ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶರಾವತಿ ಕಣಿವೆ: ಗಾಂಜಾ ಮಾರಾಟ ವ್ಯಾಪಕ

ಸುಕುಮಾರ್ ಎಂ
Published 27 ಜೂನ್ 2024, 6:04 IST
Last Updated 27 ಜೂನ್ 2024, 6:04 IST
ಅಕ್ಷರ ಗಾತ್ರ

ತುಮರಿ: ಶರಾವತಿ ಕಣಿವೆ ವ್ಯಾಪ್ತಿಯ ಮರಾಠಿ, ಕಟ್ಟಿನಕಾರು, ಕೋಗಾರು, ಕಳೂರು ಮತ್ತಿತರ ಕುಗ್ರಾಮಗಳಲ್ಲಿನ ಮೂಲ ಸೌಕರ್ಯದ ಕೊರತೆ ಹೆಚ್ಚು ಚರ್ಚೆಯಾಗುತ್ತದೆ. ಆದರೆ, ಈ ಗ್ರಾಮಗಳಿಗೆ ಶಾಪವಾಗಿರುವ ಗಾಂಜಾ, ಮದ್ಯ ಮಾರಾಟದ ಹಾವಳಿ ಗೌಣವಾಗಿದೆ.

ಶರಾವತಿ ಹಿನ್ನೀರಿನ ಬೆಟ್ಟಗುಡ್ಡ ಪ್ರದೇಶ ವ್ಯಾಪ್ತಿಯಲ್ಲಿ ಗಾಂಜಾ ಬೆಳೆದ ಹಾಗೂ ಒಣ ಗಾಂಜಾ ಮಾರಾಟ ಯತ್ನ ಪ್ರಕರಣ ಆಗಾಗ ಕೇಳಿಬರುತ್ತದೆ. ಪೊಲೀಸರು ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳು ಗಾಂಜಾ ಬೆಳೆದವರು, ಮಾರಾಟ ಮಾಡಿದವರನ್ನು ಬಂಧಿಸುತ್ತಾರೆ. ಹಸಿ ಗಾಂಜಾ ಬೆಳೆದ ಪ್ರಕರಣಗಳಲ್ಲಿ ಸುತ್ತಮುತ್ತಲಿನವರೇ ಸಿಕ್ಕಿ ಬೀಳುತ್ತಾರೆ.

‘ಈ ಭಾಗದ ಸಿಂಗಳೀಕ ಅಭಯಾರಣ್ಯದ ಕಡಿದಾದ ದಾರಿ, ದಟ್ಟವಾದ ಕಾಡು ಗಾಂಜಾ ಬೆಳೆಯುವವರಿಗೆ ಹೇಳಿ ಮಾಡಿಸಿದಂತಿದೆ. ಸ್ಥಳೀಯರು ಮಾತ್ರವಲ್ಲದೇ, ಹೊರಗಿನವರು ಬೆಟ್ಟ ವ್ಯಾಪ್ತಿಯ ಕುಗ್ರಾಮಗಳ ವ್ಯಾಪ್ತಿಯಲ್ಲಿ ಕಾಡಿನೊಳಗೆ ಗಾಂಜಾ ಬೀಜ ಎಸೆದು ಹೋಗುತ್ತಾರೆ. ಬೆಳೆದ ನಂತರ ಸ್ಥಳೀಯರೇ ಅದನ್ನು ಪೆಡ್ಲರ್‌ಗಳಿಗೆ ಪೂರೈಸುತ್ತಾರೆ’ ಎಂದು ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ .

ಕಳೆದ ವರ್ಷ ಸಮೀಪದ ಕಟ್ಟಿನಕಾರು ಗ್ರಾಮದಲ್ಲಿ ಗಾಂಜಾಗೆ ಸಂಬಂಧಿಸಿದ ಒಂದು ಪ್ರಕರಣ ದಾಖಲಾಗಿದೆ. ಬಹುತೇಕ ಪ್ರಕರಣ ಸ್ಥಳೀಯರಿಗೆ ಸಂಬಂಧಿಸಿದ್ದಾಗಿತ್ತು. ಇದೇ ಗ್ರಾಮದ ವ್ಯಕ್ತಿಯೊಬ್ಬನನ್ನು ಅಕ್ರಮ ಗಾಂಜಾ ಮಾರಾಟ ಪ್ರಕರಣದಲ್ಲಿ ಬಂಧಿಸಲಾಗಿತ್ತು. 

ಈ ತಿಂಗಳು ಪೊಲೀಸರು ಮತ್ತೊಂದು ಪ್ರಕರಣ ಪತ್ತೆ ಮಾಡಿದ್ದಾರೆ. ತಾಲ್ಲೂಕಿನ ಎಳ್ಳಾರೆ ಕ್ರಾಸ್ ಬಳಿ 790 ಗ್ರಾಂ ಒಣ ಗಾಂಜಾ ಮಾರಾಟ ಮಾಡಲು ಯತ್ನಿಸಿದ ಆರೋಪದಡಿ ಕರೂರು ಹೋಬಳಿಯ ಕುದರೂರು, ಮರಾಠಿ, ಕಟ್ಟಿನಕಾರು ಗ್ರಾಮದ ತಲಾ ಒಬ್ಬರನ್ನು ಬಂಧಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಮಾರಾಟ:

ತುಮರಿ, ಹೊಸೂರು, ನಾಗೋಡಿ, ಕಟ್ಟಿನಕಾರು ಸುತ್ತಲಿನ ಪ್ರದೇಶಗಳಿಗೆ ಗಾಂಜಾ ಸೇವನೆಗಾಗಿ ಬರುವವರೂ ಇದ್ದಾರೆ.  ಮಾದಕ ವಸ್ತು ಎಲ್ಲಿ ಸಿಗುತ್ತದೆ? ಮಾರಾಟಗಾರರು ಯಾರು? ಎಂಬುದು ಅವರಿಗೆ ಗೊತ್ತಿರುತ್ತದೆ. 2 ಗ್ರಾಂ ಒಣ ಗಾಂಜಾಗೆ ಸಾಕಷ್ಟು ಹಣ ದೊರೆಯುತ್ತದೆ ಎಂದು  ಮೂಲಗಳು ಹೇಳುತ್ತವೆ.

‘ಪೊಲೀಸರ ಕಣ್ಣು ತಪ್ಪಿಸಲು ಸ್ಥಳೀಯರೇ ಕೆಲವರು ಪೆಡ್ಲರ್‌ಗಳಿಗೆ, ಮಾರಾಟಗಾರರಿಗೆ ಸಹಾಯ ಮಾಡುತ್ತಾರೆ. ಸ್ಥಳೀಯರು ದುಡ್ಡಿನ ಆಸೆಗೆ ಇದನ್ನೆಲ್ಲ ಮಾಡುತ್ತಾರೆ. ಕಾಡಂಚಿನ ಆಸುಪಾಸು ಈ ಭಾಗದ ಗುಡಿ ಹಿತ್ತಲು, ನಾಗೋಡಿ, ಮೇಘಾನೆ, ಕೋಗಾರು, ಮುಪ್ಪಾನೆ ಲಾಂಚ್ ಮಾರ್ಗ, ಭಟ್ಕಳ ಮಾರ್ಗ ಮಧ್ಯದಲ್ಲಿ ಮಾರಾಟ ಮಾಡಲಾಗುತ್ತದೆ’ ಎಂದು ಕಣಿವೆ ನಿವಾಸಿಗಳು ಮಾಹಿತಿ ನೀಡುತ್ತಾರೆ.

ಪೋಲಿಸರು ಗ್ರಾಮೀಣ ಪ್ರದೇಶದಲ್ಲಿ ಗಾಂಜಾ ಸೇವನೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಇಲ್ಲಿನ ಸಮಾಜ ಪರಿವರ್ತನಾ ಟ್ರಸ್ಟ್  ಆಗ್ರಹಿಸಿದೆ.

ಸ್ಥಳೀಯರು ದುಶ್ಚಟಕ್ಕೆ ಬಲಿ:

‘ಗ್ರಾಮೀಣ ಭಾಗದ ಯುವಜನರು ಕೂಡ ಗಾಂಜಾ, ಮದ್ಯ ಸೇವನೆಯ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಸೌಲಭ್ಯಗಳಿಲ್ಲ ಎಂಬ ಕೊರಗು ಒಂದೆಡೆಯಾದರೆ, ಯುವಕರು ಬೇಡದ ಚಟಗಳಿಗೆ ದಾಸರಾಗುತ್ತಿದ್ದಾರೆ. ಶಿಕ್ಷಣವೂ ಇಲ್ಲ, ಮುಂದೆ ಆಗುವ ಅನಾಹುತಗಳ ಅಂದಾಜು ಇಲ್ಲ. ಕಡಿವಾಣ ಹಾಕೋಣ ಎಂದರೆ ಹೇಳಿದ್ದನ್ನು ಕೇಳುವವರು ಯಾರೂ ಇಲ್ಲ’ ಎಂದು ಅಲ್ಲಿನ ನಿವಾಸಿ ಸಂತೋಷ್ ಶೆಟ್ಟಿ ಹೇಳುತ್ತಾರೆ.

ಗ್ರಾಮೀಣ ಪ್ರದೇಶದ ಕಾಡಿನ ಆಸುಪಾಸಿನಲ್ಲಿ ಗಾಂಜಾ ಬೆಳೆಯುವ ಬಗ್ಗೆ ಮಾಹಿತಿ ಇದೆ. ಈಗಾಗಲೇ ಮಾದಕ ವಸ್ತು ಸಾಗಣೆ ಹಾಗೂ ಮಾರಾಟದ ಮೇಲೆ ನಿಗಾ ಇಡಲಾಗಿದೆ.
ಸಂದೀಪ್ ಅಬಕಾರಿ ಇನ್‌ಸ್ಪೆಕ್ಟರ್ ಸಾಗರ
- ಗಾಂಜಾ ನಶೆಗೆ ಯುವ ಸಮುದಾಯ ಆಕರ್ಷಿತರಾಗುತ್ತಿರುವುದು ಆತಂಕ ತಂದಿದೆ. ಪಾಲಕರು ಮಕ್ಕಳ ಚಲನವಲನ ಯಾರೊಂದಿಗೆ ಸ್ನೇಹ ಬೆಳೆಸಿದ್ದಾರೆ ಎನ್ನುವ ಬಗ್ಗೆ ತಿಳಿದುಕೊಂಡಿರಬೇಕು.
ರಾಜೀವ್ ಬಿ.ಎನ್. ಬ್ಯಾಕೋಡು ಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT