ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಮುಲ್‌ ಅಧ್ಯಕ್ಷ ಆನಂದ್‌ ಪದಚ್ಯುತಿ- ಅವಿಶ್ವಾಸದ ಪರ ಮತ ಚಲಾಯಿಸಿದ ನಿರ್ದೇಶಕರು

ಅವಿಶ್ವಾಸದ ಪರ ಮತ ಚಲಾಯಿಸಿದ ಎಲ್ಲ 13 ನಿರ್ದೇಶಕರು
Last Updated 23 ಅಕ್ಟೋಬರ್ 2021, 6:49 IST
ಅಕ್ಷರ ಗಾತ್ರ

ಶಿವಮೊಗ್ಗ: ಶಿಮುಲ್‌ ಅಧ್ಯಕ್ಷರ ವಿರುದ್ಧ ಶುಕ್ರವಾರ ನಡೆದ ಅವಿಶ್ವಾಸ ಗೊತ್ತುವಳಿಯಲ್ಲಿ ಅಧ್ಯಕ್ಷ ಡಿ.ಆನಂದ್‌ಗೆ ಸೋಲಾಗಿದೆ. ಅಧ್ಯಕ್ಷರ ಚುನಾವಣೆ ನಡೆಯುವವರೆಗೆ ಉಪಾಧ್ಯಕ್ಷರೇ ಅಧ್ಯಕ್ಷರ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಒಕ್ಕೂಟ (ಶಿಮುಲ್‌) ಆಡಳಿತ ಸಭಾಂಗಣದಲ್ಲಿ ಅವಿಶ್ವಾಸ ಸಭೆ ನಡೆಯಿತು. 14 ನಿರ್ದೇಶಕರಲ್ಲಿ 13 ಮಂದಿ ಸಭೆಯಲ್ಲಿ ಭಾಗವಹಿಸಿದ್ದರು. ಎಲ್ಲಾ ನಿರ್ದೇಶಕರು ಶಿಮುಲ್ ಅಧ್ಯಕ್ಷ ಆನಂದ್ ವಿರುದ್ಧ ಮತ ಚಲಾಯಿಸಿದರು. ಆನಂದ್ ಸಭೆಗೆ ಹಾಜರಾಗಿರಲಿಲ್ಲ.

ಸಹಕಾರ ಸಂಘಗಳ ಉಪನಿಬಂಧಕ ನಾಗೇಶ್ ಎಸ್.ಡೋಂಗ್ರೆ ಅವರು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಶಿಮುಲ್ ವ್ಯವಸ್ಥಾಪಕ ನಿರ್ದೇಶಕ ಬಸವರಾಜು ಇದ್ದರು.

ಶಿಮುಲ್‌ನಲ್ಲಿ ಮುಂದೇನು?:ಅಧ್ಯಕ್ಷರ ಪದಚ್ಯುತಿಯ ಕಾರಣ ಆಡಳಿತಾತ್ಮಕ ದೃಷ್ಟಿಯಿಂದ ಶಿಮುಲ್ ಉಪಾಧ್ಯಕ್ಷರೇ ಅಧ್ಯಕ್ಷರ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಶಿಮುಲ್ ಉಪಾಧ್ಯಕ್ಷ ಎಚ್.ಕೆ. ಬಸಪ್ಪ ಅವರು ಪ್ರಭಾರ ಅಧ್ಯಕ್ಷರಾಗಿ ಮುಂದುವರಿಯುವರು. ನೂತನ ಅಧ್ಯಕ್ಷರಿಗಾಗಿ ಚುನಾವಣೆಗೆ ಸಹಕಾರ ಇಲಾಖೆ ಶೀಘ್ರ ಚುನಾವಣಾ ದಿನಾಂಕ ಪ್ರಕಟಿಸಲಿದೆ.

ಅಧ್ಯಕ್ಷರ ವಿರುದ್ಧ ಕೆಲವು ತಿಂಗಳ ಹಿಂದೆಯೇ ಅವಿಶ್ವಾಸ ಮಂಡಿಸಲು ಸಿದ್ಧತೆ ನಡೆದಿತ್ತು. ಆದರೆ, ಕೊರೊನಾ ಸಮಯದಲ್ಲಿ ಯಾವುದೇ ಸಹಕಾರ ಸಂಘ, ಸಂಸ್ಥೆಗಳ ಚುನಾವಣೆ ನಡೆಸದಂತೆ ಸರ್ಕಾರದ ಆದೇಶ ಇದ್ದ ಪರಿಣಾಮ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಆನಂದ್ ನಿರಾಕರಿಸಿದ್ದರು.

ಹಾಗಾಗಿ 14 ನಿರ್ದೇಶಕರಲ್ಲಿ 10 ನಿರ್ದೇಶಕರು ಆನಂದ್ ವಿರುದ್ಧ ಅವಿಶ್ವಾಸ ಮಂಡನೆಗೆ ಪಟ್ಟು ಹಿಡಿದಿದ್ದರು. ಜೂನ್ ತಿಂಗಳಲ್ಲಿ ನೋಟಿಸ್ ನೀಡಿದ್ದರು. ಜೂನ್ 15ರಂದು ಸಭೆ ನಿಗದಿಯಾಗಿತ್ತು. ಆದರೆ, ತಡೆಯಾಜ್ಞೆ ಕೋರಿ ಆನಂದ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್‌ ತಡೆಯಾಜ್ಞೆ ನೀಡಿತ್ತು.

ತಡೆಯಾಜ್ಞೆ ಅವಧಿ ಮುಗಿದ ನಂತರ ಆನಂದ್ ಅವರು ಹೈಕೋರ್ಟ್‌ನಲ್ಲಿ ಮತ್ತೆ ಅರ್ಜಿ ಸಲ್ಲಿಸಿದ್ದರು. ಆಗ ಕೋರ್ಟ್‌ ವಜಾಗೊಳಿಸಿತ್ತು. ಹಾಗಾಗಿ ದ್ವಿಸದಸ್ಯ ಪೀಠಕ್ಕೆ ಆನಂದ್ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯೂ ವಜಾಗೊಂಡಿತ್ತು. ಇದರಿಂದ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸಭೆ ನಿಗದಿಯಾಗಿತ್ತು.

‘ಕೋರ್ಟ್‌ಗೆ ಹೋಗಿದ್ದುಅವಿಶ್ವಾಸದ ವಿರುದ್ಧವಲ್ಲ’

‘ಕೊರೊನಾ ಕಾರಣಡಿಸೆಂಬರ್‌ವರೆಗೆ ಯಾವುದೇ ಸಹಕಾರ ಸಂಘಗಳ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಸದಂತೆ ಸರ್ಕಾರ ಆದೇಶಿಸಿತ್ತು. ಇಂತಹ ಸಮಯದಲ್ಲಿ ಅವಿಶ್ವಾಸ ಮಂಡನೆಗೆ ಅವಕಾಶ ನೀಡುವುದು ಸರಿಯಲ್ಲ. ಒಂದು ವೇಳೆ ಅಧ್ಯಕ್ಷರ ಪದಚ್ಯುತಿಯಾದರೆ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಲು ಸಾಧ್ಯವಿಲ್ಲ. ಅಧ್ಯಕ್ಷರಿಲ್ಲದ ಇದ್ದರೆ ಆಡಳಿತಾತ್ಮಕ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಕೋರ್ಟ್‌ಗೆ ಹೋಗಿದ್ದೆ’ ಎಂದು ಶಿಮುಲ್‌ ಪದಚ್ಯುತ ಅಧ್ಯಕ್ಷ ಡಿ.ಆನಂದ್‌ ಹೇಳಿದರು.

‘ಸಹಕಾರ ಸಂಘ ಕಾಯ್ದೆ ಅನ್ವಯ ಶಿಮುಲ್‌ ಮೂರು ಜಿಲ್ಲೆ ವ್ಯಾಪ್ತಿಗೆ ಒಳಪಡುತ್ತದೆ. ಜಂಟಿ ನಿಬಂಧಕರಿಗೆ ಕಾನೂನಾತ್ಮಕವಾಗಿ ನೋಟಿಸ್‌ ಕೊಡಲು ಅಧಿಕಾರ ಇಲ್ಲದಿದ್ದರೂ, ಅವರು ನನಗೆ ನೋಟಿಸ್‌ ಕೊಟ್ಟಿದ್ದರು. ಇದರ ವಿರುದ್ಧ ಕೋರ್ಟ್‌ಗೆ ಹೋಗಿದ್ದೆ. ಕೊರೊನಾ ಕಡಿಮೆಯಾಗಿರುವ ಕಾರಣ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಮಾಡಲು ಸರ್ಕಾರ ಘೋಷಣೆ ಮಾಡಿದೆ. ಇದರ ಪ್ರಕಾರ ಅವಿಶ್ವಾಸ ಸಭೆಯ ದಿನ ನಿಗದಿ ಮಾಡಲಾಗಿತ್ತು. ನನ್ನ ಅವಧಿಯಲ್ಲಿ ಹಾಲು ಖರೀದಿ ದರ ಹೆಚ್ಚಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗಿತ್ತು. ಕೊರೊನಾ ಸಮಯದಲ್ಲೂ ರೈತರಿಗೆ ಯಾವುದೇ ತೊಂದರೆಯಾಗದಂತೆ ಒಕ್ಕೂಟದ ಜವಾಬ್ದಾರಿ ನಿಭಾಯಿಸಿದ್ದೇನೆ. ಮುಂದೆ ಯಾರು ಅಧ್ಯಕ್ಷರಾದರೂ ರೈತರಿಗೆ ಅನುಕೂಲವಾಗುವ ರೀತಿ ಕೆಲಸ ಮಾಡಲಿ’ ಎಂದು ಆನಂದ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT