ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಂಕ ಮೂಡಿಸುವ ಕಬ್ಬು ಸಾಗಣೆ ವಾಹನಗಳು

ಹರಿಹರ: ದುರಂತ ನಡೆಯುವ ಮುನ್ನ ಎಚ್ಚರಿಕೆ ವಹಿಸಲು ನಾಗರಿಕರ ಆಗ್ರಹ
Last Updated 2 ಡಿಸೆಂಬರ್ 2022, 4:52 IST
ಅಕ್ಷರ ಗಾತ್ರ

ಹರಿಹರ: ‘ಕಬ್ಬನ್ನು ಸಂಪೂರ್ಣ ಲೋಡ್ ಮಾಡಿದ ಲಾರಿ, ಟ್ರ್ಯಾಕ್ಟರ್‌ಗಳು ನಗರದ ರಸ್ತೆಗಳಲ್ಲಿ ಸಾಗುತ್ತಿದ್ದರೆ, ಅಕ್ಕ–ಪಕ್ಕದಲ್ಲಿ ಸಂಚರಿಸುವ ಇತರ ವಾಹನ ಸವಾರರು, ಪಾದಚಾರಿಗಳ ಎದೆ ಢವ, ಢವ ಎಂದು ಬಡಿದುಕೊಳ್ಳುತ್ತದೆ...’

ನಗರದ ಆಟೊ ಚಾಲಕ ಸುನೀಲ್ ಪಿ.ಜೆ. ಹೇಳುವ ಮಾತಿದು.

ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿರುವ ವಿವಿಧ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸಲು ನಗರದ ಮೂಲಕ ಸಂಚರಿಸುವ ನೂರಾರು, ಲಾರಿ ಮತ್ತು ಟ್ರ್ಯಾಕ್ಟರ್‌ಗಳು ಇಲ್ಲಿನ ವಾಹನ ಸವಾರರು ಹಾಗೂ ಪಾದಚಾರಿಗಳಲ್ಲಿ ಆತಂಕ ಮೂಡಿಸಿವೆ.

ಹಾವೇರಿ ಜಿಲ್ಲೆಯಿಂದ ಕಬ್ಬು ಲೋಡ್ ಮಾಡಿದ ಲಾರಿಗಳು ಮತ್ತು ಟ್ರ್ಯಾಕ್ಟರ್‌ಗಳು ನಗರದೊಳಗೆ ಬೀರೂರು– ಸಮ್ಮಸಗಿ ಹೆದ್ದಾರಿ (ತುಂಗಭದ್ರಾ ಸೇತುವೆ) ಮೂಲಕ ಪ್ರವೇಶಿಸುತ್ತವೆ. ನಂತರ ಗಾಂಧಿ ವೃತ್ತದ ಮೂಲಕ ಹರಪನಹಳ್ಳಿ ಕಡೆಗೆ ಹೊಸಪೇಟೆ– ಶಿವಮೊಗ್ಗ ಹೆದ್ದಾರಿಯಲ್ಲಿ ಸಾಗುತ್ತವೆ.

ನಗರ ವ್ಯಾಪ್ತಿಯಲ್ಲಿ ಒಟ್ಟು ನಾಲ್ಕು ಕಿ.ಮೀ. ಸಾಗುವ ಈ ವಾಹನಗಳು ನಿಗದಿಗಿಂತ ಹೆಚ್ಚಿನ ಭಾರ ಹಾಗೂ ಹೆಚ್ಚಿನ ಗಾತ್ರದಲ್ಲಿ ಲೋಡ್ ಮಾಡಿಕೊಂಡು ಸಾಗುತ್ತಿರುವುದರಿಂದ ಜನತೆ ಆತಂಕ ಪಡುವಂತಾಗಿದೆ.

ಅತಿಯಾದ ಭಾರ ಹಾಗೂ ಗಾತ್ರದಿಂದಾಗಿ ಈ ವಾಹನಗಳು ತೆವಳುತ್ತಾ ಸಾಗುವಾಗ ಓಲಾಡುತ್ತವೆ. ಒಂದೆಡೆ ವಾಲಿಕೊಂಡೂ ಸಾಗುತ್ತವೆ. ಈ ವಾಹನಗಳ ಹಿಂದೆ, ಮುಂದೆ ಸಂಚರಿಸುವ ಇತರ ವಾಹನ ಸವಾರರು ‘ಎಲ್ಲಿ ನಮ್ಮ ವಾಹನದ ಮೇಲೆ ಕಬ್ಬಿನ ಲೋಡ್‌ ಬೀಳುತ್ತದೋ’ ಎಂಬ ಆತಂಕದಲ್ಲೇ ಸಾಗುತ್ತಾರೆ.

ಬೆಳಿಗ್ಗೆ ಮತ್ತು ಸಂಜೆ ಶಾಲೆಗಳು ಆರಂಭವಾಗುವ ಹಾಗೂ ಬಿಡುವ ಸಮಯದಲ್ಲಿ ನಗರದೊಳಗೆ ಶಾಲಾ ವಿದ್ಯಾರ್ಥಿಗಳನ್ನು ಸಾಗಿಸುವ ಆಟೊ, ಓಮಿನಿಗಳ ಸಂಚಾರ ಅಧಿಕವಾಗಿರುತ್ತವೆ. ಆ ಸಮಯದಲ್ಲಿ ಕಬ್ಬು ಸಾಗಣೆ ವಾಹನಗಳ ಸಂಚಾರ ವೂ ಅಧಿಕವಾಗಿರುತ್ತದೆ. ಅಕಸ್ಮಾತ್ ಅಪಘಾತ ನಡೆದರೆ ದೊಡ್ಡ ದುರಂತ ಸಂಭವಿಸುತ್ತದೆ.

ಕಬ್ಬು ಸಾಗಣೆ ಸಾಮಾನ್ಯವಾಗಿ ಆರು ಚಕ್ರದ ಲಾರಿ ಹಾಗೂ ಎರಡು ಟ್ರ್ಯಾಲಿ ಜೋಡಿಸಿದ ಟ್ರ್ಯಾಕ್ಟರ್‌ಗಳಲ್ಲಿ ನಡೆಯುತ್ತಿದೆ. ಆರು ಚಕ್ರದ ಲಾರಿಯಲ್ಲಿ ನಿಯಮದ ಪ್ರಕಾರ ಗರಿಷ್ಠ 12 ಟನ್ ಲೋಡ್ ಸಾಗಣೆ ಮಾಡಬಹುದು. ಆದರೆ, ಈ ಲಾರಿಗಳಲ್ಲಿ ಅಂದಾಜು 16ರಿಂದ 20 ಟನ್ ಭಾರದ ಕಬ್ಬನ್ನು ಸಾಗಿಸಲಾಗುತ್ತಿದೆ. ಇನ್ನು 4 ಟನ್ ಸಾಮರ್ಥ್ಯದ ಟ್ರ್ಯಾಕ್ಟರ್‌ಗಳಲ್ಲಿ 10ರಿಂದ 12 ಟನ್ ಕಬ್ಬನ್ನು ಸಾಗಿಸಲಾಗುತ್ತಿದೆ.

ಸಕ್ಕರೆ ಕಾರ್ಖಾನೆಗಳ ಜೊತೆಗೆ ಸಾಗಣೆ ಒಪ್ಪಂದ ಮಾಡಿಕೊಳ್ಳುವ ಸಾಗಣೆದಾರರು ಲಾರಿ, ಟ್ರ್ಯಾಕ್ಟರ್‌ಗಳಲ್ಲಿ ನಿಯಮ ಮೀರಿ ಸಾಗಣೆ ಮಾಡುತ್ತಿದ್ದಾರೆ. ಹೆಚ್ಚೂ ಕಡಿಮೆ 10 ಲೋಡ್‌ನಲ್ಲಿ ಸಾಗಿಸಬೇಕಾದ ಕಬ್ಬನ್ನು 5ರಿಂದ 6 ಲೋಡ್‌ಗಳಲ್ಲೆ ಸಾಗಣೆ ಮಾಡುತ್ತಿದ್ದಾರೆ.

ಅಪಾಯ ಬೇರೆ ವಾಹನ ಸವಾರರಿಗಷ್ಟೇ ಅಲ್ಲ, ಇಂತಹ ವಾಹನ ಚಾಲನೆ ಮಾಡುವವರ ಜೀವವೂ ಅಪಾಯದಲ್ಲಿರುತ್ತದೆ. ಮಳೆಯಿಂದಾಗಿ ಹೆದ್ದಾರಿಗಳಲ್ಲಿ ಹೆಜ್ಜೆಗೊಂದು ಗುಂಡಿ, ಹಂಪ್‌ಗಳನ್ನು ದಾಟುವಾಗ ಇತರರ ಜೊತೆಗೆ ತಮ್ಮ ಪ್ರಾಣವನ್ನೂ ಕೈಯಲ್ಲಿ ಹಿಡಿದು ಸಾಗುವ ದುಸ್ಥಿತಿಗೆ ಈ ವಾಹನ ಸವಾರರು ಒಳಗಾಗುತ್ತಾರೆ. ಆರ್‌ಟಿಒ, ಪೊಲೀಸ್ ಸೇರಿದಂತೆ ಜಿಲ್ಲಾಡಳಿತ ಈ ಸಮಸ್ಯೆ ನಿವಾರಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಟ್ರ್ಯಾಲಿಗೆ ಸಿಲುಕಿ ಬಾಲಕ ಸಾವು

ಕಬ್ಬು ಸಾಗಣೆಯ ಡಬಲ್ ಟ್ರ್ಯಾಲಿ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ 12 ವರ್ಷದ ಬಾಲಕನೊಬ್ಬ ಎರಡು ವರ್ಷಗಳ ಹಿಂದೆ ನಗರದ ನಾಡಬಂದ್ ಶಾವಲಿ ದರ್ಗಾ ಸಮೀಪ ಮೃತಪಟ್ಟಿದ್ದ. ಇತ್ತೀಚೆಗಷ್ಟೇ (ನ. 22) ನಗರದ ಹೊರವಲಯದ ತುಂಗಭದ್ರಾ ಸೇತುವೆ ಬಳಿ ಕಬ್ಬು ಸಾಗಣೆಯ ಲಾರಿ ಹಾಗೂ ಟ್ರ್ಯಾಕ್ಟರ್‌ ಒಂದೇ ಸ್ಥಳದಲ್ಲಿ ಉರುಳಿ ಬಿದ್ದಿದ್ದವು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚಾಲಕರಿಗೆ ಸಣ್ಣ, ಪುಟ್ಟ ಗಾಯಗಳಾಗಿದ್ದವು.

ತಿಂಗಳ ಹಿಂದೆ ಜಿಲ್ಲಾಧಿಕಾರಿಯೊಂದಿಗೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಭೇಟಿ ನೀಡಿ., ಓವರ್ ಲೋಡ್ ನಿಯಂತ್ರಿಸುವಂತೆ ಆಡಳಿತ ಮಂಡಳಿ ಯವರಿಗೆ ಹಾಗೂ ಕಬ್ಬು ಸಾಗಣೆ ವಾಹನಗಳ ಚಾಲಕರಿಗೆ ತಿಳವಳಿಕೆ ನೀಡಿದ್ದೇವೆ. ಈಗ ಮತ್ತೊಮ್ಮೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತೇವೆ.

ಶ್ರೀಧರ್ ಮಲ್ಲಾಳ್, ಪ್ರಾದೇಶಿಕ ಸಾರಿಗೆ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT