ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ಯತ್ನ: ರೌಡಿಶೀಟರ್ ಕಾಲಿಗೆ ಗುಂಡೇಟು

Published 13 ಮೇ 2024, 6:08 IST
Last Updated 13 ಮೇ 2024, 6:08 IST
ಅಕ್ಷರ ಗಾತ್ರ

ಶಿವಮೊಗ್ಗ: ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ರೌಡಿ ಶೀಟರ್ ಶೋಯಬ್ ಅಲಿಯಾಸ್ ಅಂದಾ ಎಂಬುವವನಿಗೆ ಸೋಮವಾರ ಗುಂಡು ಹೊಡೆಯಲಾಗಿದೆ.

ಇಲ್ಲಿನ ಲಷ್ಕರ್ ಮೊಹಲ್ಲಾದಲ್ಲಿ ಮೇ 8 ರಂದು ನಡೆದಿದ್ದ ಗ್ಯಾಂಗ್ ವಾರ್ ಪ್ರಕರಣದ ಪ್ರಮುಖ ಆರೋಪಿ ಶೋಯಬ್ ತಲೆಮರೆಸಿಕೊಂಡಿದ್ದನು.

ಲಷ್ಕರ್ ಮೊಹಲ್ಲಾದಲ್ಲಿ ಮಟನ್ ಶಾಪ್ ಇಟ್ಟುಕೊಂಡಿದ್ದ ಇಮ್ರಾನ್ ಖುರೇಷಿ ಹಾಗೂ ಆತನ ವಿರೋಧಿ ಆದಿಲ್‌ನ ತಂಡಗಳ ನಡುವೆ ಹಾಡುಹಗಲೇ ನಡೆದಿದ್ದ ಗ್ಯಾಂಗ್ ವಾರ್‌ನಲ್ಲಿ ಖುರೇಷಿ ಸೇರಿದಂತೆ ಮೂವರು ಸಾವಿಗೀಡಾಗಿದ್ದರು. ರೌಡಿ ಶೀಟರ್‌ಗಳ ನಡುವಿನ ಈ ಭೀಕರ ಕಾಳಗ ಶಿವಮೊಗ್ಗ ನಗರವನ್ನು ಬೆಚ್ಚಿಬೀಳಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ತಂಡಗಳ 16 ಮಂದಿಯನ್ನು ಕೋಟೆ ಠಾಣೆ ಪೊಲೀಸರು ಬಂಧಿಸಿದ್ದರು. ಆದಿಲ್ ತಂಡದಲ್ಲಿ ಗುರುತಿಕೊಂಡಿದ್ದ ಶೋಹೆಬ್ ಘಟನೆಯ ನಂತರ ತಲೆಮರೆಸಿಕೊಂಡಿದ್ದನು.

ಖಚಿತ ಮಾಹಿತಿಯ ಮೇರೆಗೆ ಗ್ರಾಮೀಣ ಠಾಣೆ ಪಿಎಸ್‌ಐ ಕುಮಾರ್ ಹಾಗೂ ಹೆಡ್ ಕಾನ್ ಸ್ಟೆಬಲ್ ಅಣ್ಣಪ್ಪ ತಾಲ್ಲೂಕಿನ ಬೀರನಕೆರೆಯ ಮನೆಯೊದರಲ್ಲಿ ಇದ್ದ ಶೋಯಬ್‌ನನ್ನು ಬಂಧಿಸಲು ಮುಂದಾಗಿದ್ದರು. ಈ ವೇಳೆ ಆರೋಪಿ ಹರಿತವಾದ ಆಯುಧದಿಂದ ಹೆಡ್ ಕಾನ್ ಸ್ಟೆಬಲ್ ಅಣ್ಣಪ್ಪ ಅವರಿಗೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಮುಂದಾಗಿದ್ದು, ಆಗ ಪಿಎಸ್‌ಐ ಕುಮಾರ್ ಆತ್ಮರಕ್ಷಣೆಗಾಗಿ ಶೋಯಬ್ ಕಾಲಿಗೆ ಗುಂಡು ಹೊಡೆದಿದ್ದಾರೆ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.

ಶೋಯಬ್ ವಿರುದ್ಧ ಎರಡು ಕೊಲೆ ಯತ್ನ ಸೇರಿದಂತೆ ಐದು ಪ್ರಕರಣ ಶಿವಮೊಗ್ಗದ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ ಎಂದು ಮಿಥುನ್ ಕುಮಾರ್ ತಿಳಿಸಿದ್ದಾರೆ.

ಗುಂಡೇಟು ತಿಂದಿರುವ ಶೋಯಬ್ ಹಾಗೂ ಹಲ್ಲೆಯಿಂದ ಗಾಯಗೊಂಡಿರುವ ಕಾನ್ ಸ್ಟೆಬಲ್ ಇಬ್ಬರನ್ನೂ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಾಯದಿಂದ ಪಾರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT