಲಿಲ್ಲ. ಈಗ 15 ಸ್ಥಾನಕ್ಕೆ 150 ಕ್ಕೂ ಹೆಚ್ಚು ಅರ್ಜಿಗಳು ಪ್ರತಿವರ್ಷ ಬರುತ್ತಿವೆ. ವಿದ್ಯಾರ್ಥಿಗಳ ಗುಣಮಟ್ಟ ಕೂಡ ಉತ್ತಮವಾಗಿದೆ’ ಎನ್ನುತ್ತಾರೆ ನೀನಾಸಂನ ಕೆ.ವಿ.ಅಕ್ಷರ.

1991 ರಲ್ಲಿ ನೀನಾಸಂನ ಸಂಸ್ಥಾಪಕ ಕೆ.ವಿ.ಸುಬ್ಬಣ್ಣ ಅವರಿಗೆ ಗ್ರಾಮೀಣ ರಂಗ ಚಟುವಟಿಕೆಗಾಗಿ ಪ್ರತಿಷ್ಠಿತ ಮ್ಯಾಗ್ಸಸ್ಸೆ ಪ್ರಶಸ್ತಿ ಲಭ್ಯವಾಗಿತ್ತು. ಈ ಪ್ರಶಸ್ತಿಯೊಂದಿಗೆ ಬಂದ ನಗದು ಹಣವನ್ನು ಠೇವಣಿಯಾಗಿಟ್ಟು, ಅದರಿಂದ ಬರುವ ಬಡ್ಡಿ ಹಣದಿಂದ ವಿದ್ಯಾರ್ಥಿ, ಯುವಜನರಿಗೆ ಸಾಹಿತ್ಯ, ಕಲೆಗೆ ಸಂಬಂಧಪಟ್ಟ ಕಾರ್ಯಕ್ರಮವನ್ನು ನೀನಾಸಂ ಆಯೋಜಿಸುತ್ತಿದೆ. 

‘ನೀನಾಸಂನಿಂದ ರಂಗ ಶಿಕ್ಷಣದ ಪದವಿ ಪಡೆದವರು ಆರಂಭದಲ್ಲಿ ಮೂರು ನಾಟಕಗಳೊಂದಿಗೆ ಕರ್ನಾಟಕದ ಉದ್ದಗಲ ಹಾಗೂ ಹೊರ ರಾಜ್ಯಗಳಲ್ಲಿ ‘ತಿರುಗಾಟ’ದ ಮೂಲಕ ಪ್ರದರ್ಶನ ನೀಡುತ್ತಿದ್ದರು. ಈಗ ಆ ಸಂಖ್ಯೆ ಎರಡಕ್ಕೆ ಇಳಿದಿದೆ. ಈ ಮೂಲಕ ನೀನಾಸಂ ನಾಟಕ 20 ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರಿಗೆ ತಲುಪಿದೆ ಎನ್ನುತ್ತಾರೆ’ ನೀನಾಸಂ ರಂಗ ಶಿಕ್ಷಣ ಕೇಂದ್ರದ ಅಧ್ಯಾಪಕ ಮಂಜು ಕೊಡಗು. 

1990 ರಿಂದ ಪ್ರತಿ ವರ್ಷ ಅಕ್ಟೋಬರ್‌ನಲ್ಲಿ ನೀನಾಸಂ ಸಂಸ್ಕೃತಿ ಶಿಬಿರ ಎಂಬ ಕಾರ್ಯಕ್ರಮವನ್ನು ಸಂಘಟಿಸುತ್ತಿದೆ. ಬೆಳಗಿನ ಅವಧಿಯಲ್ಲಿ ಯಾವುದಾದರೂ ಒಂದು ವಿಷಯದ ಮೇಲೆ ತಜ್ಞರಿಂದ ಉಪನ್ಯಾಸ, ಸಂವಾದ, ಚರ್ಚೆ, ಸಂಜೆ ಶಿವರಾಮ ಕಾರಂತ ರಂಗ ಮಂದಿರದಲ್ಲಿ ನಾಟಕ, ನೃತ್ಯ, ಸಂಗೀತ ಕಾರ್ಯಕ್ರಮ ನಡೆಸಲಾಗುತ್ತಿದೆ.

ಕಳೆದ ಮೂರು ವರ್ಷಗಳಿಂದ ಸಂಸ್ಕೃತಿ ಶಿಬಿರದ ಬದಲಾಗಿ ‘ಕಲೆಗಳ ಸಂಗಡ ಮಾತುಕತೆ’ ಎಂಬ ಶೀರ್ಷಿಕೆಯಡಿ ಶಿಬಿರ ನಡೆಯುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ವಿವಿಧ ವಯೋಮಾನದವರು, ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಶಿಬಿರದಲ್ಲಿ ಭಾಗಿಯಾಗುವುದು ವಿಶೇಷ ಸಂಗತಿಯಾಗಿದೆ. 

‘ನೀನಾಸಂ ಆವರಣದಲ್ಲಿರುವ ಹೆಚ್ಚಿನ ಕಟ್ಟಡಗಳು ಹಳತಾಗಿವೆ. 1972ರಲ್ಲಿ ಉದ್ಘಾಟನೆಗೊಂಡ ಶಿವರಾಮ ಕಾರಂತ ರಂಗ ಮಂದಿರವೂ ಸೇರಿದಂತೆ ಇಲ್ಲಿನ ಕಟ್ಟಡಗಳನ್ನು ನವೀಕರಿಸುವ ಜೊತೆಗೆ ಈಗ ನಡೆಯುತ್ತಿರುವ ಚಟುವಟಿಕೆಗಳನ್ನು ಮತ್ತಷ್ಟು ರಚನಾತ್ಮಕವಾಗಿ ಮುಂದುವರಿಸುವ ಇಚ್ಛಾಶಕ್ತಿಯನ್ನು ನೀನಾಸಂ ಹೊಂದಿದೆ’ ಎಂದು ಕೆ.ವಿ.ಅಕ್ಷರ ತಿಳಿಸಿದ್ದಾರೆ.

ನಾಟಕ ಸೇರಿದಂತೆ ಕಲೆ ಸಾಹಿತ್ಯ ಸಂಸ್ಕೃತಿ ಕ್ಷೇತ್ರದಲ್ಲಿ ತಲೆಮಾರನ್ನೆ ಪ್ರಭಾವಿಸುವ ಕೆಲಸ ನೀನಾಸಂನಿಂದ ನಡೆದಿದೆ. ತಾನು ಮಾಡುವ ಕೆಲಸದಲ್ಲಿ ವೃತ್ತಿಪರತೆಯನ್ನು ಮೈಗೂಡಿಸಿಕೊಂಡಿರುವ ನೀನಾಸಂಗೆ ಸರ್ಕಾರ ಮತ್ತು ಸಮಾಜ ಕೈ ಜೋಡಿಸಬೇಕಿದೆ
ಎಂ.ಗಣೇಶ್. ಪ್ರಾಂಶುಪಾಲ ನೀನಾಸಂ ರಂಗ ಶಿಕ್ಷಣ ಕೇಂದ್ರ 
ಹೆಗ್ಗೋಡಿನಲ್ಲಿರುವ ಶಿವರಾಮ ಕಾರಂತ ರಂಗ ಮಂದಿರ ಹಾಗೂ ನೀನಾಸಂನ ಹಳೆಯದಾಗಿರುವ ಕಟ್ಟಡಗಳ ನವೀಕರಣಕ್ಕೆ ₹ 4 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಹಾಗೂ ಸಹೃದಯರಿಂದ ನೆರವು ಸಿಗುವ ನಿರೀಕ್ಷೆ ಇದೆ
-ಕೆ.ವಿ.ಅಕ್ಷರ ನೀನಾಸಂ ಹೆಗ್ಗೋಡು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT