ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪರಿಹಾರ ನೀಡಲು ಅಧಿಕಾರಿಗಳ ಮೀನ–ಮೇಷ

ಮಳೆಗೆ ಮನೆ ಬಿದ್ದು ಎರಡು ವರ್ಷ; ಬಾಡಿಗೆ ಮನೆಯಲ್ಲಿ ವಾಸ
ರಾಘವೇಂದ್ರ ಟಿ.
Published 12 ಜನವರಿ 2024, 6:23 IST
Last Updated 12 ಜನವರಿ 2024, 6:23 IST
ಅಕ್ಷರ ಗಾತ್ರ

ಸೊರಬ: ಎರಡು ವರ್ಷಗಳ ಹಿಂದೆ ತಾಲ್ಲೂಕಿನಲ್ಲಿ ಸುರಿದ ಭಾರಿ ಮಳೆಗೆ ಮನೆಯ ಗೋಡೆ ಕುಸಿದಿದ್ದರಿಂದ ನಿರಾಶ್ರಿತರಾಗಿರುವ ಎಣ್ಣೆಕೊಪ್ಪ ಗ್ರಾಮದ ಲಕ್ಷ್ಮಮ್ಮ ಅವರಿಗೆ ಈವರೆಗೆ ಸ್ವಂತ ಸೂರು ಲಭಿಸಿಲ್ಲ.

ಈ ಸಂಬಂಧ ಎಷ್ಟೇ ಮನವಿ ಮಾಡಿದರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಕ್ರಮ ಕೈಗೊಳ್ಳಲು ಆಸಕ್ತಿ ತಾಳಿಲ್ಲ. ವಿಶೇಷ ಚೇತನ ಪುತ್ರಿಯೊಂದಿಗೆ ಜೀವನ ನಡೆಸುತ್ತಿರುವ ಲಕ್ಷ್ಮಮ್ಮ ಅವರಿಗೆ ಮನೆ ನೀಡುವುದಾಗಿ ಸರ್ಕಾರ ನೀಡಿರುವ ಭರವಸೆಯು ಭರವಸೆಯಾಗಿಯೇ ಉಳಿದಿದೆ.

ತಾಲ್ಲೂಕಿನಾದ್ಯಂತ ಎರಡು ವರ್ಷಗಳ ಹಿಂದೆ ಭಾರಿ ಮಳೆ ಸುರಿದಿದ್ದರಿಂದ ನೂರಾರು ಮನೆಗಳು ಕುಸಿದು ಬಿದ್ದಿವೆ. ಈ ವರ್ಷ ಸುರಿದಿರುವ ಮಳೆಗೆ ವಿವಿಧ ಗ್ರಾಮಗಳಲ್ಲಿ ಅಂದಾಜು 71 ಮನೆಗಳು ಕುಸಿದ ಬಗ್ಗೆ ವರದಿಯಾಗಿತ್ತು. ಇದರಲ್ಲಿ 41 ಮನೆಗಳ ಮಾಲೀಕರಿಗೆ ಪರಿಹಾರ ನೀಡಲಾಗಿದ್ದು, ಉಳಿದ ಮನೆಗೆ ದಾಖಲೆಗಳಿಲ್ಲದ ಕಾರಣ ಪರಿಹಾರ ಪಟ್ಟಿಯಿಂದ ಕೈಬಿಡಲಾಗಿದೆ.

ಮನೆಯ ಗೋಡೆ ಮಳೆಯಿಂದ ಕುಸಿದು ಬಿದ್ದಿದ್ದರಿಂದ ನೆಲೆ ಕಳೆದುಕೊಂಡ ಎಣ್ಣೆಕೊಪ್ಪ ಗ್ರಾಮದ ಲಕ್ಷ್ಮಮ್ಮ, ಅದೇ ಗ್ರಾಮದಲ್ಲಿ ಮಾಸಿಕ ₹ 1,000 ಪಾವತಿಸಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. 

‘ನನಗೆ ಬರುವ ವೃದ್ಧಾಪ್ಯ ವೇತನ ಹಾಗೂ ವಿಶೇಷ ಚೇತನ ಮಗಳ ಮಾಸಾಶನದಲ್ಲಿ ಜೀವನ ‌ನಡೆಸುವ ನಮಗೆ ಬೇರೆ ಆದಾಯವಿಲ್ಲ. ಕೂಲಿ‌ ಮಾಡಲು ಶಕ್ತಿಯೂ ಇಲ್ಲ. ವಾಸಕ್ಕೆ ಸ್ವಂತ ಸೂರು ಇಲ್ಲದೇ ಬದುಕು ನಡೆಸುವುದೇ ದುಸ್ತರವಾಗಿದೆ. ನಮ್ಮ ಗೋಳನ್ನು ಯಾರೂ ಕೇಳುತ್ತಿಲ್ಲ’ ಎಂದು ಲಕ್ಷ್ಮಮ್ಮ ಕಣ್ಣೀರು ಸುರಿಸಿದರು.

‘ಜೋರು ಮಳೆಗೆ ಮನೆ ಬಿದ್ದು, ಕೆಲ ತಿಂಗಳು‌ ಅವರಿವರ ಮನೆಯಲ್ಲಿ ಕಾಲ ಕಳೆದೆವು. ಈಗ‌ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇವೆ. ವಯಸ್ಸಾದ ತಾಯಿಗೆ ನನ್ನನ್ನು ನೋಡಿಕೊಳ್ಳುವುದು ಕಷ್ಟವಾಗಿದೆ. ನಿರಾಶ್ರಿತರವಾಗಿರುವ ನಮಗೆ ಮನೆ ನಿರ್ಮಿಸಿಕೊಡುವಂತೆ ಸೆಪ್ಟೆಂಬರ್ ತಿಂಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ನಡೆಸಿದ ಜನತಾ ದರ್ಶನದಲ್ಲಿ ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳಿಗೂ ಅರ್ಜಿ ಸಲ್ಲಿಸಲಾಗಿದೆ. ಇದುವರೆಗೂ ಅಧಿಕಾರಿಗಳು ನಮ್ಮ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಹಲವು ಬಾರಿ ತಾಲ್ಲೂಕು ಕಚೇರಿಗೆ, ತಾಲ್ಲೂಕು ಪಂಚಾಯಿತಿಗೆ‌ ಅಲೆದಾಡಿ ಸಾಕಾಗಿದೆ’ ಎಂದು ಲಕ್ಷ್ಮಮ್ಮ ಅವರ ಪುತ್ರಿ ನೀಲಮ್ಮ ‘ಪ್ರಜಾವಾಣಿ’ ಎದುರು ಅಳಳು ತೋಡಿಕೊಂಡರು.

ಸಂಪೂರ್ಣ ಮನೆ ಕಳೆದುಕೊಂಡವರಿಗೆ ₹ 10 ಲಕ್ಷ, ಭಾಗಶಃ ಮನೆ ಹಾನಿಯಾದವರಿಗೆ ₹ 3 ಲಕ್ಷ, ಸ್ವಲ್ಪ ಹಾನಿಯಾದರೆ ₹ 50,000ದಿಂದ ₹1 ಲಕ್ಷ ನೀಡುವುದಾಗಿ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ತಹಶೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳು ಹೇಳಿದ್ದರು. ಆದರೆ, ಮನೆ ಕಳೆದುಕೊಂಡ ನನಗೆ ಈವರೆಗೂ ಯಾವ ಪರಿಹಾರದ ಹಣವೂ ಸಿಕ್ಕಿಲ್ಲ ಎಂದು ಬೂದ್ಯಪ್ಪ ಎಂಬವವರು ಅಧಿಕಾರಿಗಳನ್ನು ದೂರಿದರು. 

ಲಕ್ಷ್ಮಮ್ಮ
ಲಕ್ಷ್ಮಮ್ಮ
ಉಮೇಶ್ ಪಾಟೀಲ್
ಉಮೇಶ್ ಪಾಟೀಲ್

ಕುಸಿದ ಬಿದ್ದ ಮನೆಗೆ ಬಂದ ₹ 50000 ಪರಿಹಾರದ ಹಣ ಪಡೆದಿಲ್ಲ. ಮನೆ ಕಟ್ಟಿಸಿಕೊಡುವಂತೆ ಅರ್ಜಿ ಸಲ್ಲಿಸಲಾಗಿದೆ. ಅಧಿಕಾರಿಗಳು ಇದ್ದವರೆಗೆ ಮನೆ ನೀಡುತ್ತಾರೆ ನಮ್ಮಂತಹ ದಿಕ್ಕಿಲ್ಲದವರಿಗೆ ಮನೆ ನೀಡುತ್ತಿಲ್ಲ ಲಕ್ಷ್ಮಮ್ಮ ಸಂತ್ರಸ್ತ ಮಹಿಳೆ ಮಳೆ ಗಾಳಿಯಿಂದ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಲಾಗಿದೆ. ದಾಖಲೆ ಸರಿ‌ ಇಲ್ಲದ ಮನೆಗೆ ಪರಿಹಾರ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಹುಸೇನ್ ಸರಕಾವಸ್ ತಹಶೀಲ್ದಾರ್ ಮಳೆಯಿಂದ ಮನೆ ಕಳೆದುಕೊಂಡವರಿಗೆ ₹ 5 ಲಕ್ಷದವರೆಗೆ ಪರಿಹಾರ ನೀಡಲು ಅವಕಾಶವಿದೆ. ತಾಲ್ಲೂಕಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಹುತೇಕ ಫಲಾನುಭವಿಗಳಿಗೆ ಪರಿಹಾರ ದೊರೆತಿಲ್ಲ. ಈ ಬಗ್ಗೆ ರೈತ ಸಂಘ ಹೋರಾಟ ಕೈಗೊಳ್ಳಲಿದೆ

ಉಮೇಶ್ ಪಾಟೀಲ್ ರಾಜ್ಯ ಸಂಚಾಲಕ ರೈತ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT