ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಮುಲ್‌ ಅಧ್ಯಕ್ಷರಾಗಿ ಶ್ರೀಪಾದರಾವ್ ಅವಿರೋಧ ಆಯ್ಕೆ

Last Updated 1 ಜನವರಿ 2022, 15:16 IST
ಅಕ್ಷರ ಗಾತ್ರ

ಶಿವಮೊಗ್ಗ: ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಹಾಲು ಉತ್ಪಾದಕರ ಸಹಕಾರ ಸಂಘದ (ಶಿಮುಲ್‌) ಅಧ್ಯಕ್ಷರಾಗಿ ಸೊರಬ ತಾಲ್ಲೂಕು ನಿಸರಾಣಿಯ ಬಿಜೆಪಿ ಮುಖಂಡ ಎಚ್‌.ಎನ್‌.ಶ್ರೀಪಾದರಾವ್ ಶನಿವಾರ ಅವಿರೋಧವಾಗಿ ಆಯ್ಕೆಯಾದರು.

ಆಮೂಲಕ ತಮ್ಮ ಬೆಂಬಲಿಗರಿಗೆ ಶಿಮುಲ್‌ ಅಧಿಕಾರ ಪಡೆಯುವಲ್ಲಿ ಬಿಜೆಪಿ ಕೊನೆಗೂ ಯಶಸ್ವಿಯಾಯಿತು. ಅಧ್ಯಕ್ಷ ಸ್ಥಾನದ ಮತ್ತೊಬ್ಬ ಆಕಾಂಕ್ಷಿ ಹಿರಿಯೂರಿನ ತಿಪ್ಪೇಸ್ವಾಮಿ ಚುನಾವಣೆಯ ಅಂತಿಮ ಕ್ಷಣದಲ್ಲಿ ನಾಮಪತ್ರ ಹಿಂಪಡೆದ ಕಾರಣ ಚುನಾವಣಾಧಿಕಾರಿ ಶ್ರೀಪಾದರಾವ್ ಅವರ ಅವಿರೋಧ ಆಯ್ಕೆ ಪ್ರಕಟಿಸಿದರು.

ಭದ್ರಾವತಿಯ ಡಿ.ಆನಂದ್‌ ಅವರನ್ನು ಅವಿಶ್ವಾಸದ ಮೂಲಕ ಕೆಳಗಿಳಿಸಿದ ನಂತರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ನ.20ರಂದು ನಡೆಯಬೇಕಿದ್ದ ಚುನಾವಣೆ ವಿಧಾನ ಪರಿಷತ್ ಚುನಾವಣೆಯ ನೆಪದಲ್ಲಿ ಮುಂದೂಡಲ್ಪಟ್ಟಿತ್ತು. ನಾಮನಿರ್ದೇಶಿತರು, ಸಹಕಾರ ಇಲಾಖೆ ಜಂಟಿ ನಿಬಂಧಕರು ಸೇರಿ 17 ಜನರು ಮತದಾನದ ಹಕ್ಕು ಪಡೆದಿದ್ದರು.

ಬಿಜೆಪಿ ವಿರುದ್ಧ ಕಾಂಗ್ರೆಸ್‌ ಆಕ್ರೋಶ:

ಶಿಮುಲ್‌ ಅಧ್ಯಕ್ಷ ಸ್ಥಾನಕ್ಕೆ ಅಕ್ರಮವಾಗಿ ಚುನಾವಣೆ ನಡೆಸಲಾಗಿದೆ. ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಬೇಕು. ಚುನಾವಣೆ ಮುಂದೂಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಹಕಾರಿ ವಿಭಾಗದ ಅಧ್ಯಕ್ಷ ಕೆ.ಎಲ್.ಜಗದೀಶ್ವರ್ ಆಗ್ರಹಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದ ಕಾಂಗ್ರೆಸ್ ಬೆಂಬಲಿಗರಾದ ಶಿಮುಲ್ ಮಾಜಿ ಅಧ್ಯಕ್ಷ ಶಿವಶಂಕರ್, ಹಾಲಿ ಉಪಾಧ್ಯಕ್ಷ ಎಚ್.ಕೆ. ಬಸಪ್ಪ ಅವರಿಗೆ ವಿನಾಕಾರಣ ನೋಟಿಸ್ ನೀಡಿ ಚುನಾವಣೆಯ ಹಿಂದಿನ ದಿನ ಅನರ್ಹಗೊಳಿಸಲಾಗಿದೆ. ಡಿ.28ರ ರಾತ್ರಿ 9ಕ್ಕೆ ನೋಟಿಸ್ ನೀಡಿದ್ದು, ಉತ್ತರ ಕೊಡಲು ಸಮಯಾವಕಾಶ ನೀಡಿಲ್ಲ. ಡಿ.31ರಂದು ಅನರ್ಹಗೊಳಿಸಲಾಗಿದೆ. ನ್ಯಾಯಾಲಯದ ಮೊರೆ ಹೋಗಲೂ ಸಮಯಾವಕಾಶ ನೀಡಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಶ್ರೀಪಾದ ಹೆಗಡೆ ನಿಸರಾಣಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಹಠಕ್ಕೆ ಬಿದ್ದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ ಅವರು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ತದಾನದ ಹಕ್ಕನ್ನು ಕಸಿದುಕೊಂಡಿದ್ದಾರೆ. ಸಹಕಾರ ಕ್ಷೇತ್ರದಲ್ಲೂ ಬಿಜೆಪಿ ರಾಜಕಾರಣ ಮಾಡುತ್ತಿದೆ. ಸಹಕಾರ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಶಿಮುಲ್‌ನಲ್ಲೂ ಪ್ರಭಾವ ಹೆಚ್ಚಿಸಿಕೊಳ್ಳಲು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳನ್ನೇ ಅಕ್ರಮವಾಗಿ ಅನರ್ಹತೆಗೊಳಿಸುವ ಮಟ್ಟಕ್ಕೆ ಇಳಿದಿದೆ ಎಂದು ಆರೋಪಿಸಿದರು.

ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಶಿವಶಂಕರಪ್ಪ ಮಾತನಾಡಿ, ಚುನಾವಣಾಧಿಕಾರಿ ಮೇಲೆ ಬಿಜೆಪಿ ಒತ್ತಡ ಹಾಕಿ ನೋಟಿಸ್ ಉತ್ತರಕ್ಕೆ ಕಾಲವಕಾಶ ನೀಡದೆ ಅನರ್ಹಗೊಳಿಸಲಾಗಿದೆ. ಬಿಜೆಪಿ ಕೆಟ್ಟ ಕೆಲಸಕ್ಕೆ ಮುಂದಾಗಿದೆ. ಕಾನೂನು ಹೋರಾಟ ನಡೆಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಿಮುಲ್ ಉಪಾಧ್ಯಕ್ಷ ಎಚ್.ಕೆ. ಬಸಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT