ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂದಲದಲ್ಲಿ ಶಿವಮೊಗ್ಗ ದಸರಾ ಜಂಬೂಸವಾರಿ

ನಡೆದಿಲ್ಲ ಆನೆಗಳ ಮೆರವಣಿಗೆ ತಾಲೀಮು; ದಿನಗಳು ಉರುಳಿದರೂ ನಗರ ಪ್ರವೇಶಿಸದ ಗಜಪಡೆ
Last Updated 12 ಅಕ್ಟೋಬರ್ 2021, 3:30 IST
ಅಕ್ಷರ ಗಾತ್ರ

ಶಿವಮೊಗ್ಗ: ಮೈಸೂರು ದಸರಾ ಮಾದರಿಯಲ್ಲೇ ಶಿವಮೊಗ್ಗ ದಸರಾವನ್ನು ನಡೆಸಲು ಮುಂದಾಗಿರುವ ಮಹಾನಗರ ಪಾಲಿಕೆ ಜಂಬೂಸವಾರಿಗೆ ಬೇಕಾದ ತಯಾರಿಯೇ ನಡೆಸಿಲ್ಲ!

ಶಿವಮೊಗ್ಗ ದಸರಾ ಮೆರಣಿಗೆಯ ಜಂಬೂಸವಾರಿಗಾಗಿ ಆನೆಗಳನ್ನು ಕಳುಹಿಸಲು ಸರ್ಕಾರಕ್ಕೆ ಪಾಲಿಕೆ ಪತ್ರ ಬರೆದಿದೆ. ಸರ್ಕಾರವೂ ಸಕ್ರೆಬೈಲು ಆನೆ ಬಿಡಾರದಿಂದ ಪಳಗಿದ ಎರಡು ಆನೆಗಳನ್ನು ಕಳುಹಿಸಿಕೊಡುವಂತೆ ಆದೇಶಿಸಿದೆ. ಆದರೆ, ಇದುವರೆಗೆ ಯಾವ ಆನೆಗಳನ್ನು ಕಳುಹಿಸಬೇಕು ಎಂಬುದೇ ನಿರ್ಧಾರವಾಗಿಲ್ಲ.

ಆನೆ ಸಾಗರನ ಜತೆ ಭಾನುಮತಿ: ಪ್ರತಿ ವರ್ಷ ಶಿವಮೊಗ್ಗ ದಸರಾದಲ್ಲಿ ಭಾಗವಹಿಸುವ ಆನೆಗಳಿಗೆ ನವರಾತ್ರಿ ಆರಂಭಕ್ಕೂ ವಾರಗಳ ಮೊದಲೇ ತಾಲೀಮು ಆರಂಭವಾಗುತ್ತಿತ್ತು. ಈ ಬಾರಿ ಆನೆಗಳ ಆಯ್ಕೆಯೇ ಖಚಿತವಾಗಿಲ್ಲ. ಮೊದಲು ಆನೆಸಾಗರನನ್ನು‌ ಆಯ್ಕೆ ಮಾಡಲಾಗಿದೆ. ಆದರೆ, ಸಾಗರನ ಜತೆ ಕೊನೆಗಳಿಗೆಯಲ್ಲಿ ಭಾನುಮತಿ ಆಯ್ಕೆ ಮಾಡಲಾಗಿದೆ. ಆದರೆ ಅಂತಿಮ ಆಗಿಲ್ಲ. ದಸರೆಯ ಜಂಬೂಸವಾರಿಗೆ ಪ್ರತಿ ವರ್ಷ ಸಕ್ರೆಬೈಲುಆನೆ ಬಿಡಾರದಿಂದ ಆನೆಗಳು ಭಾಗವಹಿ
ಸುತ್ತಿದ್ದವು. ಸಾಗರ ಅಂಬಾರಿಯನ್ನು ಹೊರುತ್ತಿತ್ತು. ಆನೆಗಳು ಜಂಬೂ ಸವಾರಿಯಲ್ಲಿ ಭಾಗವಹಿಸಬೇಕಾದರೆ ಅವುಗಳಿಗೆ ತಾಲೀಮು ಅತ್ಯಗತ್ಯ. ಇನ್ನೂ ಯಾವುದೂ ನಿರ್ಧಾರವಾಗಿಲ್ಲ. ಕೊನೆ ಹಂತದಲ್ಲಿ ಆನೆಗಳಿಗೆ ತಾಲೀಮು ಕಷ್ಟವಾಗಬಹುದು ಎನ್ನುತ್ತಾರೆ ಆನೆ ಬಿಡಾರದ ಸಿಬ್ಬಂದಿ.

ಈ ಹಿಂದೆ ಶಿವಮೊಗ್ಗ ದಸರಾದಲ್ಲಿ ಸಾಗರನ ಜೊತೆ ಹೆಜ್ಜೆ ಹಾಕಿದ್ದ ಸಕ್ರೆಬೈಲಿನ ಹಿರಿಯ ಆನೆಗಳಾದ ಗೀತಾ ಮತ್ತು ಗಂಗೆ ಮೃತಪಟ್ಟಿವೆ. ಹಾಗಾಗಿ ಬಿಡಾರದಲ್ಲಿ ಪಳಗಿದ ಆನೆಗಳು ಇಲ್ಲ. ಸಾಗರನ ಜತೆ ಈ ಬಾರಿ ದಸರಾಕ್ಕೆ ಯಾವ ಆನೆಯನ್ನು ಕಳುಹಿಸಬೇಕು ಎಂದು ಬಿಡಾರದ ಸಿಬ್ಬಂದಿಯೇ ಗೊಂದಲದಲ್ಲಿದ್ದಾರೆ.

ಜಂಬೂಸವಾರಿ ನಡೆಯುತ್ತದೆಯೇ?: ದಸರಾದಲ್ಲಿ ಆನೆ ಭಾಗವಹಿಸಲು ಆದೇಶ ನೀಡಿರುವ ಸರ್ಕಾರ ಕೆಲ ನಿಬಂಧನೆಯನ್ನು ವಿಧಿಸಿದೆ.ಆನೆಗಳನ್ನು ಪೂಜೆಗಳಿಗೆ ಮಾತ್ರ ಬಳಸಬೇಕು. ಮೆರವಣಿಗೆಗೆ ಆನೆಗಳನ್ನು ಬಳಸಬಾರದು. ಆನೆಗಳನ್ನು ಬಳಸಿಕೊಂಡು ಕಾರ್ಯಕ್ರಮ ನಡೆಸುವಾಗ ಯಾವುದೇ ಅವಘಡಗಳು ಸಂಭವಿಸಿದರೆ ಕಾರ್ಯಕ್ರಮದ ಆಯೋಜಕರೇ ಸಂಪೂರ್ಣ ಹೊಣೆಗಾರರು ಎಂದು ತಿಳಿಸಿದೆ. ಸರ್ಕಾರ ವಿಧಿಸಿರುವ ನಿಬಂಧನೆಗಳು ಶಿವಮೊಗ್ಗದಲ್ಲಿ ದಸರಾ ಜಂಬೂಸವಾರಿ ನಡೆಯುತ್ತದೆಯೇ ಎಂದು ಪ್ರಶ್ನೆ ಹುಟ್ಟುಹಾಕಿದೆ.

ಸರಿಯಾಗಿ ನೋಡಿಕೊಳ್ಳದ ಪಾಲಿಕೆ: ಆರೋಪ

ಈಗ ಸಕ್ರೆಬೈಲಿನಿಂದ ಆನೆಗಳನ್ನು ಕರೆತಂದರೂ ಅವುಗಳಿಗೆ ತಾಲೀಮು ನೀಡಲು ಸಾಧ್ಯವಿಲ್ಲ. ಪೂರ್ವಭಾವಿ ತಯಾರಿ ಮಾಡಿಕೊಳ್ಳಬೇಕಾದ ಮಾವುತ, ಕಾವಾಡಿಗಳು ಗೊಂದಲ್ಲಿದ್ದಾರೆ. ಉತ್ಸವದಲ್ಲಿ ಏನಾದರು ಯಡವಟ್ಟುಗಳಾದರೆ ಅದರ ಹೊಣೆ ಹೊರುವವರು ಯಾರು ಎಂಬ ಪ್ರಶ್ನೆ ಮೂಡಿದೆ. ಪಾಲಿಕೆ ಅಧಿಕಾರಿಗಳಿಗೆ ಮತ್ತು ಪಾಲಿಕೆ ಸದಸ್ಯರಿಗೆ ದಸರಾ ಹಬ್ಬಕ್ಕೆ ಮೆರುಗು ನೀಡಬೇಕು ಎಂಬ ಮನಸ್ಸಿದ್ದಿದ್ದರೆ ಸಕ್ರೆಬೈಲಿನ ಆನೆಗಳು ಪುರಪ್ರವೇಶ ಪಡೆದು ವಾರವೇ ಕಳೆದಿರುತ್ತಿತ್ತು. ಇಚ್ಛಾಶಕ್ತಿಯ ಕೊರತೆ ಗೊಂದಲ ಸೃಷ್ಟಿಸಿದೆ.

‘ಆನೆ, ಮಾವುತ, ಕಾವಾಡಿಗಳನ್ನು ಸರಿಯಾಗಿ ನೋಡಿಕೊಳ್ಳದಿರುವ ಬಗ್ಗೆ ಸಾಕಷ್ಟು ದೂರುಗಳು ಹಿಂದೆ ಕೇಳಿಬಂದಿದ್ದವು. ಆನೆಗಳಿಗೆ ಮೇವು ಹಾಕದೆ, ಸಿಬ್ಬಂದಿಗೆ ವಸತಿ, ಊಟ ವ್ಯವಸ್ಥೆ ಕಲ್ಪಿಸದೆ ತಾತ್ಸಾರ ಮನೋಭಾವ ತಾಳಿತ್ತು’ ಎಂದು ಹೆಸರು ಹೇಳಲಿಚ್ಚಿಸದ ಪಾಲಿಕೆ ಸದಸ್ಯರೊಬ್ಬರು ಮಾಹಿತಿ ನೀಡಿದರು.

ದಸರಾಗೆ ಸಕ್ರೆಬೈಲಿನಿಂದ ಎರಡು ಆನೆಗಳನ್ನು ನೀಡುವಂತೆ ಸರ್ಕಾರ ಸೂಚನೆ ನೀಡಿದೆ. ಸಾಗರ ಹಾಗೂ ಭಾನುಮತಿ ಆನೆಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದೆ. ಎ.ಎಂ.ನಾಗರಾಜ್‌, ಉ‍ಪ ಅರಣ್ಯ ಸಂರಕ್ಷಣಾಧಿಕಾರಿ ವನ್ಯಜೀವಿ ವಿಭಾಗ, ಶಿವಮೊಗ್ಗ

ಈ ಬಾರಿ ದಸರಾದಲ್ಲಿ ಎರಡು ಆನೆಗಳನ್ನು ಕಳುಹಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ. ದಸರಾಗೆ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಅಲ್ಲಿಂದ ಎಷ್ಟು ಅನುದಾನ ಬರಲಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ.

ಸುನಿತಾ ಅಣ್ಣಪ್ಪ, ಮೇಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT