ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳು ನನ್ನ ಮಾತು ಕೇಳುತ್ತಿಲ್ಲ: ಬಿಜೆ‍ಪಿ ಶಾಸಕ ಅಶೋಕ ನಾಯ್ಕ ಅಳಲು

ಬಿಜೆ‍ಪಿ ಶಾಸಕ ಅಶೋಕ ನಾಯ್ಕ ಅಳಲು
Last Updated 7 ಅಕ್ಟೋಬರ್ 2022, 7:04 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಕ್ಷೇತ್ರದ 74 ದಾಖಲೆ ರಹಿತ ಗ್ರಾಮಗಳ ಜನರಿಗೆ ನಿವೇಶನಗಳ ಹಕ್ಕುಪತ್ರ ಕೊಡಲು ಸರ್ಕಾರ ಸೂಚಿಸಿದ್ದರೂ ಅಧಿಕಾರಿಗಳು ಆ ಕೆಲಸ ಮಾಡುತ್ತಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳು ನನ್ನ ಮಾತನ್ನೇ ಕೇಳುತ್ತಿಲ್ಲ’ ಎಂದು ಶಿವಮೊಗ್ಗ ಗ್ರಾಮೀಣ ಶಾಸಕ ಕೆ.ಬಿ. ಅಶೋಕ ನಾಯ್ಕ ಅಲವತ್ತುಕೊಂಡರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಂದಾಯ ಗ್ರಾಮಗಳಲ್ಲದ ಕಡೆ ವಾಸಿಸುತ್ತಿರುವವರಿಗೆ ಹಕ್ಕುಪತ್ರ ವಿತರಣೆ ಮಾಡಬೇಕು ಎಂಬ ಸ್ಪಷ್ಟ ಸೂಚನೆ ಕಂದಾಯ ಸಚಿವರು ವರ್ಷದ ಹಿಂದೆಯೇ ನೀಡಿದ್ದಾರೆ. ಆದರೂ ಅದ್ಯಾಕೊ ಗೊತ್ತಿಲ್ಲ ಈ ವಿಚಾರದಲ್ಲಿ ಪ್ರಗತಿ ಶೂನ್ಯವಾಗಿದೆ. ಬಡವರಿಗೆ ಸಹಕಾರ ಮಾಡಬೇಕು ಎಂಬ ಮನೋಭಾವ ಅಧಿಕಾರಿಗಳಿಗೆ ಮರೆತು ಹೋದಂತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅಧಿಕಾರಿಗಳಿಗೆ ಎಷ್ಟು ಸಾರಿ ಹೇಳಬೇಕೊ ಅಷ್ಟು ಸಾರಿಯೂ ಹೇಳಿದ್ದೇನೆ. ಹಲವು ಬಾರಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್ ಸಭೆ ನಡೆಸಿದ್ದೇನೆ. ಆದರೂ ಅಧಿಕಾರಿಗಳು ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹಾಗೆಂದ ತಕ್ಷಣ ಅವರ ಮೇಲೆ ಸರ್ಕಾರದ ಹಿಡಿತ ಇಲ್ಲ ಎಂದರ್ಥವಲ್ಲ. ಅಧಿಕಾರಿಗಳು ಜಿಡ್ಡು ಹಿಡಿದಿದ್ದಾರೆ’ ಎಂದರು.

ಕ್ಷೇತ್ರದ ವ್ಯಾಪ್ತಿಯ ಎಲ್ಲ ಅರ್ಹರಿಗೂ ನಿವೇಶನದ ಹಕ್ಕುಪತ್ರ ಕೊಡಲು ಜಿಲ್ಲಾಡಳಿತಕ್ಕೆ ಒಂದು ತಿಂಗಳ ಗಡುವು ನೀಡುವೆ. ಆ ನಂತರವೂ ಕೆಲಸ ಆಗದಿದ್ದರೆ ಆ ಬಗ್ಗೆ ಕಂದಾಯ ಸಚಿವರಿಗೆ ದೂರು ನೀಡುವೆ. ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡುವೆ ಎಂದು ತಿಳಿಸಿದರು.

‘ನನ್ನ ಜನರಿಗೆ ನ್ಯಾಯ ಕೊಡಬೇಕು. ಅತಿ ತುರ್ತಾಗಿ ಹಾಗೂ ಕ್ಷಿಪ್ರವಾಗಿ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಈ ಕಾರ್ಯ ಮಾಡಿ, ಅಂತಿಮವಾಗಿ ಕೆಲಸ ಆಗಬೇಕು. ನಾನು ಯಾರ ವಿರುದ್ಧ, ಯಾರ ಪರ ಮಾತಾಡುತ್ತಿದ್ದೇನೆ ಎಂಬುದು ಮುಖ್ಯವಲ್ಲ. ನಾನು ನನ್ನ ಜನರಿಗೆ ನ್ಯಾಯ ಕೊಡಿಸಬೇಕು‘ ಎಂದು ಹೇಳಿದ ಅಶೋಕ ನಾಯ್ಕ, ‘ಅಧಿಕಾರಿಗಳು ಇಂದು ಇರುತ್ತಾರೆ, ನಾಳೆ ಹೋಗುತ್ತಾರೆ. ನನ್ನ ಜನರಿಗೆ ನ್ಯಾಯ ಕೊಡುವುದು ಯಾವಾಗ’ ಎಂದು ಪ್ರಶ್ನಿಸಿದರು.

ಕಂದಾಯ ಮಜಿರೆ, ಬೇಜಾರ್, ದಾಖಲೆರಹಿತ ಗ್ರಾಮಗಳಿಗೆ ಇಲ್ಲಿಯವರೆಗೂ ಯಾವುದೇ ಸವಲತ್ತು ಕಲ್ಪಿಸಲು ಸಾಧ್ಯವಾಗಿಲ್ಲ. ಕಳೆದ ಅಧಿವೇಶನದಲ್ಲಿ ಈ ಬಗ್ಗೆ ದನಿ ಎತ್ತಿದ್ದೆ. ಎಲ್ಲ ಗ್ರಾಮಗಳಲ್ಲೂ ಜನರು ಬೀದಿಗೆ ಬಂದಿದ್ದಾರೆ. ಅವರಿಗೆ ಸೂರು, ಹಕ್ಕುಪತ್ರ ಕೊಡುವ ಕೆಲಸ ಸರ್ಕಾರ ಕೂಡಲೇ ಮಾಡಬೇಕು ಎಂದು ಆಗ್ರಹಿಸಿದರು.

ಈ ವಿಚಾರದಲ್ಲಿ ಪಕ್ಕದ ಜಿಲ್ಲೆಗಳಲ್ಲಿ ಎಲ್ಲರಿಗೂ ನ್ಯಾಯ ಕೊಡುವ ಕೆಲಸ ಶರವೇಗದಿಂದ ಆಗುತ್ತಿದೆ. ಯಾಕೆ ನಮ್ಮ ಜಿಲ್ಲೆಯ ಅಧಿಕಾರಿಗಳಿಗೆ ಜಡತ್ವ ಆವರಿಸಿದೆ ಗೊತ್ತಾಗುತ್ತಿಲ್ಲ. ಕಾರಣಗಳು, ನೆಪಗಳು ಅಧಿಕಾರಿಗಳಿಂದ ನಮಗೆ ಬೇಕಿಲ್ಲ. ಸರ್ಕಾರದ ವಿವಿಧ ವಸತಿ ಯೋಜನೆಗಳಡಿ ಮನೆಗಳು ಬಂದರೂ ಫಲಾನುಭವಿಗಳಿಗೆ ಕೊಡಲು ಆಗುತ್ತಿಲ್ಲ. ನಿವೇಶನ ಅವರ ಹೆಸರಲ್ಲಿ ಇಲ್ಲದಿದ್ದರೆ ಆಕಾಶದಲ್ಲಿ ಮನೆ ಕಟ್ಟಿಕೊಡಲು ಆಗೊಲ್ಲ. 94 ‘ಡಿ’ ಹಾಗೂ ‘ಸಿ’ ಅಡಿ ನಿವೇಶನ ರಹಿತ ಫಲಾನುಭವಿಗಳಿಗೆ ಹಕ್ಕುಪತ್ರ ಕೊಡುವ ಕೆಲಸ ತಕ್ಷಣ ಆಗಬೇಕು ಎಂದುಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT