ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ನಗರದ ರಸ್ತೆಗಳಲ್ಲಿ ಸಂಚಾರ ದಟ್ಟಣೆಯ ಕಿರಿಕಿರಿ

ನಿಧಾನಗತಿಯ ಸ್ಮಾರ್ಟ್‌ ಸಿಟಿ ಕಾಮಗಾರಿ, ಮುಗಿಯದ ಮಳೆಗಾಲ
Last Updated 26 ನವೆಂಬರ್ 2021, 2:37 IST
ಅಕ್ಷರ ಗಾತ್ರ

ಶಿವಮೊಗ್ಗ: ನಿಧಾನಗತಿಯ ಸ್ಮಾರ್ಟ್‌ ಸಿಟಿ ಕಾಮಗಾರಿ, ಸತತ ಮಳೆಯ ಪರಿಣಾಮ ನಗರದಲ್ಲಿ ಸುಗಮ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ.

ನಗರದಲ್ಲಿ ಅತ್ಯಂತ ಪ್ರಮುಖ ರಸ್ತೆ ಕುವೆಂಪು ರಸ್ತೆ. ಶಿವಮೊಗ್ಗ–ಸಾಗರ ಹೆದ್ದಾರಿಯ ಸರ್ಕೀಟ್‌ ಹೌಸ್‌ನಿಂದ ನೆಹರೂ ಕ್ರೀಡಾಂಗಣದವರೆಗಿನ ಈ ರಸ್ತೆ ಸದಾ ಜನನಿಬಿಡ ಪ್ರದೇಶ. ಪ್ರಮುಖ ಆಸ್ಪತ್ರೆಗಳು, ಜಿಲ್ಲಾ ಪಂಚಾಯಿತಿ ಕಚೇರಿ ಈ ಮಾರ್ಗದಲ್ಲಿವೆ. ಆಯನೂರು, ಕುಂಸಿ, ಸಾಗರ ಭಾಗದಿಂದ ಬರುವ ಜನರು ಜಿಲ್ಲಾಡಳಿತ ಭವನ, ನೆಹರೂ ಕ್ರೀಡಾಂಗಣಕ್ಕೆ ಇದೇ ಮಾರ್ಗದಲ್ಲಿ ಸಾಗುತ್ತಾರೆ. ನಂಜಪ್ಪ, ಮ್ಯಾಕ್ಸ್‌, ಸರ್ಜಿ ಮತ್ತಿತರ ಪ್ರಮುಖ ಆಸ್ಪತ್ರೆಗಳು ಇದೇ ಮಾರ್ಗದಲ್ಲಿವೆ. ಇದರಿಂದ ನಿತ್ಯವೂ ಹತ್ತಾರು ಆಂಬುಲೆನ್ಸ್‌ಗಳು ಇದೇ ರಸ್ತೆಯಲ್ಲಿ ಸಾಗುತ್ತವೆ.

ಎರಡು ವರ್ಷಗಳಿಂದ ಸ್ಮಾರ್ಟ್‌ ಸಿಟಿ ಕಾಮಗಾರಿಗಳು ನಡೆಯುತ್ತಲೇ ಇವೆ. ಇದರಿಂದ ಮಾರ್ಗದಲ್ಲಿ ಸಂಚರಿಸುವ ವಾಹನಗಳು, ಪಾದಚಾರಿಗಳು ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದಾರೆ. ಒತ್ತುವರಿಯಾದ ಮನೆಗಳು, ಫುಟ್‌ಪಾತ್‌ಗಳನ್ನು ತೆರವುಗೊಳಿಸದೆ ಚರಂಡಿ ನಿರ್ಮಾಣ, ಭೂಗತ ವಿದ್ಯುತ್ ಕೇಬಲ್‌ ಅಳವಡಿಸುತ್ತಿರುವ ಕಾರಣ ರಸ್ತೆ ಕಿರಿದಾಗಿದೆ. ಯುಜಿಡಿ ಮತ್ತಿತರ ಕಾರಣಗಳಿಗೆ ರಸ್ತೆ ಮಧ್ಯೆಯೇ ಗುಂಡಿಗಳನ್ನು ಅಗೆದಿದ್ದಾರೆ. ಇಂತಹ ಸ್ಥಳಗಳಲ್ಲಿ ವಾಹನಗಳು ಸರಾಗವಾಗಿ ಸಾಗದೆ ಪರದಾಡುವಂತಾಗಿದೆ.

ಯೂನಿಟಿ ಆಸ್ಪತ್ರೆ, ಜೈಲು ವೃತ್ತ, ನಂಜಪ್ಪ ಆಸ್ಪತ್ರೆ, ಜಿಲ್ಲಾ ಪಂಚಾಯಿತಿ ಮುಂಭಾಗಗಳಲ್ಲಿ ಪದೇ ಪದೇ ರಸ್ತೆ ಅಗೆದು ಗುಂಡಿಗಳನ್ನು ಹಾಗೆಯೇ ಬಿಡಲಾಗಿದೆ. ಇದರಿಂದ ಬೈಕ್‌ ಸವಾರರು ಅತಿಹೆಚ್ಚು ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಇದೇ ರಸ್ತೆಯ ಕೆಲವು ಭಾಗಗಳಲ್ಲಿ ರಸ್ತೆಯ ಎರಡೂ ಬದಿ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಇದೂ ಸಹ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ.

ಸದಾ ಗಿಜಿಗುಡುವ ದುರ್ಗಿಗುಡಿ ರಸ್ತೆ, ಬಸ್‌ನಿಲ್ದಾಣ, ಜಿಲ್ಲಾ ನ್ಯಾಯಾಲಯದ ಮುಂಭಾಗ, ಬಾಲರಾಜ ಅರಸು ರಸ್ತೆ, ಆರ್‌ಟಿಒ ಕಚೇರಿ ರಸ್ತೆಗಳಲ್ಲಿ ಸಂಚಾರ ಅಸಾಧ್ಯ ಎನ್ನುವಂತಾಗಿದೆ. ಆಭರಣ ಮಳಿಗೆ ರಸ್ತೆ, ಬಿ.ಎಚ್‌. ರಸ್ತೆಯ ಶಿವಪ್ಪ ನಾಯಕ ಮೂರ್ತಿ ಬಳಿ, ಹಳೇ ತೀರ್ಥಹಳ್ಳಿ ರಸ್ತೆಗಳಲ್ಲಿ ಸಾಗಲು ಸರ್ಕಸ್‌ ಮಾಡುವ ಪರಿಸ್ಥಿತಿ ಇದೆ.

ಹಲವು ಮಾರ್ಗಗಳಲ್ಲಿ ಏಕ ಕಾಲಕ್ಕೆ ಕಾಮಗಾರಿ ನಡೆಯುತ್ತಿರುವ ಕಾರಣ ಆ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸುತ್ತವೆ. ಇದರಿಂದ ಇತರೆ ಮಾರ್ಗಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಕಾಮಗಾರಿ ಕೈಗೊಳ್ಳುವ ಗುತ್ತಿಗೆದಾರರು, ಎಂಜಿನಿಯರ್‌ಗಳು ಬದಲಿ ಮಾರ್ಗಗಳ ಕುರಿತು ಸೂಕ್ತ ಮಾರ್ಗದರ್ಶನ ನೀಡದ ಕಾರಣ ಕಿರಿದಾದ ರಸ್ತೆಗಳಲ್ಲಿ ಸಿಲುಕಿ ವಾಹನಗಳು ಪರಿತಪಿಸುವಂತಾಗಿದೆ.

ನೀರು ತುಂಬಿದ ಗುಂಡಿಗಳಲ್ಲಿ ಚಕ್ರಗಳು:

ಸ್ಮಾರ್ಟ್‌ ಸಿಟಿ ಕಾಮಗಾರಿಗಾಗಿ ಎಲ್ಲೆಂದರಲ್ಲಿ ಗುಂಡಿಗಳನ್ನು ಅಗೆಯಲಾಗಿದೆ. ಮಳೆ ನೀರು ತುಂಬಿ ಗುಂಡಿಗಳು ಕಾಣುವುದೇ ಇಲ್ಲ. ವಾಹನಗಳು ಗುಂಡಿಗೆ ಇಳಿದಾಗ ಪಕ್ಕದಲ್ಲೇ ಸಾಗುವ ಪಾದಚಾರಿಗಳ ಮೇಲೆ ಎರಗುವುದು ಸಹಜ ಎನ್ನುವಂತಾಗಿದೆ. ದ್ವಿಚಕ್ರ ವಾಹನಗಳಂತೂ ಗುಂಡಿಗಳಿಗೆ ಬಿದ್ದು ಸಾಕಷ್ಟು ಅಪಘಾತವಾಗುತ್ತಿವೆ. ಹಲವರು ಗಾಯಗೊಂಡಿದ್ದಾರೆ.

ಹಲವು ಭಾಗಗಳಲ್ಲಿ ರಸ್ತೆ ಅಗೆಯುವ ಫಲಕ ಅಳವಡಿಸಿಲ್ಲ. ಇದರಿಂದ ವಾಹನಗಳು ಒಂದು ಮಾರ್ಗದಲ್ಲಿ ಬಹುದೂರ ಸಾಗಿದ ನಂತರ ರಸ್ತೆ ಅಗೆದಿರುವುದು ಕಂಡು ಬರುತ್ತದೆ. ವಾಪಸ್‌ ಅದೇ ಮಾರ್ಗದಲ್ಲಿ ಬರುವಾಗ ದಟ್ಟಣೆಯಲ್ಲಿ ಸಿಲುಕುತ್ತವೆ. ಇಲ್ಲವೇ ಎರಡು ವಾಹನಗಳು ಸಾಗಲು ಸಾಧ್ಯವಾಗದೇ ಸಿಲುಕುತ್ತವೆ. ಇದರಿಂದ ಸಂಚಾರ ಸಾಕಷ್ಟು ವಿಳಂಬವಾಗುತ್ತಿದೆ.

ಅರ್ಧ ದಿನ ಮಳೆ ನಿಂತರೆ ದೂಳುಮಯ:ನಿರಂತರವಾಗಿ ಬರುವ ಮಳೆ ಅರ್ಧ ದಿನ ನಿಂತರೂ ಸಾಕು ರಸ್ತೆಗಳು ದೂಳುಮಯವಾಗುತ್ತವೆ. ಪಾದಚಾರಿಗಳು, ಶಾಲಾ ಮಕ್ಕಳು,
ಬೈಕ್‌ ಸವಾರರು ದೂಳಿನಲ್ಲಿ ಮುಳುಗುತ್ತಾರೆ. ರಸ್ತೆ ಬದಿಯ ಅಂಗಡಿ, ಫುಟ್‌ಪಾತ್ ವ್ಯಾಪಾರಿಗಳು ದೂಳಿನ ಕಾರಣ ವ್ಯಾಪಾರ, ವಹಿವಾಟು ನಡೆಸುವುದು ದುಸ್ತರವಾಗಿದೆ. ತಿಂಡಿ, ತಿನಿಸುಗಳು, ಸಾಮಗ್ರಿಗಳು ಹಾಳಾಗುತ್ತಿವೆ.

***

ಕುವೆಂಪು ರಸ್ತೆಯಲ್ಲಿ ಜನರು ಓಡಾಡುವುದೇ ಕಷ್ಟವಾಗಿದೆ. ಮಕ್ಕಳು, ನೌಕರರು ಈ ಮಾರ್ಗದಲ್ಲಿ ವಾಹನ ಚಲಾಯಿಸಿಕೊಂಡು ಹೋಗಲು ಕಷ್ಟಪಡಬೇಕಿದೆ. ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಬೇಕು. ಗುಂಡಿ ತೆಗೆದ ಜಾಗದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು.

ಕೆ. ರಂಗನಾಥ್, ಮುಖಂಡರು, ಶರಾವತಿನಗರ – ಹೊಸಮನೆ

ಕೆಲವು ತಿಂಗಳು ಈ ಸಮಸ್ಯೆ ಇರುತ್ತದೆ. ಬಹುತೇಕ ಕಾಮಗಾರಿಗಳು ತ್ವರಿತವಾಗಿ ನಡೆದಿವೆ. ಸತತ ಮಳೆಯ ಪರಿಣಾಮ ಕೆಲವು ಭಾಗಗಳಲ್ಲಿ ವಿಳಂಬವಾಗಿದೆ. ಜನರು ಸಹಕಾರ ನೀಡಬೇಕು.

ಚಿದಾನಂದ ವಟಾರೆ, ವ್ಯವಸ್ಥಾಪಕ ನಿರ್ದೇಶಕರು, ಶಿವಮೊಗ್ಗ ಸ್ಮಾರ್ಟ್‌ ಸಿಟಿ ಲಿಮಿಟೆಡ್‌

ಕಾಮಗಾರಿ ವಿಳಂಬದ ಕಾರಣ ಸಾಕಷ್ಟು ತೊಂದರೆಯಾಗುತ್ತಿದೆ. ಹಣ್ಣುಗಳು ದೂಳು ಹಿಡಿದು ಹಾಳಾಗುತ್ತಿವೆ. ಸಂಚಾರ ದಟ್ಟಣೆ ಪರಿಣಾಮ ಅಪಘಾತಗಳು ಸಹಜ ಎನ್ನುವಂತಾಗಿದೆ.

ರಫೀಕ್‌, ಹಣ್ಣಿನ ವ್ಯಾಪಾರಿ, ಕುವೆಂಪು ರಸ್ತೆ

ಕಾಮಗಾರಿಗಳ ಕಾರಣ ಸಂಚಾರ ದಟ್ಟಣೆ ಅಧಿಕವಾಗಿದೆ. ಶೀಘ್ರ ಕಾಮಗಾರಿ ಮುಗಿಸಿದರೆ ಎಲ್ಲರಿಗೂ ಅನುಕೂಲ.

ಶಂಕರ ನಾಯ್ಕ, ನಾಗರಿಕ

ತಡವಾಗಿ ಬರುವ ಶಾಲಾ ವಾಹನಗಳು

ಸಂಚಾರ ದಟ್ಟಣೆ, ಸುಗಮ ಸಂಚಾರಕ್ಕೆ ಇರುವ ಅಡೆತಡೆಯ ಪರಿಣಾಮ ಶಾಲಾ ವಾಹನಗಳಿಗೆ ನಿತ್ಯವೂ ತಡವಾಗುತ್ತಿವೆ. ಶಾಲೆಗಳಿಗೆ ಮಕ್ಕಳು ತಡವಾಗಿ ಹೋಗುತ್ತಿದ್ದಾರೆ. ಸಂಜೆ ಶಾಲೆ ಬಿಟ್ಟ ನಂತರ ಮಕ್ಕಳು ಮನೆ ತಲುಪಲು ನಿಗದಿತ ಅವಧಿಗಿಂತ ಅರ್ಧ ಗಂಟೆಗೂ ಹೆಚ್ಚು ಸಮಯ ಹಿಡಿಯುತ್ತಿದೆ. ಮಕ್ಕಳನ್ನು ಬಿಡಲು ಬರುವ ಪೋಷಕರು ಬಸ್‌ಗಾಗಿ ನಿಗದಿತ ನಿಲ್ದಾಣಗಳಲ್ಲಿ ಕಾಯುವಾಗ ಇತರೆ ವಾಹನಗಳು ಎರಚುವ ಕೆಸರಿನಿಂದ ಹೈರಾಣಾಗುತ್ತಿದ್ದಾರೆ. ಶಾಲಾ ಮಕ್ಕಳನ್ನು ಕರೆದೊಯ್ಯುವ ಆಟೊರಿಕ್ಷಾಗಳು ಅಪಘಾತಕ್ಕೆ ಒಳಗಾಗುತ್ತಿವೆ.

ನ್ಯಾಯಾಲಯದ ಎದುರೇ ಅಪಘಾತ

ಎರಡು ದಿನಗಳ ಹಿಂದೆ ಜಿಲ್ಲಾ ನ್ಯಾಯಾಲಯದ ಮುಂಭಾಗ ಸರಕು ಸಾಗಣೆ ವಾಹನಕ್ಕೆ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಬಸ್‌ನ ಒಳಗಿನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸರಕು ಸಾಗಣೆ ಆಟೊ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ಡಿಕ್ಕಿ ಹೊಡೆದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಸ್ತೆಯ ಗುಂಡಿಗಳನ್ನು ತಪ್ಪಿಸಲು ಹೋಗಿ ನಿತ್ಯವೂ ಇಂತಹ ಅಪಘಾತಗಳು ನಡೆಯುತ್ತಲೇ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT