ಶುಕ್ರವಾರ, ಆಗಸ್ಟ್ 6, 2021
25 °C
ಜಿಲ್ಲಾ ಮರಳು ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮಾಹಿತಿ

ಮನ್ಸೂನ್ ಆರಂಭ; ಮರಳು ಗಣಿಗಾರಿಕೆ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಜಿಲ್ಲೆಯಲ್ಲಿ ಮಾನ್ಸೂನ್ ಮುಗಿಯುವವರೆಗೆ ಮರಳು ಗಣಿಗಾರಿಕೆ ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮರಳು ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಮರಳು ಗಣಿಗಾರಿಕೆ ಮಾನ್ಸೂನ್ ಮುಕ್ತಾಯವಾಗುವ ತನಕ ಸ್ಥಗಿತಗೊಳಿಸಲು ಈಗಾಗಲೇ ಸೂಚಿಸಲಾಗಿದೆ. ಸ್ಟಾಕ್‍ಯಾರ್ಡ್‍ಗಳಲ್ಲಿರುವ ಮರಳು ನಿಗದಿತ ಕಾಲಮಿತಿಯ ಒಳಗಾಗಿ ಸಾಗಣೆ ಮಾಡಲು ಅವಕಾಶ ನೀಡಲಾಗುವುದು. ಮಾನ್ಸೂನ್ ಅವಧಿಯಲ್ಲಿ ಮರಳುಗಾರಿಕೆ ನಡೆಯಲು ಅವಕಾಶ ನೀಡಬಾರದು. ತಾಲ್ಲೂಕುಮಟ್ಟದ ಸಮಿತಿ ಇದಕ್ಕೆ ಜವಾಬ್ದಾರಿ ಎಂದರು.

ತಪಾಸಣೆ ಚುರುಕು: ಪ್ರಸಕ್ತ ಸಾಲಿನಲ್ಲಿ ಮೇ ಅಂತ್ಯದವರೆಗೆ ಅಕ್ರಮ ಮರಳು ಸಾಗಣೆ ಮಾಡಿದ 16 ವಾಹನಗಳನ್ನು ಜಪ್ತಿ ಮಾಡಲಾಗಿದೆ. ₨ 1.48 ಲಕ್ಷ ದಂಡ ವಸೂಲು ಮಾಡಲಾಗಿದೆ. ಮರಳು ಸಾಗಣೆಯಿಂದ ₨ 24.23 ಲಕ್ಷ ರಾಜಧನ ಸಂಗ್ರಹಿಸಲಾಗಿದೆ. ಹೆಚ್ಚುವರಿ ಪಾವತಿ ಮೊತ್ತ ₨ 2.61 ಕೋಟಿ ಸಂಗ್ರಹಿಸಲಾಗಿದೆ. ಅಕ್ರಮ ಮರಳು ಗಣಿಗಾರಿಕೆಯಿಂದ ₨ 8 ಲಕ್ಷ ರಾಜಧನ,  ಕಟ್ಟಡ ಕಲ್ಲುಗಣಿಗಾರಿಕೆಯಿಂದ ₨ 8.78 ಲಕ್ಷ ರಾಜಧನ ಪಡೆಯಲಾಗಿದೆ. ಕಟ್ಟಡ ಕಲ್ಲು ಅಕ್ರಮ ಗಣಿಗಾರಿಕೆ ಮತ್ತು ಸಾಗಣಿಕೆಯಿಂದ ₨ 3.96 ಲಕ್ಷ ದಂಡ ಸಂಗ್ರಹಿಸಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿ ರಶ್ಮಿ ಮಾಹಿತಿ ನೀಡಿದರು.

ಅನಧಿಕೃತ ಮರಳುಗಾರಿಕೆ, ಅಕ್ರಮ ಗಣಿಗಾರಿಕೆ ತಡೆಯಲು ತಪಾಸಣೆ ತೀವ್ರಗೊಳಿಸಬೇಕು. ಸರ್ಕಾರಿ ಆಸ್ತಿ ಕಳ್ಳತನದ ಮೊಕದ್ದಮೆ ದಾಖಲಿಸಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಳ್ಳಕೊಳ್ಳದಿಂದ ಮರಳು ತೆಗೆಯಲು ಬ್ಲಾಕ್ ಗುರುತಿಸಬೇಕು. ತಾಲ್ಲೂಕುಮಟ್ಟದ ಸಮಿತಿ ಶಿಫಾರಸು ಬಂದರೆ ಜಿಲ್ಲಾ ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ಪರಿಶೀಲಿಸಬೇಕು ಎಂದು ಶಿವಕುಮಾರ್ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ಯೋಜನಾ ನಿರ್ದೇಶಕ ವೀರಾಪುರ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.