ಶುಕ್ರವಾರ, ಜನವರಿ 27, 2023
20 °C
‘ಶತಮಾನದ ಶಾಂತವೇರಿ’ ವಿಚಾರಸಂಕಿರಣ ಮತ್ತು ನೆನಪು ಕಾರ್ಯಕ್ರಮ

ಡಿಜಿಟಲ್‌ ಮಾಧ್ಯಮದಲ್ಲಿ ಶಾಂತವೇರಿ ವ್ಯಕ್ತಿತ್ವ ಪರಿಚಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸರಳ ಮತ್ತು ಪ್ರಾಮಾಣಿಕ ರಾಜಕಾರಣಿಯಾಗಿದ್ದ ಶಾಂತವೇರಿ ಗೋಪಾಲಗೌಡರ ವ್ಯಕ್ತಿತ್ವವನ್ನು ಈಗಿನ ಪೀಳಿಗೆಗೆ ಡಿಜಿಟಲ್‌ ಮಾಧ್ಯಮಗಳ ಮೂಲಕ ಪರಿಚಯಿಸುವ ಕಾರ್ಯವನ್ನು ಮಲೆನಾಡಿನ ಸಮಾನ ಮನಸ್ಸುಗಳ ಚಿಂತನ ಸಂಗಮ ಕೈಗೊಳ್ಳಲು ನಿರ್ಧರಿಸಿದೆ. 

ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಶತಮಾನದ ಶಾಂತವೇರಿ’ ವಿಚಾರಸಂಕಿರಣ ಮತ್ತು ನೆನಪು ಕಾರ್ಯಕ್ರಮದಲ್ಲಿ ಈ ವಿಷಯ ತಿಳಿಸಿದ ಶಾಂತವೇರಿ ಗೋಪಾಲಗೌಡ ಅವರ ಪುತ್ರ ರಾಮಮನೋಹರ ಶಾಂತವೇರಿ ಅವರು, ‘ಸರ್ಕಾರದ ಸಹಯೋಗದಲ್ಲಿ ಇಡೀ ವರ್ಷ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಮುಖವಾಗಿ, ಯೂಟ್ಯೂಬ್‌ ಮೂಲಕ ಶಾಂತವೇರಿ ಅವರ ಕುರಿತು ವಿವಿಧ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುವುದು’ ಎಂದು ತಿಳಿಸಿದರು.

‘ಶಾಂತವೇರಿ ಗೋಪಾಲಗೌಡರ ಜೀವನದ ಮುಖ್ಯ ಘಟನೆಗಳನ್ನು ಆಯ್ದುಕೊಂಡು ಸಾಕ್ಷ್ಯಚಿತ್ರ ಮಾಡಿ, ಶಾಲಾ-ಕಾಲೇಜುಗಳಲ್ಲಿ ಬಿತ್ತರಿಸುವ ಜತೆಗೆ ಕೈಪಿಡಿ ವಿತರಿಸಲಾಗುವುದು. ಜತೆಗೆ, ವೆಬ್‌ಸೈಟ್‌ ಸಹ ರೂಪಿಸಲು ಉದ್ದೇಶಿಸಲಾಗಿದೆ. ಹಿರಿಯ ರಾಜಕಾರಣಿಗಳಿಗೆ ಅವರ ವ್ಯಕ್ತಿತ್ವ ಚಿರಪರಿಚಿತ. ಆದರೆ, ಇಂದಿನ ವಿದ್ಯಾರ್ಥಿಗಳಿಗೆ ಅಪರಿಚಿತ. ಹೀಗಾಗಿ, ಈ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ’ ಎಂದು ತಿಳಿಸಿದರು.

‘ಸಂವಿಧಾನದ ಆಶಯ ಮತ್ತು ಶಾಂತವೇರಿ’ ಕುರಿತು ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ, ‘ವಿಧಾನಮಂಡಲ ಅಧಿವೇಶನದಲ್ಲಿ ಕೇವಲ ಭಾವನಾತ್ಮಕ ವಿಷಯಗಳು ಹೆಚ್ಚು ಚರ್ಚೆಗಳು ನಡೆಯುತ್ತಿವೆ. ನಿರುದ್ಯೋಗದ ಬದಲಿಗೆ ಲವ್ ಜಿಹಾದ್, ಅನ್ನದ ಬದಲಿಗೆ ಗೋಹತ್ಯೆ ನಿಷೇಧದ ವಿಷಯಗಳು ಚರ್ಚೆಯ ವಸ್ತುಗಳಾಗಿವೆ. ರೈತರ ಆತ್ಮಹತ್ಯೆ, ಕೈಗಾರಿಕಾ ಬಿಕ್ಕಟ್ಟಿನ ಬಗ್ಗೆ ಚರ್ಚೆಗಳೇ ನಡೆಯುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮೀಕ್ಷೆಯೊಂದರ ಪ್ರಕಾರ ಸಂಸತ್ತಿನಲ್ಲಿ ಶೇ 88ರಷ್ಟು ಸದಸ್ಯರು ಕೋಟ್ಯಧಿಪತಿಗಳಾಗಿದ್ದು, ಶೇ 43 ಸದಸ್ಯರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಶೇ 56 ಸದಸ್ಯರು ಕುಟುಂಬ ರಾಜಕಾರಣ, ರಿಯಲ್ ಎಸ್ಟೇಟ್ ಹಿನ್ನೆಲೆಯವರು. ಸಂಸತ್‌ ಅಧಿವೇಶನದ ಪ್ರತಿ ನಿಮಿಷಕ್ಕೆ ₹1 ಲಕ್ಷ ಖರ್ಚಾಗುತ್ತದೆ. ವರ್ಷಕ್ಕೆ ಅಂದಾಜು ₹500 ಕೋಟಿ ಖರ್ಚಾಗುತ್ತದೆ. ಆದರೆ, ಅಲ್ಲಿ ಜನರ ಬದುಕಿನ ಬಗ್ಗೆ ಚರ್ಚೆಗಳೇ ನಡೆಯುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಲೇಖಕ ಪ್ರೊ. ಕಾಳೇಗೌಡ ನಾಗವಾರ ಮಾತನಾಡಿ, ‘ನಾಡು ಕಂಡ ಶ್ರೇಷ್ಠ ಹಾಗೂ ಮೌಲ್ಯಾಧಾರಿತ ರಾಜಕಾರಣಿ ಶಾಂತವೇರಿ ಗೋಪಾಲಗೌಡರು ಸಮಾಜವಾದದ ಚಿಂತನೆ ಮತ್ತು ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದರು. ಅವರು ರಾಜಕಾರಣಿಗಳಿಗೆ ಮಾದರಿಯಾಗಿದ್ದರು’ ಎಂದು ಸ್ಮರಿಸಿದರು.

ಪ್ರಾಧ್ಯಾಪಕರಾದ ರಾಜಶೇಖರ್‌ ಕಿಗ್ಗ, ಡಾ.ಶ್ರೀಪತಿ ಹಳಗುಂದ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು