ಸಾಗರ: ಇಲ್ಲಿನ ಮಂಕಳಲೆಯ ಸಂತ ಜೋಸೆಫರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ರಕ್ಷಾ ಬಂಧನ ಆಚರಣೆಗೆ ತಡೆಯೊಡ್ಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗುರುವಾರ ಶಾಲೆಗೆ ಬಂದ ಪೋಷಕರು ಹಾಗೂ ಶಿಕ್ಷಕರೊಂದಿಗೆ ಪೊಲೀಸರು ಸಮಾಲೋಚನೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಬುಧವಾರ ರಕ್ಷಾಬಂಧನದ ಹಿನ್ನೆಲೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿಗಳು ಪರಸ್ಪರ ರಾಖಿ ಕಟ್ಟಿದರು. ಒಬ್ಬ ವಿದ್ಯಾರ್ಥಿನಿ ಎಲ್ಲರ ಎದುರು ವಿದ್ಯಾರ್ಥಿಯೊಬ್ಬನಿಗೆ ರಾಖಿ ಕಟ್ಟಿದ್ದರಿಂದ ವಿದ್ಯಾರ್ಥಿ ಮನನೊಂದು ಶೌಚಾಲಯದ ಕೊಠಡಿಗೆ ತೆರಳಿ ಅಳಲು ಆರಂಭಿಸಿದ್ದಾನೆ ಎನ್ನಲಾಗಿದೆ.
ಈ ವಿಷಯ ಶಾಲೆಯ ಶಿಕ್ಷಕ ವರ್ಗದವರಿಗೆ ತಿಳಿದು ಬಾಲಕನ ಕೈಗೆ ಕಟ್ಟಿದ್ದ ರಾಖಿಯನ್ನು ತೆಗೆಸುವ ಜೊತೆಗೆ ಇತರ ವಿದ್ಯಾರ್ಥಿಗಳ ರಾಖಿಯನ್ನು ಸಹ ತೆಗೆಸಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿಗಳು ಮನೆಗೆ ತೆರಳಿ ಈ ವಿಷಯವನ್ನು ಪೋಷಕರಿಗೆ ತಿಳಿಸಿದ್ದರು.
ಇದರಿಂದ ಅಸಮಾಧಾನಗೊಂಡ ಕೆಲ ಪೋಷಕರು ಶಾಲೆಗೆ ಧಾವಿಸಿ ನಡೆದಿರುವ ವಿಷಯದ ಬಗ್ಗೆ ಸಮಾಲೋಚನೆ ನಡೆಸಿದರು. ಹಿಂದೂ ಜಾಗರಣಾ ವೇದಿಕೆಯ ಪ್ರಮುಖರು ಸ್ಥಳಕ್ಕೆ ಬಂದು ವಿದ್ಯಾರ್ಥಿಗಳು ಕಟ್ಟಿದ್ದ ರಾಖಿಯನ್ನು ತೆಗೆಸಿದ ಕ್ರಮವನ್ನು ಖಂಡಿಸಿದ್ದಾರೆ.
‘ಕಟ್ಟಿಸಿದ್ದ ರಾಖಿಯನ್ನು ಬಿಚ್ಚಿಸಿದ್ದಲ್ಲದೆ, ಮರುದಿನ ಬೆಳಿಗ್ಗೆ 11 ಗಂಟೆಯವರೆಗೂ ವಿದ್ಯಾರ್ಥಿಗಳನ್ನು ಶಾಲೆ ಕೊಠಡಿಯಿಂದ ಹೊರಗೆ ನಿಲ್ಲಿಸುವ ಶಿಕ್ಷೆ ನೀಡಿದ್ದು ಎಷ್ಟು ಸರಿ’ ಎಂದು ಸ್ಥಳದಲ್ಲಿದ್ದವರು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಕಾರಣ ಡಿವೈಎಸ್‌ಪಿ ಗೋಪಾಲಕೃಷ್ಣ ನಾಯ್ಕ್, ಸರ್ಕಲ್ ಇನ್‌ಸ್ಪೆಕ್ಟರ್ ಸೀತಾರಾಮ್, ಕೃಷ್ಣಪ್ಪ, ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗೆ ತೆರಳಿ ಪೋಷಕರು ಹಾಗೂ ಶಿಕ್ಷಕರೊಂದಿಗೆ ಮಾತುಕತೆ ನಡೆಸಿದರು.
ಶಾಲೆಯ ಮುಖ್ಯ ಶಿಕ್ಷಕರು ನಡೆದಿರುವ ಘಟನೆಯ ಬಗ್ಗೆ ಕ್ಷಮೆ ಯಾಚಿಸಿದ ಕಾರಣ ಪ್ರಕರಣ ಸುಖಾಂತ್ಯಗೊಂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.