ಶಿಕಾರಿಪುರ: ಶ್ರಾವಣ ಮಾಸದ ಮೂರನೇ ಶನಿವಾರ ಪ್ರಯುಕ್ತ ಇತಿಹಾಸ ಪ್ರಸಿದ್ಧ ಪಟ್ಟಣದ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದು ಸಾವಿರಾರು ಭಕ್ತರು ದೇವರ ದರ್ಶನ ಪಡೆದರು.
ರಾಜ್ಯದಲ್ಲಿರುವ ಹಲವು ಆಂಜನೇಯ ದೇವಸ್ಥಾನಗಳಲ್ಲಿ ಪಟ್ಟಣದ ಹುಚ್ಚರಾಯಸ್ವಾಮಿ ದೇವಸ್ಥಾನ ಹೆಚ್ಚು ಪ್ರಖ್ಯಾತಿ ಪಡೆದಿದೆ.
ಹಾವೇರಿ ಜಿಲ್ಲೆ ಬ್ಯಾಡಗಿ ಸಮೀಪದ ಕದರಮಂಡಗಿ ಕಾಂತೇಶ, ಚಿಕ್ಕೇರೂರು ಸಮೀಪದ ಸಾತೇನಹಳ್ಳಿ ಶಾಂತೇಶ ಹಾಗೂ ಶಿಕಾರಿಪುರದಲ್ಲಿರುವ ಭ್ರಾಂತೇಶ ಈ ಮೂರು ಆಂಜನೇಯ ದೇವರ ದೇವಸ್ಥಾನಗಳಿಗೆ ಅಧಿಕಮಾಸ ಹಾಗೂ ಶ್ರಾವಣ ಮಾಸದ ದಿನಗಳಲ್ಲಿ ಒಂದೇ ದಿನ (ಶನಿವಾರ) ಭೇಟಿ ನೀಡಿ ದೇವರ ದರ್ಶನ ಪಡೆದು ಪೂಜೆ ಸಲ್ಲಿದರೆ ಪುಣ್ಯ ಲಭಿಸುತ್ತದೆ ಹಾಗೂ ತಾವು ಅಂದು ಕೊಂಡ ಕಾರ್ಯಗಳು ಸುಗಮವಾಗಿ ಸಾಗುತ್ತವೆ ಎಂಬ ನಂಬಿಕೆಯನ್ನು ಭಕ್ತ ಸಮೂಹ ಹೊಂದಿದೆ.
ನಂಬಿಕೆಯಂತೆ ರಾಜ್ಯದ ಹಾವೇರಿ, ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳ ಭಕ್ತರು ಪಟ್ಟಣದ ಹುಚ್ಚರಾಯಸ್ವಾಮಿ ದೇವರ ದೇವಸ್ಥಾನಕ್ಕೆ ಆಗಮಿಸಿದ್ದರು. ಜಿಟಿ ಜಿಟಿ ಸುರಿವ ಮಳೆಯ ಮಧ್ಯೆ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಅಧಿಕಮಾಸದ ಪ್ರಯುಕ್ತ ಹುಚ್ಚರಾಯಸ್ವಾಮಿ ದೇವರ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ದೇವಸ್ಥಾನಕ್ಕೆ ಬಂದಿದ್ದ ಭಕ್ತರಿಗೆ ಭ್ರಾಂತೇಶ್ ಸೇವಾ ಸಂಸ್ಥೆ ಅನ್ನಸಂತರ್ಪಣೆ ಆಯೋಜಿಸಿತ್ತು.
ಶಿಕಾರಿಪುರದ ಹುಚ್ಚರಾಯಸ್ವಾಮಿ ದೇವರ ದೇವಸ್ಥಾನದಲ್ಲಿ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು