ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಾಶ್ರಿತರಿಗೆ ಸವಲತ್ತುಗಳೇ ಮರೀಚಿಕೆ

ತ್ಯಾವರೆಕೊಪ್ಪ ನಿರಾಶ್ರಿತ ಪರಿಹಾರ ಕೇಂದ್ರ ಅವ್ಯವಸ್ಥೆಯ ಆಗರ
Published 3 ನವೆಂಬರ್ 2023, 4:53 IST
Last Updated 3 ನವೆಂಬರ್ 2023, 4:53 IST
ಅಕ್ಷರ ಗಾತ್ರ

ಶಿವಮೊಗ್ಗ:‌ ನಿರಾಶ್ರಿತರಿಗೆ ಆಶ್ರಯ ಒದಗಿಸಿ ಅವರಿಗೆ ನೆಮ್ಮದಿಯ ಬದುಕು ಕಲ್ಪಿಸಬೇಕಾದ ಇಲ್ಲಿನ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ನಿರ್ಗತಿಕರ ಬದುಕು ಅಕ್ಷರಶಃ ಕಾರಾಗೃಹದ ಬಂಧನವಾಗಿದೆ.

ತಾಲ್ಲೂಕಿನ ಪುರದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತ್ಯಾವರೆಕೊಪ್ಪದ ಬೆಂಗಳೂರು ಕೇಂದ್ರ ಪರಿಹಾರ ಸಮಿತಿಯ ‘ನಿರಾಶ್ರಿತ ಪರಿಹಾರ ಕೇಂದ್ರ’ಕ್ಕೆ ‘ಪ್ರಜಾವಾಣಿ’ ಗುರುವಾರ ಭೇಟಿ ನೀಡಿದಾಗ ಕಂಡು ಬಂದ ನೋಟವಿದು.

ಪರಿಹಾರ ಕೇಂದ್ರವು ಸುಮಾರು 38.28 ಎಕರೆ ವಿಸ್ತೀರ್ಣದಲ್ಲಿದೆ. ವಿವಿಧೆಡೆಯಿಂದ ಕರೆತಂದ 230 ನಿರಾಶ್ರಿತರು ಈ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ, ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ ಎಂಬ ಅಳಲು ಅವರೊಂದಿಗೆ ಮಾತಾಡಿದಾಗ ವ್ಯಕ್ತವಾಯಿತು.

ಪರಿಹಾರ ಕೇಂದ್ರದಲ್ಲಿನ ನಿರಾಶ್ರಿತರಿಗೆ ಮನರಂಜನೆಗೆ ಬೃಹತ್ ರಂಗಮಂದಿರ, ವ್ಯಾಯಾಮಕ್ಕೆ ಉಪಕರಣ ಒಳಗೊಂಡಂತೆ ಎಲ್ಲ ಮೂಲ ಸೌಕರ್ಯಗಳನ್ನು ಸರ್ಕಾರ ಕಲ್ಪಿಸಿದೆ. ಆದರೆ, ಆಶ್ರಿತರಿಗೆ ಈ ಯಾವುದೇ ಸೌಕರ್ಯ ಕೈಗೆಟುಕುತ್ತಿಲ್ಲ.

ಮಹಿಳಾ ನಿರಾಶ್ರಿತ ಕೇಂದ್ರ ತೆರೆದು 5 ವರ್ಷ ಆಗಿದೆ. ಆದರೂ, ಅಲ್ಲಿ ಅವರಿಗೆ ಆಶ್ರಯವಿಲ್ಲ. ನಿರ್ಜನ ಪ್ರದೇಶದಲ್ಲಿರುವ ಈ ಕೇಂದ್ರದೊಳಗೆ ಸ್ಮಶಾನ ಮೌನ. ಸುತ್ತಲೂ ನೆಡುತೋಪು. ಆದರೆ, ನೆಡುತೋಪಿನ ದಾಹ ನೀಗಿಸಲು ನೀರಿಲ್ಲ. ಕೇಂದ್ರದಲ್ಲಿ 9 ಕೊಳವೆ ಬಾವಿಗಳಿವೆ. ಅದರಲ್ಲಿ 3 ಕೊಳವೆ ಬಾವಿಗಳಿಂದ ಮಾತ್ರ ನೀರು ಪೂರೈಸಲಾಗುತ್ತಿದೆ. ಆದರೂ, ನಿರ್ವಹಣೆ ಇಲ್ಲದೆ ಗಿಡಮರಗಳು ಒಣಗುತ್ತಿವೆ.

ನಿರಾಶ್ರಿತರಿಗೆ ಸ್ವಾವಲಂಬಿ ಬದುಕು ಕಲ್ಪಿಸಲು ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಕುರಿ ಸಾಕಾಣಿಕೆ, ತೆಂಗಿನನಾರಿನ ವಸ್ತುಗಳ ತಯಾರಿಕೆ, ಹೊಲಿಗೆ ತರಬೇತಿ, ಗೃಹೋಪಯೋಗಿ ವಸ್ತುಗಳ ತಯಾರಿಕೆಯಲ್ಲಿ ತೊಡಗಿಕೊಳ್ಳುವಂತೆ ಉತ್ತೇಜನ ನೀಡಬೇಕು. ಆದರೆ, ಕೇಂದ್ರದ ಆವರಣದಲ್ಲಿ ಅಂತಹ ಯಾವುದೇ ಸವಲತ್ತು ಲಭ್ಯವಿಲ್ಲ.

ತರಬೇತಿ ನಿರತ ಅಥವಾ ಕೆಲಸ ನಿರ್ವಹಿಸುವ ಆಶ್ರಿತರಿಗೆ ದಿನದ 8 ಗಂಟೆ ಅವಧಿಗೆ ₹75ರಂತೆ ಹಾಗೂ 8 ಗಂಟೆಗಳಿಗಿಂತ ಕಡಿಮೆ ಅವಧಿಗೆ ದಿನವೊಂದಕ್ಕೆ ₹38ರಂತೆ ತರಬೇತಿ ಭತ್ಯೆ ನೀಡಬೇಕು. ಆದರೆ, ಆಶ್ರಿತರ ಹೆಸರಿನಲ್ಲಿ ಬ್ಯಾಂಕ್ ಖಾತೆ ಕೂಡ ತೆರೆದಿಲ್ಲ. ಕೇಂದ್ರದಲ್ಲಿ ಶೇ 30ಕ್ಕೂ ಹೆಚ್ಚು ಜನ ಅಕ್ಷರಸ್ಥ ಆಶ್ರಿತರಿದ್ದಾರೆ. ಸಾಕ್ಷರತಾ ಕಾರ್ಯಕ್ರಮದಡಿ ಅಕ್ಷರ ಕಲಿಕೆ ಹಾಗೂ ಅಕ್ಷರಸ್ಥ ಆಶ್ರಿತರಿಗೆ ಗ್ರಂಥಾಲಯ ಕಲ್ಪಿಸಬೇಕು. ಈ ಯೋಜನೆ ಇಲ್ಲಿ ಕನಸಾಗಿದೆ. 

‘ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವ ಆಶ್ರಿತರಿಗೆ ಊಟದೊಂದಿಗೆ ವಾರದಲ್ಲಿ ಮೂರು ದಿನ ಮೊಟ್ಟೆ, ಮೂರು ದಿನ ಬಾಳೆ ಹಣ್ಣು ವಿತರಿಸಲಾಗುತ್ತಿದೆ. ಕೇಂದ್ರದಲ್ಲಿ ಬೆಳೆ ಬೆಳೆಯಲು ಸಾಕಷ್ಟು ಜಾಗವಿದೆ. ಆದರೆ, ನೀರಿನ ಸಮಸ್ಯೆ ಹೆಚ್ಚಿದೆ’ ಎಂದು ಕೇಂದ್ರದ ಸಿಬ್ಬಂದಿಯೊಬ್ಬರು ತಿಳಿಸಿದರು.

ಶಿವಮೊಗ್ಗ ತಾಲ್ಲೂಕಿನ ತ್ಯಾವಕೊಪ್ಪದ ನಿರಾಶ್ರಿತ ಪರಿಹಾರ ಕೇಂದ್ರದ ಹಳೆಯ ಕಟ್ಟಡ
ಶಿವಮೊಗ್ಗ ತಾಲ್ಲೂಕಿನ ತ್ಯಾವಕೊಪ್ಪದ ನಿರಾಶ್ರಿತ ಪರಿಹಾರ ಕೇಂದ್ರದ ಹಳೆಯ ಕಟ್ಟಡ
ಶಿವಮೊಗ್ಗ ತಾಲ್ಲೂಕಿನ ತ್ಯಾವಕೊಪ್ಪದ ನಿರಾಶ್ರಿತ ಪರಿಹಾರ ಕೇಂದ್ರದಲ್ಲಿ ಉಪಯೋಗವಾಗದ ವ್ಯಾಯಾಮ ಉಪಕರಣ
ಶಿವಮೊಗ್ಗ ತಾಲ್ಲೂಕಿನ ತ್ಯಾವಕೊಪ್ಪದ ನಿರಾಶ್ರಿತ ಪರಿಹಾರ ಕೇಂದ್ರದಲ್ಲಿ ಉಪಯೋಗವಾಗದ ವ್ಯಾಯಾಮ ಉಪಕರಣ

ಬಂಗಾರಪ್ಪ ಫೌಂಡೇಶನ್: ಪಾದರಕ್ಷೆ ಟಿವಿ ಕೊಡುಗೆ

ಅಕ್ಟೋಬರ್ 26ರಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ತಮ್ಮ ತಂದೆಯ ಜನ್ಮದಿನವನ್ನು ತ್ಯಾವರೆಕೊಪ್ಪದ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಆಚರಿಸಿದರು. ಈ ವೇಳೆ ಕೇಂದ್ರಕ್ಕೆ ಎಸ್.ಬಂಗಾರಪ್ಪ ಫೌಂಡೇಶನ್ ಹಾಗೂ ಬಂಗಾರಪ್ಪ ಅಭಿಮಾನಿ ಬಳಗದಿಂದ ₹74000 ಮೊತ್ತದ ಟಿವಿ ಹಾಗೂ 230 ಜನ ನಿರಾಶ್ರಿತರಿಗೆ ಪಾದರಕ್ಷೆಗಳನ್ನು ಕೊಡುಗೆಯಾಗಿ ನೀಡಲಾಯಿತು ಎಂದು ಬಂಗಾರಪ್ಪ ಅಭಿಮಾನಿ ಬಳಗದ ಸದಸ್ಯ ಜಿ.ಡಿ.ಮಂಜುನಾಥ್ ತಿಳಿಸಿದರು.

ಎಚ್ಐವಿ ಪೀಡಿತಗೆ ಬಂಧನದ ಶಿಕ್ಷೆ

ಕೇಂದ್ರಲ್ಲಿ ಆಶ್ರಯ ಪಡೆದಿರುವ ವ್ಯಕ್ತಿಯೊಬ್ಬರಿಗೆ ಎಚ್ಐವಿ ಸೋಂಕು ದೃಢಪಟ್ಟಿದೆ. ವೈದ್ಯಕೀಯ ಸಿಬ್ಬಂದಿ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ವ್ಯಕ್ತಿಯನ್ನು ಕೊಠಡಿಯಲ್ಲಿ ಇರಿಸದೆ ಮಹಡಿ ಏರುವ ಮಟ್ಟಿಲಿನ ಕೆಳ ಜಾಗದಲ್ಲಿ ಕಬ್ಬಿಣದ ಜಾಲರಿಯಲ್ಲಿ ಕೂಡಿ ಹಾಕಲಾಗಿದೆ. ದಿನಕ್ಕೆ ಕೆಲ ಗಂಟೆ ಮಾತ್ರ ಸೋಂಕಿತ ವ್ಯಕ್ತಿಯನ್ನು ಹೊರಬಿಡುವ ವ್ಯವಸ್ಥೆ ಇಲ್ಲಿದೆ. ಕೇಂದ್ರದಲ್ಲಿ ಆಶ್ರಯ ಪಡೆದಿರುವ ಹಲವರಿಗೆ ಕಜ್ಜಿ ತುರಿಕೆಯಂತಹ ಚರ್ಮರೋಗ ಕಾಣಿಸಿಕೊಂಡಿದೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರನ್ನು ಊಟ ವಸತಿಯೊಂದಿಗೆ ಪ್ರತ್ಯೇಕವಾಗಿಡಲಾಗಿದೆ. ನಿರಾಶ್ರಿತ ಕೇಂದ್ರ ಜೈಲಿದ್ದಂತೆ: ಕೆ.ಅನಿಲ್ ‘ಮಹಿಳಾ ನಿರಾಶ್ರಿತರ ಕೇಂದ್ರ ತೆರೆಯಲು ಮಹಿಳಾ ಸಿಬ್ಬಂದಿ ಕೊರತೆ ಇದೆ. ಕೇಂದ್ರದಲ್ಲಿ ಯಾವುದೇ ಸಮಸ್ಯೆ ಇಲ್ಲ. ನಿರಾಶ್ರಿತರಿಗೆ ಸರ್ಕಾರದ ಎಲ್ಲಾ ಸವಲತ್ತು ಸಿಗುತ್ತಿವೆ’ ಎಂದು ನಿರಾಶ್ರಿತ ಪರಿಹಾರ ಜಿಲ್ಲಾ ಕೇಂದ್ರದ ಅಧೀಕ್ಷಕ ಕೆ.ಅನಿಲ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ನಿರಾಶ್ರಿತರಿಗೆ ಮನೋರಂಜನಾ ಕಾರ್ಯಕ್ರಮಕ್ಕೆ ಉತ್ತೇಜನ ನೀಡಬೇಕು ಎಂದು ಸರ್ಕಾರದ ಆದೇಶವಿದೆ. ಆದರೆ ಇಲ್ಲಿ ಅದು ನಡೆಯುತ್ತಿಲ್ಲ. ಇದು ಜೈಲಿನ ವ್ಯವಸ್ಥೆಯ’ ಎಂದು ಕೇಳಿದ ಪ್ರಶ್ನೆಗೆ ‘ಹೌದು ನಿರಾಶ್ರಿತ ಕೇಂದ್ರ ಜೈಲಿದ್ದಂತೆ’ ಎಂದ ಅವರು ‘ಕೇಂದ್ರದಲ್ಲಿ ಹಲವರಿಗೆ ಕಜ್ಜಿ ತುರಿಕೆ ಕಾಣಿಸಿಕೊಂಡಿತ್ತು. ಇದು ಅಂಟು ರೋಗವೆಂದು ಭಾವಿಸಿ ಅವರ ಬಟ್ಟೆಗಳನ್ನು ಸುಟ್ಟು ಹಾಕಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT