ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ| ಕುಕ್ಕರ್, ದೋಸೆ ತವಾ, ಅಕ್ಕಿ, ಸೀರೆ, ಬಟ್ಟೆ ವಶಕ್ಕೆ ಪಡೆದ ಪೊಲೀಸರು

ವಿಧಾನಸಭೆ ಚುನಾವಣೆ ಹಿನ್ನೆಲೆ: ಪೊಲೀಸರ ನಾಕಾಬಂದಿ
Last Updated 25 ಮಾರ್ಚ್ 2023, 5:45 IST
ಅಕ್ಷರ ಗಾತ್ರ

ಶಿವಮೊಗ್ಗ: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಪೊಲೀಸ್‌ ಇಲಾಖೆ ನಾಕಾಬಂದಿ(ಚೆಕ್ ಪೋಸ್ಟ್) ತೆರೆದು ವಾಹನಗಳ ತಪಾಸಣೆ ಆರಂಭಿಸಿದೆ. ಈ ವೇಳೆ ಸೂಕ್ತ ದಾಖಲೆಗಳಿಲ್ಲದೇ ಸಾಗಾಟ ಮಾಡುತ್ತಿದ್ದ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಯುಗಾದಿ ಹಬ್ಬದ ದಿನವೇ ಈ ಕಾರ್ಯಾಚರಣೆ ನಡೆದಿದ್ದು, ಪೊಲೀಸರು ವಶಪಡಿಸಿಕೊಂಡ ವಸ್ತುಗಳಲ್ಲಿ ಇಡ್ಲಿ ಕುಕ್ಕರ್, ದೋಸೆ ತವಾ, ಸೀರೆ, ಬಟ್ಟೆ ಸೇರಿವೆ.

ದೋಸೆ ತವಾ: ಆಗುಂಬೆ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಮಾರ್ಚ್ 22ರಂದು ಸೂಕ್ತ ದಾಖಲೆಗಳಿಲ್ಲದೇ ಲಾರಿಯಲ್ಲಿ ಸಾಗಿಸುತ್ತಿದ್ದ ₹ 2.97 ಲಕ್ಷ ಮೌಲ್ಯದ ಒಟ್ಟು 1,100 ನಾನ್ ಸ್ಟಿಕ್ ದೋಸಾ ತವಾ ವಶಪಡಿಸಿಕೊಳ್ಳಲಾಗಿದೆ.

ಅದೇ ದಿನ ಶಿವಮೊಗ್ಗದ ವಿನೋಬನಗರ ‍ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ಲಾರಿಯಲ್ಲಿ ಸಾಗಿಸುತ್ತಿದ್ದ ₹ 8 ಲಕ್ಷ ಅಂದಾಜು ಮೌಲ್ಯದ 30 ಟನ್ ಬೇಳೆ, ರವೆ, ಗೋಧಿ ಮತ್ತು ಇತರೆ ಆಹಾರ ಸಾಮಗ್ರಿಗಳು ತುಂಬಿದ್ದ 1,000 ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾರ್ಚ್‌ 22ರಂದು ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ಲಾರಿಯಲ್ಲಿ ಸಾಗಿಸುತ್ತಿದ್ದ ಅಂದಾಜು ₹ 7 ಲಕ್ಷ ಮೌಲ್ಯದ ಅಕ್ಕಿ ತುಂಬಿದ್ದ 404 ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅದೇ ದಿನ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ಸಂಗ್ರಹಿಸಿಟ್ಟಿದ್ದ ₹ 10 ಲಕ್ಷ ಮೌಲ್ಯದ ಬಟ್ಟೆ, ಸೀರೆ, ಇಡ್ಲಿ ಕುಕ್ಕರ್ ವಶಪಡಿಸಿಕೊಳ್ಳಲಾಗಿದೆ.

ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿರುವ ಅಬಕಾರಿ ಪೊಲೀಸರು ಮಾರ್ಚ್ 22ರಂದು ₹ 17,507 ಮೌಲ್ಯದ ಒಟ್ಟು 25 ಲೀಟರ್ 608 ಮಿಲಿ ಅಕ್ರಮ ಮದ್ಯ ವಶಪಡಿಸಿಕೊಂಡು ಆರೋಪಿತರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯಡಿ ಒಟ್ಟು 8 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಏಳು ಕಡೆ ಪೊಲೀಸ್ ಚೆಕ್‌ಪೋಸ್ಟ್: ಎಸ್ಪಿ

ಶಿವಮೊಗ್ಗ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಿಂದ ಏಳು ಚೆಕ್‌ಪೋಸ್ಟ್ ಹಾಕಿದ್ದೇವೆ. ಅರಣ್ಯ ಹಾಗೂ ಅಬಕಾರಿ ಇಲಾಖೆಯವರು ಪ್ರತ್ಯೇಕ ಚೆಕ್‌ಪೋಸ್ಟ್ ಹಾಕಿ ತಪಾಸಣೆ ಕೈಗೊಂಡಿದ್ದಾರೆ.

ವಶಪಡಿಸಿಕೊಂಡ ವಸ್ತುಗಳನ್ನು ಸಂಬಂಧಿಸಿದ ಇಲಾಖೆಗಳ ವಶಕ್ಕೆ ನೀಡಲಾಗಿದೆ. ಅವುಗಳ ವಾರಸುದಾರರು ಯಾರು ಎಂಬುದರ ಬಗ್ಗೆ ಪರಿಶೀಲನೆ ಹಾಗೂ ದಂಡ ವಿಧಿಸುವ, ಪ್ರಕರಣ ದಾಖಲಿಸುವ ಕಾರ್ಯ ಅವರು ಮಾಡಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ‘ಪ್ರಜಾವಾಣಿ‘ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT