ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗಡಿಗಳು ಬಂದ್‌; ಮದುವೆ ತಯಾರಿಗೆ ಸಮಸ್ಯೆ

ವಾರಾಂತ್ಯ ಕರ್ಫ್ಯೂಗೆ ಶಿವಮೊಗ್ಗದಲ್ಲಿ ಉತ್ತಮ ಸ್ಪಂದನೆ; ವಾಹನ ಸವಾರರಿಗೆ ಪೊಲೀಸರ ಎಚ್ಚರಿಕೆ
Last Updated 26 ಏಪ್ರಿಲ್ 2021, 6:06 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂಗೆ ಭಾನುವಾರ ಉತ್ತಮ ಸ್ಪಂದನೆ ದೊರಕಿದ್ದು, ನಗರ ಸಂಪೂರ್ಣವಾಗಿ ಬಂದ್ ಆಗಿತ್ತು. ಜನ, ವಾಹನ ಸಂಚಾರ ಇಲ್ಲದೇ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಅನವಶ್ಯಕವಾಗಿ ತಿರುಗಾಡುತ್ತಿದ್ದ ವಾಹನ ಸವಾರರಿಗೆ ಅಲ್ಲಲ್ಲಿ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದರು.

ತರಾತುರಿಯಲ್ಲಿ ಮುಂಜಾನೆ ಬಾಗಿಲು ತೆರೆದ ಅಂಗಡಿ ಮಾಲೀಕರು 10ಗಂಟೆಗೂ ಮೊದಲೇ ಬಾಗಿಲು ಮುಚ್ಚಿದರು. ಆಭರಣ, ಬಟ್ಟೆ ಅಂಗಡಿಗಳು ಬಾಗಿಲು ಹಾಕಿದ್ದರಿಂದ ಮದುವೆ ತಯಾರಿಗೆ ತೊಂದರಯಾಗಿದೆ. ಮದುವೆಗಳಿಗೆ ಸಿದ್ಧತೆ ನಡೆಸಿದ್ದವರು, ಜವಳಿ ಮತ್ತು ಆಭರಣ ಅಂಗಡಿಗಳಿಗೆ ತೆರಳುವವರು ವಸ್ತುಗಳನ್ನು ಖರೀದಿಸಲಾಗದೆ ಪರದಾಡಿದರು.

ಔಷಧ ಅಂಗಡಿಗಳು, ಆಸ್ಪತ್ರೆಗಳು, ಕ್ಲಿನಿಕ್‌ಗಳು, ಪೆಟ್ರೋಲ್ ಬಂಕ್‌ಗಳನ್ನು ಹೊರತುಪಡಿಸಿ, ದಿನಸಿ ಅಂಗಡಿಗಳು, ತರಕಾರಿ, ಹಾಲು, ಹಣ್ಣಿನ ಅಂಗಡಿಗಳನ್ನೂ 10 ಗಂಟೆಯ ನಂತರ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಈ ಹಿಂದೆ ಲಾಕ್‌ಡೌನ್ ಸಮಯದಲ್ಲಿ ದಿನಸಿ ಅಂಗಡಿಗಳು, ತರಕಾರಿ, ಹಾಲು, ಹಣ್ಣಿನ ಅಂಗಡಿಗಳು ದಿನಪೂರ್ತಿ ತೆರೆದಿರುತ್ತಿದ್ದವು. ಪಟ್ಟಣದಲ್ಲಿ ಬೆಳಿಗ್ಗೆ 10ಗಂಟೆವರೆಗೂ ಅಗತ್ಯ ಸೇವೆಗಳಿಗೆ ಅವಕಾಶ ನೀಡಿದ್ದ ಪೊಲೀಸರು, ಬಳಿಕ ರಸ್ತೆಗೆ ಇಳಿದು ತೆರೆದಿದ್ದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದರು. ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ರಸ್ತೆಗಳು ಜನ, ವಾಹನ ಸಂಚಾರ ಇಲ್ಲದೇ ಬಿಕೋ ಎನ್ನುತ್ತಿದ್ದವು.

ಪೊಲೀಸ್ ಬಿಗಿ ಬಂದೋಬಸ್ತ್: ವಾರಾಂತ್ಯ ಕರ್ಫ್ಯೂವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸುವಲ್ಲಿ ಎರಡನೇ ದಿನ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ನಗರದೆಲ್ಲೆಡೆ ಪೊಲೀಸ್ ಬಂದೋಬಸ್ತ್ ಕಂಡು ಬಂತು. ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಅಲ್ಲಲ್ಲಿ ಓಡಾಡುತ್ತಿದ್ದವರನ್ನು ತಡೆದು ಪರಿಶೀಲಿಸಿ ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದರು. ಕೆಲವರಿಗೆ ದಂಡದ ಬಿಸಿ ಮುಟ್ಟಿಸಿದರು.

ರಸ್ತೆಗಿಳಿಯದ ಬಸ್‌ಗಳು: ಮುಷ್ಕರವನ್ನು ಕೈ ಬಿಟ್ಟು ಹೈಕೋರ್ಟ್ ಸೂಚನೆ ಮೇರೆಗೆ ಸಾರಿಗೆ ಇಲಾಖೆಯ ಸಿಬ್ಬಂದಿ ಪುನಃ ಕರ್ತವ್ಯಕ್ಕೆ ಮರಳಿದರೂ ಕರ್ಫ್ಯೂ ಪರಿಣಾಮವಾಗಿ ಪ್ರಯಾಣಿಕರಿಗೆ ಬರ ಎದುರಾಗಿರುವ ಕಾರಣದಿಂದ ಬಸ್‌ಗಳು ಸಂಚಾರ ಮಾಡಲಿಲ್ಲ. ಅಪರೂಪಕ್ಕೆ ಒಂದೆರೆಡು ಖಾಲಿಯಾಗಿ ಸಂಚರಿಸುತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT