ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ನಾಟಕ: ಮಕ್ಕಳ ಮನಮುಟ್ಟುವ ಪೊಡವಿಯ ಕಥನ

ಪರಿಸರ ಜಾಗೃತಿ; ಬೀದಿ ನಾಟಕಕ್ಕೂ ತೆರೆದುಕೊಂಡ ಸಾಗರದ ಹವ್ಯಾಸಿ ಕಲಾವಿದರು
ಎಂ.ರಾಘವೇಂದ್ರ
Published 21 ಜನವರಿ 2024, 6:56 IST
Last Updated 21 ಜನವರಿ 2024, 6:56 IST
ಅಕ್ಷರ ಗಾತ್ರ

ಸಾಗರ: ದೇಶದ ರಂಗಭೂಮಿಯ ಭೂಪಟದಲ್ಲಿ ಸಾಗರಕ್ಕೆ ವಿಶಿಷ್ಟವಾದ ಸ್ಥಾನ. ಹೆಗ್ಗೋಡಿನ ನೀನಾಸಂ ಸಂಸ್ಥೆಯ ಚಟುವಟಿಕೆ ವಿದೇಶದಲ್ಲೂ ಹೆಸರು ಗಳಿಸಿದೆ. ಹವ್ಯಾಸಿ ರಂಗಭೂಮಿ ಕೂಡ ಸಕ್ರಿಯವಾಗಿರುವುದು ಸಾಗರ ತಾಲ್ಲೂಕಿನ ವಿಶೇಷತೆ.

ಆಯಾ ಕಾಲದ ವಿದ್ಯಮಾನಗಳಿಗೆ ಸ್ಪಂದಿಸುವುದು ರಂಗಭೂಮಿಯ ಹುಟ್ಟು ಗುಣ. ಪುರಾಣ, ಇತಿಹಾಸ, ಜಾನಪದದ ವಸ್ತುಗಳಿಗೆ ಸಂಬಂಧಿಸಿದಂತೆ ನಾಟಕವಾಡುವ ಜೊತೆಗೆ ಸಮಕಾಲೀನ ತಲ್ಲಣಗಳಿಗೆ ಕನ್ನಡಿ ಹಿಡಿಯುವ ಕೆಲಸ ರಂಗಭೂಮಿ ಯಾವತ್ತೂ ಮಾಡುತ್ತಿದೆ.

ಇಲ್ಲಿನ ಉದಯ ಕಲಾವಿದರು ಸಂಸ್ಥೆ ಈ ಹಿಂದೆ ಅಪರಾಧ ತಡೆ ಜಾಗೃತಿ ಅಂಗವಾಗಿ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಬೀದಿ ನಾಟಕ ಪ್ರದರ್ಶಿಸಿತ್ತು. ಜಾಗತೀಕರಣದಿಂದಾಗಿ ಬದಲಾಗುತ್ತಿರುವ ಮಾರುಕಟ್ಟೆ ವ್ಯವಸ್ಥೆಯ ಕುರಿತು ಇಲ್ಲಿನ ಪ್ರಜ್ಞಾರಂಗ ತಂಡ ‘ಸಂತೆಯ ಹುನ್ನಾರ’ ಎಂಬ ಬೀದಿ ನಾಟಕ ಆಯೋಜಿಸಿತ್ತು.

ಈ ಪರಂಪರೆಯನ್ನು ಹೆಗ್ಗೋಡಿನ ಕೆ.ವಿ.ಸುಬ್ಬಣ್ಣ ರಂಗಸಮೂಹ ತಂಡ ಈಗ ಮುಂದುವರೆಸುತ್ತಿದೆ. ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಈ ತಂಡವು ಪರಿಸರ ಜಾಗೃತಿ ಅಂಗವಾಗಿ ‘ಪೊಡವಿಯ ಕೊಡವಿದರೆ’ ಎಂಬ ಬೀದಿ ನಾಟಕ ಜಿಲ್ಲೆಯಾದ್ಯಂತ ಪ್ರದರ್ಶಿಸಲು ಮುಂದಾಗಿದೆ.

ಕೃಷಿಭೂಮಿಗೆ ನೀರುಣಿಸಲು ಹೇರಳ ಹಣ ಖರ್ಚು ಮಾಡಿ ಕೊಳವೆ ಬಾವಿ ತೋಡಿಸಿದರೂ ನೀರು ಕಾಣದ ರೈತನೊಬ್ಬ ಆತ್ಮಹತ್ಯೆಗೆ ಮುಂದಾಗುವ ವಿದ್ಯಮಾನದೊಂದಿಗೆ ‘ಪೊಡವಿಯ ಕೊಡವಿದರೆ’ ನಾಟಕ ಆರಂಭಗೊಳ್ಳುತ್ತದೆ. ನಂತರ ಮಲೆನಾಡಿನಲ್ಲೂ ಕೊಳವೆ ಬಾವಿ ತೋಡುವ ಪರಿಸ್ಥಿತಿ ಯಾಕೆ ಬಂದಿದೆ, 500 ಅಡಿ ಆಳ ಕೊರೆದರೂ ನೀರಿನ ಸೆಲೆ ಯಾಕೆ ಸಿಗುತ್ತಿಲ್ಲ ಎನ್ನುವ ಪ್ರಶ್ನೆಗಳ ಅನಾವರಣದೊಂದಿಗೆ ನಾಟಕ ತೆರೆದುಕೊಳ್ಳುತ್ತದೆ.

ಮಲೆನಾಡಿನ ಪಶ್ಚಿಮಘಟ್ಟಗಳಲ್ಲಿನ ಜೀವವೈವಿಧ್ಯ, ಹಲವು ನದಿಗಳ ಉಗಮ ಸ್ಥಾನವಾಗಿರುವ ಪಶ್ಚಿಮಘಟ್ಟ ಹೇಗೆ ಇಲ್ಲಿನ ಜೀವನಾಡಿಯಾಗಿದೆ, ಮಳೆ ಮಾರುತ ತರುವ ವಿಶಿಷ್ಟ ಪ್ರದೇಶವಾಗಿದೆ ಎಂಬುದನ್ನು ನಾಟಕ ವಿವರಿಸುತ್ತದೆ.

ಜನವರಿ-ಫೆಬ್ರವರಿ ತಿಂಗಳಲ್ಲಿ ಮಲೆನಾಡಿನ ಕಾಡುಗಳಲ್ಲಿ ಯಾಕೆ ಬೆಂಕಿ ಕಾಣಿಸಿಕೊಳ್ಳುತ್ತದೆ ಎಂಬ ಪ್ರಶ್ನೆಗೆ ನಾಟಕ ಮುಖಾಮುಖಿಯಾಗುತ್ತದೆ. ಇಲ್ಲಿ ವ್ಯಾಪಕ ಪ್ರಮಾಣದಲ್ಲಿ ಅರಣ್ಯ ನಾಶವಾಗುತ್ತಿರುವುದರಿಂದ ಹೆಚ್ಚುತ್ತಿರುವ ತಾಪಮಾನ, ಅಕಾಲಿಕ ಮಳೆಯಂತಹ ವೈಪರೀತ್ಯಗಳು ಸಂಭವಿಸುತ್ತಿರುವ ಬಗ್ಗೆ ನಾಟಕ ನೋಡುಗರನ್ನು ಚರ್ಚೆಗೆ ಆಹ್ವಾನಿಸುತ್ತದೆ.

ನಾಟಕದ ಕೊನೆಯಲ್ಲಿ ಮನುಷ್ಯ ಎದುರಿಸುತ್ತಿರುವ ಪರಿಸರದ ಜ್ವಲಂತ ಸಮಸ್ಯೆಗಳಿಗೆ ದೈವದ ಬಳಿ ಪರಿಹಾರ ಕೇಳಲು ಗ್ರಾಮಸ್ಥರು ಮುಂದಾಗುತ್ತಾರೆ. ‘ಇರುವ ಪರಿಸರವನ್ನು ಹಾಳು ಮಾಡಿ ಈಗ ನನ್ನ ಬಳಿ ಬಂದಿದ್ದೀರಾ, ನಿಮ್ಮಂತೆಯೆ ಈ ಭೂಮಿಯ ಮೇಲೆ ಬದುಕಲು ಹಲವು ಜೀವಿಗಳಿಗೆ ಅವಕಾಶವಿದೆ. ಈಗಲಾದರೂ ನೀವು ಎಚ್ಚೆತ್ತುಕೊಳ್ಳದಿದ್ದರೆ ಪ್ರಪಂಚವೇ ನಾಶವಾಗುತ್ತದೆ’ ಎಂದು ದೈವ ನುಡಿಯುತ್ತದೆ.

ಹೀಗೆ ದೈವದ ಮೂಲಕ ಪರಿಸರದ ಮಹತ್ವವನ್ನು ಜನರಿಗೆ ದಾಟಿಸುವ ಪ್ರಯತ್ನ ನಾಟಕದಲ್ಲಿ ನಡೆದಿದೆ. ‘ನಾವು ಸಾಯಲು ಹೊರಡುವುದಲ್ಲ, ನಿಧಾನವಾಗಿ ಸಾವೇ ನಮ್ಮ ಹತ್ತಿರ ಬರಲು ಹೊಂಚು ಹಾಕುತ್ತಿದೆ’ ಎನ್ನುವ ಮಾತಿನ ಮೂಲಕ ಪರಿಸರದ ಮೇಲೆ ನಾವು ಮಾಡುತ್ತಿರುವ ಆಕ್ರಮಣದಿಂದ ಆಗುತ್ತಿರುವ ಅನಾಹುತವನ್ನು ನಾಟಕ ಧ್ವನಿಸುತ್ತದೆ.

30 ನಿಮಿಷಗಳ ಈ ಬೀದಿ ನಾಟಕ ಹಾಡು, ನಟರ ಲವಲವಿಕೆಯ ಅಭಿನಯದಿಂದ ನೋಡುಗರ ಗಮನ ಸೆಳೆಯುತ್ತಿದೆ. ಪಶ್ಚಿಮಘಟ್ಟವಿರುವ ಎಲ್ಲಾ ಪ್ರದೇಶಗಳಲ್ಲೂ, ಶಾಲಾ ಕಾಲೇಜುಗಳಲ್ಲಿ ಈ ನಾಟಕ ಪ್ರದರ್ಶಿಸುವ ಮೂಲಕ ಪರಿಸರ ಜಾಗೃತಿ ಮೂಡಿಸಲು ಕೆ.ವಿ.ಸುಬ್ಬಣ್ಣ ರಂಗಸಮೂಹ ತಂಡ ಮುಂದಾಗಿದೆ.

ಸಾಗರ ತಾಲ್ಲೂಕಿನ ಹೆಗ್ಗೋಡು ಗ್ರಾಮದ ಕೆ.ವಿ.ಸುಬ್ಬಣ್ಣ ರಂಗಸಮೂಹ ತಂಡದ ‘ಪೊಡವಿಯ ಕೊಡವಿದರೆ’ (ರಚನೆ-ನಿರ್ದೇಶನ : ಯೇಸು ಪ್ರಕಾಶ್ ಹೆಗ್ಗೋಡು ) ಬೀದಿ ನಾಟಕದ ಒಂದು ದೃಶ್ಯ
ಸಾಗರ ತಾಲ್ಲೂಕಿನ ಹೆಗ್ಗೋಡು ಗ್ರಾಮದ ಕೆ.ವಿ.ಸುಬ್ಬಣ್ಣ ರಂಗಸಮೂಹ ತಂಡದ ‘ಪೊಡವಿಯ ಕೊಡವಿದರೆ’ (ರಚನೆ-ನಿರ್ದೇಶನ : ಯೇಸು ಪ್ರಕಾಶ್ ಹೆಗ್ಗೋಡು ) ಬೀದಿ ನಾಟಕದ ಒಂದು ದೃಶ್ಯ
ಸಾಗರ ತಾಲ್ಲೂಕಿನ ಹೆಗ್ಗೋಡು ಗ್ರಾಮದ ಕೆ.ವಿ.ಸುಬ್ಬಣ್ಣ ರಂಗಸಮೂಹ ತಂಡದ ‘ಪೊಡವಿಯ ಕೊಡವಿದರೆ’ (ರಚನೆ-ನಿರ್ದೇಶನ : ಯೇಸು ಪ್ರಕಾಶ್ ಹೆಗ್ಗೋಡು ) ಬೀದಿ ನಾಟಕದ ಒಂದು ದೃಶ್ಯ
ಸಾಗರ ತಾಲ್ಲೂಕಿನ ಹೆಗ್ಗೋಡು ಗ್ರಾಮದ ಕೆ.ವಿ.ಸುಬ್ಬಣ್ಣ ರಂಗಸಮೂಹ ತಂಡದ ‘ಪೊಡವಿಯ ಕೊಡವಿದರೆ’ (ರಚನೆ-ನಿರ್ದೇಶನ : ಯೇಸು ಪ್ರಕಾಶ್ ಹೆಗ್ಗೋಡು ) ಬೀದಿ ನಾಟಕದ ಒಂದು ದೃಶ್ಯ

‘ಪೊಡವಿಯ ಕೊಡವಿದರೆ’ ಬೀದಿ ನಾಟಕ ಪ್ರದರ್ಶನವಾದ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಾವು ಹಲವು ದಿನ ಪಾಠ ಮಾಡಿ ಹೇಳಬೇಕಾದ ಸಂಗತಿಗಳನ್ನು ಒಂದು ನಾಟಕದ ಮೂಲಕ ವಿದ್ಯಾರ್ಥಿಗಳಿಗೆ ಹೇಳಿದ್ದೀರಿ ಎಂಬ ಶಿಕ್ಷಕರೊಬ್ಬರ ಮಾತು ಪ್ರದರ್ಶನ ಮುಂದುವರಿಕೆಗೆ ಪ್ರೇರಣೆ ನೀಡಿದೆ- ಯೇಸು ಪ್ರಕಾಶ್ ಹೆಗ್ಗೋಡು ನಾಟಕದ ನಿರ್ದೇಶಕ

-ನಾಟಕದ ಕಲಾವಿದರು ಪ್ರಸನ್ನ ಹುಣಸೆಕೊಪ್ಪ ಶ್ರೀಪಾದ ಭಾಗವತ್ ಕೃಷ್ಣಕುಮಾರ್ ಖಂಡಿಕಾ ಗಣಪತಿ ನಂದಿತಳೆ ಕುಮಾರ್ ದೊಂಬೆಕೊಪ್ಪ ಶ್ರೀಧರ ಭಾಗ್ವತ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT